ಶ್ರೀಮಂಗಲ, ಏ. ೨: ಸರ್ಕಾರದ ಯಾವುದೇ ಅನುದಾನ ಹಾಗೂ ಸಹಕಾರವಿಲ್ಲದೆ ಕೊಡವ ಸಾಹಿತ್ಯ ಲೋಕದ ಬೆಳವಣಿಗೆಯಲ್ಲಿ ಅತಿ ಹೆಚ್ಚಿನ ಸಾಧನೆ ಮಾಡಿರುವ ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಕಾರ್ಯ ಶ್ಲಾಘನೀಯ ಎಂದು ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಹೇಳಿದರು.
ಕೊಡವ ತಕ್ಕ್ ಎಳ್ತ್ಕಾರಡ ಕೂಟ ಹಾಗೂ ಪೊನ್ನಂಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಜಂಟಿ ಆಶ್ರಯದಲ್ಲಿ ಪೊನ್ನಂಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ವಿಶೇಷ ಕೊಡವ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಪ್ರಸ್ತುತ ಓದುಗರು ಕಡಿಮೆಯಾಗಿರುವುದರಿಂದ ಸಾಹಿತ್ಯ ಲೋಕ ಕ್ಷೀಣಿಸುತ್ತಿದೆ. ಇದು ಒಳ್ಳೆಯ ಲಕ್ಷಣವಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಪುಸ್ತಕ ಭಂಡಾರವನ್ನು ಸ್ಥಾಪಿಸಿದ್ದು, ಕೊಡವ ಭಾಷೆಯ ಹಾಗೂ ಕೊಡಗಿಗೆ ಸಂಬAಧಿಸಿದ ೧೨೦೦ ಪುಸ್ತಕಗಳ ಸಂಗ್ರಹವಿದೆ, ಆಸಕ್ತರು ಕಚೇರಿ ಸಮಯದಲ್ಲಿ ಪುಸ್ತಕಗಳನ್ನು ಪಡೆದು ಓದಿದ ನಂತರ ಹಿಂತಿರುಗಿಸಬಹುದು. ಎಲ್ಲರೂ ಪುಸ್ತಕ ಓದಿ ಕೊಡವ ಸಾಹಿತ್ಯ ಬೆಳವಣಿಗೆಗೆ ಸಹಕರಿಸಬೇಕೆಂದು ಕರೆ ನೀಡಿದರು.
ಮತ್ತೋರ್ವ ಮುಖ್ಯ ಅತಿಥಿ ಪೊನ್ನಂಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಇಟ್ಟೀರ ಕಮಲಾಕ್ಷಿ ಬಿದ್ದಪ್ಪ ಮಾತನಾಡಿ, ಓದುಗರು ಹಾಗೂ ಬರಹಗಾರರು ಕಡಿಮೆಯಾಗುತ್ತಿರುವ ಈ ಕಾಲದಲ್ಲಿ ಕೊಡವ ತಕ್ಕ್ ಎಳ್ತ್ಕಾರಡ ಕೂಟವು ಲೇಖಕರನ್ನು ಪ್ರೋತ್ಸಾಹಿಸಿ ಇಷ್ಟೊಂದು ಪುಸ್ತಕಗಳನ್ನು ಹೊರತಂದಿರುವ ಕಾರ್ಯ ಪ್ರಶಂಸನೀಯವಾದದ್ದು ಹಾಗೂ ಪುಸ್ತಕ ಪ್ರಕಟಣೆಗೆ ಹಣದಾನ ನೀಡುತ್ತಿರುವ ದಾನಿಗಳ ಅಭಿಮಾನ ಮೆಚ್ಚುವಂತದ್ದು ಎಂದರು.
ದಾನಿಗಳಾದ ಅಂಜಪರವAಡ ಸನ್ನಿ ತಮ್ಮಯ್ಯ ಮಾತನಾಡಿ, ಕೊಡವ ಸಾಹಿತ್ಯಾಭಿಮಾನಿಗಳು ಹೆಚ್ಚು ಸಾಹಿತ್ಯ ಪುಸ್ತಕ ಪ್ರಕಟಿಸಲು ಹಾಗೂ ಇಂತಹ ಸಾಹಿತ್ಯ ಪರ ಕಾರ್ಯ ನಡೆಸಲು ಮುಂದೆ ಬರಬೇಕು ಎಂದರು.
ಮತ್ತೋರ್ವ ದಾನಿ ಮಲ್ಲಮಾಡ ಶ್ಯಾಮಲ ಸುನಿಲ್ ಮಾತನಾಡಿ, ಇಂದು ಎಲ್ಲರಲ್ಲೂ ಮೊಬೈಲ್ ಗೀಳು ಹೆಚ್ಚಾಗಿ ಬರೆಯುವವರ ಸಂಖೈ ತೀರಾ ಕಡಿಮೆಯಾಗಿದೆ. ಓದುಗರನ್ನು ಒತ್ತಾಯ ಮಾಡಿ ಓದಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
೧೯೮ನೇ ಪುಸ್ತಕ ಪ್ರಕಟಣೆಯ ದಾನಿ ಪೊನ್ನೊಲತಂಡ ಸೋಮಣ್ಣ ಮಾತನಾಡಿ, ಯುವ ಜನಾಂಗಕ್ಕೆ ಕೊಡವ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಆಸಕ್ತಿ ಹಾಗೂ ಅಭಿಮಾನ ಹುಟ್ಟಿಸುವ ನಿಟ್ಟಿನಲ್ಲಿ ಕೂಟ ಉತ್ತಮ ಪ್ರಯತ್ನ ಮಾಡುತ್ತಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ, ಕೊಡವ ಭಾಷೆಯನ್ನು ೮ನೇ ಪರಿಚ್ಛೇದಕ್ಕೆ ಸೇರಿಸುವ ಹಾಗೂ ಭಾಷಾ ಅಲ್ಪಸಂಖ್ಯಾತ ಸ್ಥಾನಮಾನ ಪಡೆಯುವ ಪ್ರಯತ್ನಕ್ಕೆ ಪೂರಕವಾಗಿ ಹೆಚ್ಚು ಸಾಹಿತ್ಯ ಪುಸ್ತಕಗಳನ್ನು ಹೊರತರಬೇಕಿದ್ದು, ಕೂಟ ಈ ನಿಟ್ಟಿನಲ್ಲಿ ವಿವಿಧ ಸಾಹಿತ್ಯ ಪ್ರಕಾರಗಳ ಹೆಚ್ಚು ಪುಸ್ತಕಗಳನ್ನು ಹೊರತರಲು ಪ್ರಯತ್ನಿಸುತ್ತಿದೆ ಎಂದರು.
೧೯೭ನೇ ಪುಸ್ತಕದ ಲೇಖಕಿ ಉಳುವಂಗಡ ಕಾವೇರಿ ಉದಯ, ೧೯೮ನೇ ಪುಸ್ತಕದ ಲೇಖಕಿ ನೂರೇರ ಸರಿತ ಉತ್ತಯ್ಯ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯರಾದ ಡಾ. ಕಾಳಿಮಾಡ ಶಿವಪ್ಪ, ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಪಾರುವಂಗಡ ಸನ್ನಿ ಮಾಸ್ಟರ್, ಇಟ್ಟೀರ ಬಿದ್ದಪ್ಪ, ಕಾಟಿಮಾಡ ಡಿಕ್ಕಿ ಸೇರಿದಂತೆ ಸಾಹಿತ್ಯಾಭಿಮಾನಿಗಳು ಭಾಗವಹಿಸಿದ್ದರು.
ಪೊನ್ನಂಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಸದಸ್ಯೆ ಕಳ್ಳಿಚಂಡ ದೀನ ಪ್ರಾರ್ಥಿಸಿ, ಪೊಮ್ಮಕ್ಕಡ ಕೂಟದ ಕಾರ್ಯದರ್ಶಿ ಬಲ್ಲಡಿಚಂಡ ಕಸ್ತೂರಿ ಸೋಮಯ್ಯ ಸ್ವಾಗತಿಸಿದರು. ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಉಪಾಧ್ಯಕ್ಷ ಚೆಂಬಾAಡ ಶಿವಿ ಭೀಮಯ್ಯ ಹಾಗೂ ಸದಸ್ಯೆ ಚಿಮ್ಮಚ್ಚೀರ ಪವಿತ ರಜನ್ ಲೇಖಕಿಯರ ಹಾಗೂ ದಾನಿಗಳ ಪರಿಚಯ ಮಾಡಿದರು. ಕೂಟದ ಖಜಾಂಚಿ ಬೋಡಂಗಡ ಜಗದೀಶ್ ತಿಮ್ಮಯ್ಯ ಸಾಂಸ್ಕೃತಿಕ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿದರು. ಕೂಟದ ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ನಿರೂಪಿಸಿ, ಸಹ ಕಾರ್ಯದರ್ಶಿ ಬೊಜ್ಜಂಗಡ ನಿತಿನ್ ನಂಜಪ್ಪ ವಂದಿಸಿದರು.