ಶನಿವಾರಸಂತೆ, ಏ. ೨: ಮಕ್ಕಳ ಭವಿಷ್ಯ ಆರಂಭವಾಗುವುದೇ ಆ ಮಕ್ಕಳು ಯಾವ ಶಾಲೆಯಲ್ಲಿ ಕಲಿಯುತ್ತಾರೆ...ಹಾಗೂ ಕಲಿಕೆಯ ತಳಪಾಯ ಹೇಗಿದೆ ಎಂಬ ಆಧಾರದಡಿಯಲ್ಲಿ ಎಂದು ಮಡಿಕೇರಿ ಕ್ವೀನ್ಸ್ ಅಕಾಡೆಮಿ ಮುಖ್ಯಸ್ಥರಾದ ರಾಣಿ ಅಂತೋಣಿ ಅಭಿಪ್ರಾಯ ವ್ಯಕ್ತಪಡಿಸಿದರು.

ಸಮೀಪದ ಆಲೂರುಸಿದ್ದಾಪುರದ ಶಾರದಾ ಅಕಾಡೆಮಿ ಅದಿತಿ ಲಿಟ್ಲ್ ಫೀಟ್ಸ್ ಕಿಂಡರ್‌ಗಾರ್ಟೆನ್ ಶಾಲೆಯಲ್ಲಿ ನಡೆದ ಯುಕೆಜಿ ಮಕ್ಕಳ ಬೀಳ್ಕೊಡುಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಕಲಿತಷ್ಟು ಕಡಿಮೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದ್ದು, ಶಾರದಾ ಅಕಾಡೆಮಿ ಸಂಸ್ಥಾಪಕಿ ರೀನಾ ಅವರ ಸತತ ಪರಿಶ್ರಮದಿಂದ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಯಾವುದೇ ಫಲಾಪೇಕ್ಷೆಯಿಲ್ಲದೇ ಮಕ್ಕಳು ಉತ್ತಮ ವಿದ್ಯಾವಂತರಾಗಬೇಕು ಎಂಬ ದೃಷ್ಟಿಯಲ್ಲಿ ಶಾಲೆ ಆರಂಭ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಮುಖ್ಯ ಅತಿಥಿ ಉದ್ಯಮಿ ಜಯಕುಮಾರ್ ಮಾತನಾಡಿ, ಶಾಲೆ ಇತ್ತೀಚೆಗೆ ಆರಂಭವಾಗಿದ್ದರೂ ಗುಣಮಟ್ಟದ ಶಿಕ್ಷಣ ಹಾಗೂ ಮಕ್ಕಳ ಉತ್ತಮ ಕಲಿಕೆಯಿಂದಾಗಿ ಪ್ರಗತಿ ಸಾಧಿಸುತ್ತಿದೆ. ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.

ಆರೋಗ್ಯ ಕೇಂದ್ರದ ನಮಿತಾ ಮಾತನಾಡಿ, ಅಕಾಡೆಮಿ ಸ್ಥಾಪನೆ ಮಾಡುವುದರೊಂದಿಗೆ ಪುಟ್ಟ ಮಕ್ಕಳನ್ನು ತಿದ್ದಿ, ತೀಡಿ ಪ್ರತಿಭಾವಂತರಾಗಿ ಮಾಡುವ ಜವಾಬ್ದಾರಿ ತೆಗೆದುಕೊಂಡು ರೀನಾ ದೊಡ್ಡ ಸಾಹಸಕ್ಕೆ ಕೈಹಾಕಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷೆ ರೀನಾ ಮಾತನಾಡಿ, ಶಿಕ್ಷಕಿಯಾಗಬೇಕೆಂದು ಕಂಡಿದ್ದ ಕನಸು ನನಸಾಗಿ ಶಿಕ್ಷಣ ಸಂಸ್ಥೆ ಪ್ರಾರಂಭಿಸುವ ಉದ್ದೇಶದಿಂದ ಅಕಾಡೆಮಿ ಸ್ಥಾಪನೆ ಮಾಡಲಾಗಿದೆ. ಶಾಲೆ ಆರಂಭ ಮಾಡಿರುವುದು ಹಣ ಸಂಪಾದನೆಗಲ್ಲ; ಉತ್ತಮ ವಿದ್ಯಾವಂತರನ್ನು ಸಮಾಜಕ್ಕೆ ಕೊಡುಗೆ ಕೊಡುವ ಉದ್ದೇಶ ನನ್ನದಾಗಿದೆ ಎಂದರು.

ಶಿಕ್ಷಕಿಯರಾದ ಅಂಕಿತಾ, ಜೆ,ಡಿ ಲಲಿತಮ್ಮ, ಕೆ.ಜೆ.ಡಯಾನಾ, ಮೊದಲಾದವರು ಹಾಜರಿದ್ದರು.