ಮಡಿಕೇರಿ, ಏ. ೨: ಚೆಟ್ಟಳ್ಳಿಯ ಜೋಮಾಲೆ ಕೊಡವ ಪೊಮ್ಮಕ್ಕಡ ಕೂಟದ ವತಿಯಿಂದ ಆಯೋಜಿತ ಪ್ರಥಮ ವμðದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಮೈಸೂರಿನ ಕೊಡವ ಪೊಮ್ಮಕ್ಕಡ ಕೂಟ ತಂಡವು ಚಾಂಪಿಯನ್ ಟ್ರೋಫಿ ತನ್ನದಾಗಿಸಿಕೊಂಡಿದೆ. ಪೊನ್ನಂಪೇಟೆಯ ಕೊಡವ ರೈಡರ್ಸ್ ಕ್ಲಬ್ ತಂಡವು ದ್ವಿತೀಯ ಸ್ಥಾನದೊಂದಿಗೆ ರನ್ನರ್ಸ್ ಪ್ರಶಸ್ತಿ ಪಡೆಯಿತು.

ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ಚೆಟ್ಟಳ್ಳಿ ಕೊಡವ ಸಮಾಜದ ಅಧೀನದಲ್ಲಿರುವ ಜೋಮಾಲೆ ಕೊಡವ ಪೊಮ್ಮಕ್ಕಡ ಕೂಟದ ವತಿಯಿಂದ ಆಯೋಜಿಸಲಾಗಿದ್ದ ಪ್ರಥಮ ವರ್ಷದ ಅಂತರ ಕೊಡವ ಪೊಮ್ಮಕ್ಕಡ ಥ್ರೋಬಾಲ್ ಪಂದ್ಯಾವಳಿಯ ಆಕರ್ಷಕ ಫೈನಲ್ ಪಂದ್ಯಾವಳಿಯಲ್ಲಿ ಮೈಸೂರಿನ ಕೊಡವ ಪೊಮ್ಮಕ್ಕಡ ಕೂಟ ತಂಡವು ಪೊನ್ನಂಪೇಟೆಯ ಕೊಡವ ರೈಡರ್ಸ್ ಕ್ಲಬ್ ತಂಡದ ವಿರುದ್ದ ಗೆಲುವು ಸಾಧಿಸಿತು. ಮೈಸೂರು ಹೂಟಗಳ್ಳಿಯ ಶ್ರೀ ತಲಕಾವೇರಿ ಪೊಮ್ಮಕ್ಕಡ ಕೂಟ ತಂಡವು ತೃತೀಯ ಸ್ಥಾನ ಮತ್ತು ಮಡಿಕೇರಿ ಕೊಡವ ಪೊಮ್ಮಕ್ಕಡ ಕೂಟದ ಬಿ ಟೀಮ್ ನಾಲ್ಕನೇ ಸ್ಥಾನ ತನ್ನದಾಗಿಸಿಕೊಂಡಿತು.

ಬೆAಗಳೂರು ದಾಸರಹಳ್ಳಿಯ ಪೊಮ್ಮಕ್ಕಡ ಕೂಟ ತಂಡವು ಶಿಸ್ತಿನ ತಂಡವಾಗಿ, ಪೊನ್ನಂಪೇಟೆ ಗುಂಬಳಮಾಡು ಪೊಮ್ಮಕ್ಕಡ ಕೂಟ ತಂಡವು ಉತ್ತಮ ವರ್ಣ ತಂಡವಾಗಿ ಮತ್ತು ಮೈಸೂರು ಪೊಮ್ಮಕ್ಕಡ ಕೂಟದ ಆಟಗಾರ್ತಿ ಬಾಚಂಗಡ ಶಾಹೆನ್ ಪೂವಯ್ಯ ಅತ್ಯುತ್ತಮ ಆಟಗಾರ್ತಿಯಾಗಿ ಹೊರಹೊಮ್ಮಿದರು.

ಬಹುಮಾನ ವಿತರಿಸಿ ಮಾತನಾಡಿದ ಚೆಟ್ಟಳ್ಳಿ ಕೊಡವ ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತು ಚಂಗಪ್ಪ, ಚೆಟ್ಟಳ್ಳಿಯ ಜೋಮಾಲೆ ಪೊಮ್ಮಕ್ಕಡ ಕೂಟಕ್ಕೆ ಚೆಟ್ಟಳ್ಳಿ ಕೊಡವ ಸಮಾಜ ಎಲ್ಲಾ ರೀತಿಯ ಬೆಂಬಲ ನೀಡಿದ್ದು, ಅತ್ಯುತ್ತಮ ಕಾರ್ಯನಿರ್ವಹಿಸುತ್ತಾ ಬಂದಿದೆ. ಮನೆಯಲ್ಲಿ ಬೆಳಗ್ಗಿನಿಂದ ರಾತ್ರಿವರೆಗೂ ಕುಟುಂಬ ಸದಸ್ಯರ ಕಾಳಜಿ ವಹಿಸುತ್ತಾ ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ಸಕ್ರಿಯರಾಗಿರುವ ಮಹಿಳೆಯರಿಲ್ಲದ ಮನೆಯನ್ನು ಯೋಚಿಸಲು ಸಾಧ್ಯವಿಲ್ಲ ಇಂತಹ ಮಹಿಳೆಯರು ತಮ್ಮ ಮನಸ್ಸಿನ ಸಂತೋಷಕ್ಕಾಗಿ ಪೊಮ್ಮಕ್ಕಡ ಕೂಟದಂಥ ಸಂಘ ಸ್ಥಾಪಿಸಿಕೊಂಡು ಕ್ರೀಡೆ, ಆರೋಗ್ಯ, ಮನರಂಜನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ಉತ್ಸಾಹಿ ಮಹಿಳೆಯರಿಗೆ ಸಮಾಜಬಾಂಧವರು ಸದಾ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಚೆಟ್ಟಳ್ಳಿ ಜೋಮಾಲೆ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಮುಳ್ಳಂಡ ಶೋಭಾ ಚಂಗಪ್ಪ, ಇದೇ ಮೊದಲ ಬಾರಿಗೆ ಚೆಟ್ಟಳ್ಳಿಯಲ್ಲಿ ಅಂತರ ಕೊಡವ ಪೊಮ್ಮಕ್ಕಡ ಕೂಟಗಳ ತಂಡದ ನಡುವೇ ಥ್ರೋಬಾಲ್ ಪಂದ್ಯ ಆಯೋಜಿಸಲಾಗಿತ್ತು. ರಾಜ್ಯದ ವಿವಿಧೆಡೆಗಳ ೧೬ ತಂಡಗಳು ಉತ್ಸಾಹದಿಂದ ಪಾಲ್ಗೊಂಡಿದ್ದವು. ಮೊದಲ ಪ್ರಯತ್ನಕ್ಕೇ ಉತ್ತಮ ಸ್ಪಂದನ ದೊರಕಿದ್ದು ಸಂತೋಷ ತಂದಿದೆ ಎಂದರು.

ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ದಾನಿಗಳಾದ ಬದಲೆರ ಕೌಶಿಕ್, ಮುಳ್ಳಂಡ ರತ್ತು ಚಂಗಪ್ಪ, ಮುಳ್ಳಂಡ ಪ್ರೇಮ ಅಯ್ಯಪ್ಪ, ವಿಂಧ್ಯಾ ರಂಜನ್, ಸುಶೀಲ ತಮ್ಮಯ್ಯ, ಐಚೆಟ್ಟಿರ ಚೋಂದಮ್ಮ, ಮತ್ತು ಜೋಮಾಲೆ ಪೊಮ್ಮಕ್ಕಡ ಕೂಟದ ಉಪಾಧ್ಯಕ್ಷೆ ಚೋಳಂಡ ಜ್ಯೋತಿ ನಾಣಯ್ಯ, ಕಾರ್ಯದರ್ಶಿ ಅಡಿಕೆರ ಶಾಂತಿ ಮುತ್ತಪ್ಪ, ಖಜಾಂಚಿ ಪುತ್ತರಿರ ಗಂಗು ಅಚ್ಚಯ್ಯ, ಸಹ ಕಾರ್ಯದರ್ಶಿ ಕೆಚ್ಚೆಟ್ಟಿರ ರತಿ ಕಾರ್ಯಪ್ಪ ಸರ್ವಸದಸ್ಯೆಯರು ಇದ್ದರು. ಪಂದ್ಯದ ತೀರ್ಪುಗಾರರಾಗಿ ಮಡಿಕೇರಿಯ ಬೊಳ್ಳಿಯಂಡ ವಿಕ್ರಂ, ಆಪಾಡಂಡ ಗೀತ ಅಯ್ಯಪ್ಪ, ಕಾರ್ಯನಿರ್ವಹಿಸಿದರು.