ಭಾರತದ ಕಡಲ ತೀರದ ರಾಜ್ಯವಾಗಿ ವಿಶ್ವದಲ್ಲಿಯೇ ಬೀಚ್ ಟೂರಿಸಂಗೆ ಹೆಸರಾಗಿರುವ ಗೋವಾ ಯಾರಿಗೆ ತಾನೇ ಗೊತ್ತಿಲ್ಲ ?

ಪ್ರತಿ ನಿತ್ಯ ದೇಶಿಯ ಪ್ರವಾಸಿಗರ ಜತೆಗೇ ಜಗತ್ತಿನ ವಿವಿಧ ದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಗೋವಾಕ್ಕೆ ಬರುತ್ತಾರೆ. ಗೋವಾದಲ್ಲಿರುವ 120 ಕ್ಕೂ ಅಧಿಕ ಕಡಲ ತೀರಗಳು ಪ್ರವಾಸಿಗರಿಂದ ಕಿಕ್ಕಿರಿದಿರುತ್ತದೆ. ವಿದೇಶಿಯರು ಸಮುದ್ರಕಿನಾರೆಯಲ್ಲಿ ಸೂರ್ಯನ ಶಾಖಕ್ಕೆ ಮೈಯೊಡ್ಡಿ ಬಿಸಿಲು ಕಾಯಿಸುತ್ತಿರುವ ದೃಶ್ಯ ಗೋವಾದಲ್ಲಿ ಸಾಮಾನ್ಯ.

ಕ್ರೈಸ್ತ ಸಮುದಾಯದ ಅನೇಕ ಧಾರ್ಮಿಕ ಕೇಂದ್ರಗಳನ್ನು, ಚರ್ಚ್ ಗಳಿಗೆ ವಿಶ್ವದಲ್ಲಿಯೇ ಹೆಸರುವಾಸಿಯಾದ ಗೋವಾ, ಹಿಂದೂಗಳಿಗೂ ಅನೇಕ ದೇವಾಲಯಗಳ ಮೂಲಕ ಭಕ್ತಿ ಭಾವನೆ ಸಹಿತ ಸಂದರ್ಶನಕ್ಕೆ ಅವಕಾಶ ಕಲ್ಪಿಸಿದೆ.

ಇಂಥ ಗೋವಾಕ್ಕೆ ಇತ್ತೀಚಿಗೆ ತೆರಳಿದ ಸಂದರ್ಭ ಇಲ್ಲಿನ ಪ್ರವಾಸಿ ತಾಣದಲ್ಲಿರುವ ಮಾಹಿತಿ ಫಲಕದಲ್ಲಿನ ಬರಹವೊಂದು ಗಮನ ಸೆಳೆಯಿತು.

ಸ್ಥಳೀಯರ ಭಾವನೆಗಳನ್ನು ಗೌರವಿಸಿ ಎಂದು ಫಲಕದಲ್ಲಿ ಬರಹವಿದ್ದರೆ, ಅದೇ ಫಲಕದಲ್ಲಿ ಈ ಪ್ರವಾಸಿ ತಾಣಕ್ಕೆ ಸ್ಥಳೀಯರಿಗೆ ಅಂದರೆ ಗೋವಾ ನಾಗರಿಕರಿಗೆ ಪ್ರವೇಶ ಉಚಿತ, ಗೋವಾದವರು ಅಲ್ಲದವರು ಶುಲ್ಕ ಪಾವತಿಸಿ ಎಂಬ ಬರಹವಿತ್ತು.

ಇದು ಏನನ್ನು ಸೂಚಿಸುತ್ತದೆ ?

ಗೋವಾದಲ್ಲಿ ಕೂಡ ಪ್ರವಾಸಿಗರಿಂದ ಸ್ಥಳೀಯರಿಗೆ ಸಮಸ್ಯೆ ಸೃಷ್ಟಿಯಾಗುತ್ತಿದೆ. ಅನೇಕ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಮೋಜು ಮಸ್ತಿಯಿಂದ ಸ್ಥಳೀಯರಿಗೆ ಕಿರಿಕಿರಿ ಸಾಮಾನ್ಯವಾಗಿದೆ. ಅದರಲ್ಲಿಯೂ ಮುಖ್ಯವಾಗಿ ಕತ್ತಲಾದೊಡನೇ ರಂಗೇರುವ ಗೋವಾದಲ್ಲಿ ರಾತ್ರಿಯಿಡೀ ಆಯೋಜಿಸಲ್ಪಡುವ ಕಡಲ ತೀರದ ಪಾರ್ಟಿಗಳಿಂದಾಗಿ ಆ ವ್ಯಾಪ್ತಿಯಲ್ಲಿ ವಾಸವಿರುವ ನಾಗರಿಕರಿಗೆ ವಿಪರೀತ ಶಬ್ದದಿಂದ ತೀವ್ರ ಸಮಸ್ಯೆಯಾಗುತ್ತಿದೆ.

ಪ್ರವಾಸಿ ತಾಣಗಳಿಗೆ ಬರುವ ಮಂದಿ ಅಲ್ಲಿ ಶುಚಿತ್ವ ಕಾಪಾಡದೇ ಸ್ಥಳವನ್ನು ಮಾಲಿನ್ಯ ಮಾಡುವುದು, ಕಿರುಚುವುದು, ಫೆÇೀಟೋ ಕ್ಲಿಕ್ಕಿಸುವ ನೆಪದಲ್ಲಿ ಬೇರೆಯವರ ಖಾಸಗಿತನಕ್ಕೆ ತೊಂದರೆಯುಂಟು ಮಾಡುವುದು, ರೀಲ್ಸ್ ಚಿತ್ರಿಸುವ ಸಂದರ್ಭ ಹುಚ್ಚುಚ್ಚಾಗಿ ವರ್ತಿಸುವುದು. ಹೀಗೆ ಒಂದೇ ಎರಡೇ...

ಇದರಿಂದಾಗಿ ಸ್ಥಳೀಯರು ಬೇಸತ್ತು ಪ್ರವಾಸಿಗರ ಜತೆ ವಾಗ್ವಾದಕ್ಕಿಳಿಯುವ ಪ್ರಕರಣಗಳು ಹೆಚ್ಚಾಗುತ್ತಾ ಹೋದದ್ದು, ಪ್ರವಾಸಿಗರು ಬರುವುದೇ ಬೇಡ ಎಂಬ ಭಾವನೆ ಸ್ಥಳೀಯರಲ್ಲಿ ಹೆಚ್ಚತೊಡಗಿದ್ದು ಕೂಡ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಯಿತಂತೆ.

ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿದ ಗೋವಾ ಪ್ರವಾಸೋದ್ಯಮ ಇಲಾಖೆ, ಗೋವಾದ ಪ್ರವಾಸಿ ತಾಣಗಳಲ್ಲಿ ಆ ಪ್ರವಾಸಿ ತಾಣದ ಮಾಹಿತಿಯನ್ನು ಪ್ರಕಟಿಸುವ ಸಂದರ್ಭ ಸ್ಥಳೀಯರ ಭಾವನೆಗಳಿಗೆ ಗೌರವ ನೀಡಿ. ಸ್ಥಳೀಯರನ್ನು ಗೌರವದಿಂದ ಕಾಣಿ. ನೀವು ಪ್ರವಾಸಿಗರು ಮಾತ್ರವμÉ್ಟೀ. ಇವತ್ತು ಇಲ್ಲಿಗೆ ಬರುತ್ತೀರಿ, ನಾಳೆ ಇಲ್ಲಿಂದ ತೆರಳುತ್ತೀರಿ. ಎμÁ್ಟದರೂ ನೀವೆಲ್ಲಾ ಪ್ರವಾಸಿಗರು ಮಾತ್ರ. ಸ್ಥಳೀಯರೇ ಗೋವಾದ ನಿಜವಾದ ಆಸ್ತಿ. ಹೀಗಾಗಿ ಸ್ಥಳೀಯರ ಖಾಸಗಿತನಕ್ಕೆ ಧಕ್ಕೆ ತಾರದೇ ಸ್ಥಳೀಯರ ಭಾವನೆಗಳನ್ನು ಗೌರವಿಸಿ ಎಂದು ಸೂಚ್ಯವಾಗಿ ತಿಳಿಸುವ ಪ್ರಯತ್ನ ಕೈಗೊಂಡಿತು.

ಪ್ರವಾಸಿ ತಾಣಗಳಲ್ಲಿ ಮೋಜು ಮಸ್ತಿ ಹೆಸರಲ್ಲಿ ತಂಟೆ ತಕರಾರು ಮಾಡುವ ಕಿಡಿಗೇಡಿ ಪ್ರವಾಸಿಗರಿಗೂ ಈ ಫಲಕ ಎಚ್ಚರಿಕೆ ನೀಡಿದಂತಿದೆ. ನೀವು ಸ್ಥಳೀಯರ ಬಾವನೆ ಗೌರವಿಸದೇ ಹೋದಲ್ಲಿ, ಯಾವುದೇ ಸಮಸ್ಯೆಯಾದರೂ ನೀವೇ ಜವಾಬ್ದಾರರು ಎಂಬ ಸೂಕ್ಷ್ಮ ಎಚ್ಚರಿಕೆ ಇದಾಗಿದೆ.

ಅಂತೆಯೇ ಮತ್ತೊಂದು ಅಂಶ ಗಮನಿಸಿ.

ಗೋವಾದ ಪ್ರವಾಸಿ ತಾಣಗಳಿಗೆ ಸ್ಥಳೀಯರಿಗೆ ಪ್ರವೇಶ ಉಚಿತವಾಗಿದೆ, ಇದೇಕೇಹೀಗೆ ?

ಯಾಕೆಂದರೆ, ಈ ತಾಣಗಳು ಪ್ರವಾಸಿಗರಿಗೆ ಮಾತ್ರ ಶುಲ್ಕ ನೀಡಿ ಸಂದರ್ಶನಕ್ಕೆ ಅವಕಾಶ ಕಲ್ಪಿಸಿದೆ. ಈ ತಾಣದ ವ್ಯಾಪ್ತಿಯ ಹೊರಗಿನವರು ಶುಲ್ಕ ನೀಡಿ ಪ್ರವೇಶ ಪಡೆಯಬೇಕು. ಇದರಿಂದ ಏನು ಉಪಯೋಗ ಎಂದರೆ, ಸ್ಥಳೀಯರಿಗೆ ಈ ಪ್ರವಾಸಿ ತಾಣ ನಮ್ಮದು. ಇದರ ಸಂರಕ್ಷಣೆ ನಮ್ಮದೇ ಎಂಬ ಬಾವನೆ ಬಂದಿದೆ. ಈ ತಾಣಗಳಿಗೆ ಸ್ಥಳೀಯರೂ ಪ್ರವೇಶಕ್ಕೆ ಶುಲ್ಕ ನೀಡಿ ಬರಬೇಕು ಎಂದಾದಾಗ ಸ್ಥಳೀಯರಿಗೆ ಬೇಕಿದ್ದರೆ ಇದರ ಸಂರಕ್ಷಣೆಯನ್ನು ಪ್ರವಾಸೋದ್ಯಮ ಇಲಾಖೆ, ಸರ್ಕಾರ ಮಾಡಿಕೊಳ್ಳಲಿ ಎಂದು ಅನ್ನಿಸುವುದು ಸಹಜವಾಗಿತ್ತು. ಆದರೆ ಈಗ ಉಚಿತ ಪ್ರವೇಶ ಇರುವುದರಿಂದಾಗಿ ಸ್ಥಳೀಯರ ಪಾಲಿಗೆ ಗೋವಾದ ಪ್ರವಾಸಿ ತಾಣಗಳು ತಮ್ಮದೇ ತಾಣ ಎಂಬ ಭಾವನೆ ಸೃಷ್ಟಿಸಿ ಎಲ್ಲಾ ತಾಣಗಳನ್ನೂ ಕಾಳಜಿಯಿಂದ ನೋಡಿಕೊಳ್ಳಲು ಸಾಧ್ಯವಾಗಿದೆ.

ಗೋವಾದ ಈ ಪ್ರವಾಸಿ ನೀತಿಯನ್ನೇ ಕೊಡಗಿನ ಪ್ರವಾಸಿ ತಾಣಗಳಿಗೂ ಅನ್ವಯಿಸಿದರೆ ಹೇಗೆ ?

- ಸ್ಥಳೀಯರ ಭಾವನೆ ಗೌರವಿಸಿ ಎಂದಾಗ ಪ್ರವಾಸಿಗರು ಕೊಡಗಿನ ಸಂಸ್ಕøತಿ, ಆಚಾರ, ವಿಚಾರಗಳನ್ನು ಖಂಡಿತಾ ಗೌರವಿಸಲು ಈ ಬರಹ ಪ್ರೇರಣೆಯಾಗುತ್ತದೆ. ಸ್ಥಳೀಯವಾಗಿ ಸ್ವಚ್ಚತೆ ಕಾಪಾಡಿಕೊಂಡು, ಸ್ಥಳೀಯರ ಹಕ್ಕಾಗಿರುವ ಸಂಸ್ಕøತಿ ಸಂರಕ್ಷಣೆಯಲ್ಲಿ ಪ್ರವಾಸಿಗರೂ ಪಾಲುದಾರರಾಗಿ ಎಂಬ ಪ್ರಬಲ ಸಂದೇಶ ರವಾನೆಯಾದಂತಾಗುತ್ತದೆ. ದೇವರಕಾಡು , ಸ್ಥಳೀಯ ದೇವಾಲಯಗಳೂ ಸೇರಿದಂತೆ ಪ್ರವಾಸಿಗರು ಸಿಕ್ಕಸಿಕ್ಕಲ್ಲಿ ನುಗ್ಗಿ ಮಾಲಿನ್ಯ ಮಾಡುವುದಕ್ಕೆ ಕೊಂಚ ಮಟ್ಟಿಗಾದರೂ ಈ ಎಚ್ಚರಿಕೆಯ ಬರಹ ಪೂರಕವಾಗಬಹುದು. ಫಲಕದಲ್ಲಿಯೇ ಈ ಅಂಶ ಇರುವುದರಿಂದಾಗಿ ಪ್ರವಾಸಿಗರಲ್ಲಿಯೂ ಸ್ಥಳೀಯರ ಕಾಳಜಿಯ ಹೊಣೆಗಾರಿಕೆ ನಮ್ಮದು ಎಂಬ ಭಾವನೆ ಬರಲು ಸಾಧ್ಯವಿದೆ. ಸ್ಥಳೀಯರ ಬಾವನೆಯನ್ನು ಗೌರವಿಸುವ ಮೂಲಕ ನಿಮ್ಮನ್ನು ನೀವು ಗೌರವಿಸಿ ಎಂಬ ಸಂದೇಶಕ್ಕೂ ಈ ಬರಹ ಕಾರಣವಾಗುವ ಸಾಧ್ಯತೆಯಿದೆ.

ಸ್ಥಳೀಯರಿಗೆ ಉಚಿತ ಪ್ರವೇಶದ ನಿಯಮ ಜಾರಿಗೊಳಿಸಿದಾಗ. ಮಡಿಕೇರಿ ನಿವಾಸಿಗಳು ರಾಜಾಸೀಟ್, ಅರಮನೆ, ಗದ್ದಿಗೆ, ಮತ್ತಿತರ ಕಡೆ ಉಚಿತ ಪ್ರವೇಶ ಪಡೆಯಬಹುದು. ಆಧಾರ್ ಕಾರ್ಡ್ ಪ್ರದರ್ಶಿಸಿ ಪ್ರವೇಶದ್ವಾರದಲ್ಲಿಯೇ ಉಚಿತ ಪ್ರವೇಶ ಪಡೆಯಲು ಸಾಧ್ಯವಿದೆ.

ನಮ್ಮೂರಿನ ಪ್ರವಾಸಿ ತಾಣಕ್ಕೆ ನಾವೇ ಟಿಕೇಟ್ ಕೊಟ್ಟು ಪ್ರವೇಶಿಸಬೇಕೇ ಎಂಬ ಸ್ಥಳೀಯರ ಮನದಲ್ಲಿರುವ ಅವ್ಯಕ್ತ ಅಸಮಾಧಾನದ ನಿವಾರಣೆಗೂ ಇದು ಕಾರಣವಾಗಬಲ್ಲದು. ಮಡಿಕೇರಿ ನಾಗರಿಕರು ಮಡಿಕೇರಿ ವ್ಯಾಪ್ತಿಯ ಪ್ರವಾಸಿ ತಾಣಗಳಿಗೆ, ಕೆ ನಿಡುಗಣೆ ವ್ಯಾಪ್ತಿಯ ನಾಗರಿಕರು ಅಬ್ಪಿಫಾಲ್ಸ್‍ಗೆ, ಕುಶಾಲನಗರ ವ್ಯಾಪ್ತಿಯ ನಾಗರಿಕರು ನಿಸರ್ಗಧಾಮ, ಹಾರಂಗಿ ಜಲಾಶಯಕ್ಕೆ, ನಂಜರಾಯಪಟ್ಟಣ ವ್ಯಾಪ್ತಿಯ ಸಾರ್ವಜನಿಕರು ದುಬಾರೆಗೆ, ಹೀಗೆ ಆಯಾಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಪ್ರವಾಸಿ ತಾಣಗಳಿಗೆ ಆಯಾ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರಿಗೆ ಉಚಿತ ಪ್ರವೇಶಾವಕಾಶ ಕಲ್ಪಿಸುವ ನಿಟ್ಟಿನಲ್ಲಿಯೂ ಚಿಂತನೆಗೆ ಸೂಕ್ತ ಕಾಲವಿದು.

ಹೀಗಾದಾಗ, ಪ್ರವಾಸಿ ತಾಣಗಳ ಸಂರಕ್ಷಣೆ ಕೂಡ ನಮ್ಮದು ಎಂಬ ಭಾವನೆ ಸ್ಥಳೀಯರಲ್ಲಿ ಉಂಟಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ತಾಣ, ಈ ನೆಲ, ಈ ಪರಿಸರ ನಮ್ಮದು, ನಮಗೆ ಸೇರಿದ್ದು ಎಂಬ ಮನಪೂರ್ವಕ ಭಾವನೆ ಬರುತ್ತದೆ.

ಭವಿಷ್ಯದಲ್ಲಿ ಸ್ಥಳೀಯರು ಮತ್ತು ಪ್ರವಾಸಿಗರ ನಡುವಿನ ಅಸಮಾಧಾನಗಳ ಕಂದಕವನ್ನು ಮುಚ್ಚಲು ಇಂತಹ ದಿಟ್ಟ ನಿರ್ಧಾರಗಳ ಅಗತ್ಯ ಕೊಡಗು ಜಿಲ್ಲೆಯ ಮಟ್ಟಿಗೂ ಇದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಹೋಟೇಲ್, ರೆಸ್ಟೋರೆಂಟ್ ಅಸೋಸಿಯೇಷನ್ ಚಿಂತನೆ ನಡೆಸ ಬೇಕಾಗಿದೆ. ಒಂದು ಬರಹ ಸಾಕಷ್ಟು ಪರಿಣಾಮ ಬೀರಬಲ್ಲದು. ಹೀಗಾಗಿ ಕೊಡಗಿನ ಪ್ರವಾಸಿ ತಾಣಗಳಿಗೂ ಇಂಥ ಬರಹಗಳ ಫಲಕ ಅತ್ಯಗತ್ಯ.

- ಅನಿಲ್ ಹೆಚ್.ಟಿ.