ಕೊಯನಾಡು, ಏ. ೨: ಇಲ್ಲಿನ ಸುನ್ನಿ ಮುಸ್ಲಿಂ ಜುಮ್ಮಾ ಮಸೀದಿ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಬುಲುಸ್ಸಲಾಂ ಮದ್ರಸ ಪ್ರಾರಂಭೋತ್ಸವವು ಮದ್ರಸ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಜಮಾಅತ್ ಅಧ್ಯಕ್ಷರಾದ ಹಾಜಿ ಎಸ್. ಮೊಯಿದಿನ್ ಅಧ್ಯಕ್ಷತೆ ವಹಿಸಿದ್ದರು. ಮದ್ರಸ ಅಧ್ಯಾಪಕರಾದ ನೌಶಾದ್ ಫಾಳಿಲಿ ಅತಿಥಿಗಳನ್ನು ಸ್ವಾಗತಿಸಿ, ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು. ಸುನ್ನಿ ಮುಸ್ಲಿಂ ಜುಮ್ಮಾ ಮಸೀದಿ ಪ್ರಭಾರ ಖತೀಬ್ ಹನೀಫ್ ರಹಮಾನಿ ಕೊಂಡAಗೇರಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮದ್ರಸ ಶಿಕ್ಷಣದ ಮಹತ್ವವನ್ನು ವಿವರಿಸಿದರು.

ನುಸ್ರತುಲ್ ಇಸ್ಲಾಂ ಅಸೋಸಿಯೇಶನ್ ಅಧ್ಯಕ್ಷರಾದ ಹನೀಫ್ ಎಸ್.ಪಿ. ಪ್ರಾಸ್ತಾವಿಕವಾಗಿ ಮಾತನಾಡಿ, ಜ್ಞಾನದ ಅಕ್ಷರಗಳು ಸ್ವರ್ಗದ ದಾರಿದೀಪಗಳಂತಿವೆ. ಮದ್ರಸ ಶಿಕ್ಷಣವು ಇಸ್ಲಾಮಿಕ್ ಮೌಲ್ಯಗಳನ್ನು ಉಳಿಸುವುದರ ಜೊತೆಗೆ ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುತ್ತದೆ ಎಂದು ಹೇಳಿದರು.

ಅಧ್ಯಕ್ಷೀಯ ಭಾಷಣದಲ್ಲಿ ಹಾಜಿ ಎಸ್. ಮೊಯಿದಿನ್ ಅವರು, ಇಸ್ಲಾಮಿಕ್ ತತ್ವಗಳು, ಖುರಾನ್‌ನ ಆಳವಾದ ಜ್ಞಾನ ಮತ್ತು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ನೈತಿಕ ಮೌಲ್ಯಗಳನ್ನು ಮದ್ರಸ ಶಿಕ್ಷಣದ ಮೂಲಕ ಕಲಿಯಬಹುದು ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆಯೂ ನಡೆಯಿತು. ಸಮಸ್ತ ಕೇರಳ ಸುನ್ನಿ ವಿದ್ಯಾಭ್ಯಾಸ ಬೋರ್ಡ್ ನಡೆಸಿದ ೨೦೨೫-೨೬ನೇ ಸಾಲಿನ ಸಾರ್ವಜನಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಸುಬುಲು ಸ್ಸಲಾಂ ಮದ್ರಸದ ಐದು ವಿದ್ಯಾರ್ಥಿಗಳಿಗೆ ಕೊಯನಾಡು ಯೂತ್ ಫ್ರೆಂಡ್ಸ್ ವತಿಯಿಂದ ಸ್ಮರಣಿಕೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಜಮಾಅತ್ ಮಾಜಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ಎಸ್.ಎ, ಸದಸ್ಯರಾದ ಅಬ್ದುಲ್ಲಾ ಸೇರಿದಂತೆ ಇನ್ನಿತರ ಸದಸ್ಯರು, ಪೋಷಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.