ಸೋಮವಾರಪೇಟೆ,ಏ.೧: ಮದುವೆಯಾಗಿದ್ದ ಪತಿಯನ್ನು ಪ್ರಿಯಕರ ಹಾಗೂ ಆತನ ತಾಯಿಯ ಜೊತೆಗೂಡಿ ಕೊಲೆ ಮಾಡಿ, ಮಣ್ಣಿನಡಿ ಹೂತುಹಾಕಿದ್ದ ಪ್ರಕರಣವನ್ನು ಭೇದಿಸುವಲ್ಲಿ ಶನಿವಾರಸಂತೆ ಪೊಲೀಸರು ಯಶಸ್ವಿಯಾಗಿದ್ದು, ಠಾಣೆಯಲ್ಲಿ ದಾಖಲಾಗಿದ್ದ ಮನುಷ್ಯ ಕಾಣೆ ಪ್ರಕರಣ ಇದೀಗ ಕೊಲೆಯಾಗಿ ಮಾರ್ಪಾಡಾಗಿದೆ. ಕೃತ್ಯ ನಡೆಸಿದ ಪತ್ನಿ ಸೇರಿದಂತೆ ಆಕೆಯ ಪ್ರಿಯಕರ, ಆತನ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.
ನೆರೆಯ ಹಾಸನ ಜಿಲ್ಲೆ, ಸಕಲೇಶಪುರ ತಾಲೂಕು, ಯಸಳೂರು ಹೋಬಳಿಯ ಬಾಳೆಕೆರೆ ನಿವಾಸಿ ಪುನೀತ್ (೩೪) ಎಂಬಾತನ ಶವ ಶನಿವಾರಸಂತೆಯ ಹೆಮ್ಮನೆ ಗ್ರಾಮದ ಕಾಫಿ ತೋಟದಲ್ಲಿ ಹೂಳಲಾಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ದುಷ್ಕೃತ್ಯ ನಡೆಸಿದ ಆರೋಪದ ಮೇಲೆ ಪುನೀತ್‌ನ ಪತ್ನಿ ರತ್ನ, ಪ್ರಿಯಕರ ಪ್ರವೀಣ್, ತಾಯಿ ಪಾರ್ವತಮ್ಮ ಅವರುಗಳನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ: ನೆರೆಯ ಹಾಸನ ಜಿಲ್ಲೆಯ ಯಸಳೂರು ಗ್ರಾಮದ ಪುನೀತ್ ಹಾಗೂ ರತ್ನ ವಿವಾಹವಾಗಿದ್ದು, ನಂತರ ರತ್ನ ಹಾಸನದ ಖಾಸಗಿ ಸಂಸ್ಥೆಯೊAದರಲ್ಲಿ ಕೆಲಸಕ್ಕೆ ಸೇರಿದ್ದಳು. ಕಳೆದ ೧ ವರ್ಷದ ಹಿಂದೆ ದೂರದ ಸಂಬAಧಿಯೇ ಆಗಿರುವ ಪ್ರವೀಣ್‌ನೊಂದಿಗೆ ಸ್ನೇಹ ಬೆಳೆದಿದ್ದು, ಮೊದಲನೇ ಪತಿಯನ್ನು ತೊರೆದು ಈತನೊಂದಿಗೆ ೪ಆರನೇ ಪುಟಕ್ಕೆ
(ಮೊದಲ ಪುಟದಿಂದ) ಹೆಮ್ಮನೆ ಗ್ರಾಮಕ್ಕೆ ಆಗಮಿಸಿದ್ದಳು. ಈ ವಿಚಾರ ತಿಳಿದ ಪುನೀತ್, ಹೆಮ್ಮನೆ ಗ್ರಾಮಕ್ಕೆ ಆಗಾಗ್ಗೆ ಆಗಮಿಸಿ ಪತ್ನಿ ರತ್ನ ಹಾಗೂ ಪ್ರವೀಣ್‌ನೊಂದಿಗೆ ಜಗಳ ಮಾಡುತ್ತಿದ್ದ ಎನ್ನಲಾಗಿದೆ. ಅಂತೆಯೇ ಕಳೆದ ತಾ. ೨೯.೦೩.೨೦೨೬ರಂದು ಮಧ್ಯಾಹ್ನದ ಸುಮಾರಿಗೆ ಹೆಮ್ಮನೆ ಗ್ರಾಮಕ್ಕೆ ಆಗಮಿಸಿದ ಪುನೀತ್, ಎಂದಿನAತೆ ಜಗಳವಾಡಿದ್ದಾನೆ. ಈ ಸಂದರ್ಭ ಮನೆಯಲ್ಲಿ ಗಲಾಟೆ ನಡೆದಿದ್ದು, ತೀವ್ರ ಹಲ್ಲೆಗೊಳಗಾಗಿ ಸ್ಥಳದಲ್ಲಿಯೇ ಅಸುನೀಗಿದ್ದಾನೆ.
ಇದರಿಂದ ಗಲಿಬಿಲಿಗೊಂಡ ರತ್ನ, ಪ್ರವೀಣ್ ಹಾಗೂ ಪಾರ್ವತಮ್ಮ ಅವರುಗಳು, ಶವವನ್ನು ಮನೆಯ ಸಮೀಪವಿರುವ ನಿರಂಜನ್ ಎಂಬವರಿಗೆ ಸೇರಿದ ಕಾಫಿ ತೋಟದೊಳಗೆ ಹೂತು ಹಾಕಿ ಏನೂ ನಡೆದಿಲ್ಲ ಎಂಬAತೆ ಸುಮ್ಮನಾಗಿದ್ದಾರೆ. ಇತ್ತ ಹೆಮ್ಮನೆಗೆ ತೆರಳಿದ ಪುನೀತ್, ವಾಪಸ್ ಆಗದೇ ಇರುವುದರಿಂದ ಸಂಶಯಗೊAಡ ಆತನ ಸಹೋದರಿ ಶನಿವಾರಸಂತೆ ಪೊಲೀಸ್ ಠಾಣೆಗೆ ಆಗಮಿಸಿ ನಾಪತ್ತೆ ದೂರು ದಾಖಲಿಸಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಹೆಮ್ಮನೆ ಗ್ರಾಮಕ್ಕೆ ತೆರಳಿ ಪ್ರವೀಣ್‌ನ ಮನೆಯ ಆವರಣವನ್ನು ಪರಿಶೀಲಿಸಿದ ಸಂದರ್ಭ ರಕ್ತದ ಕಲೆಗಳು ಕಂಡುಬAದಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಘಟನಾ ಸ್ಥಳಕ್ಕೆ ನಿನ್ನೆ ದಿನ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ಡಿವೈಎಸ್‌ಪಿ ಚಂದ್ರಶೇಖರ್ ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖಾಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ಆರಂಭದಲ್ಲಿ ಪುನೀತ್‌ನ ಪತ್ನಿಯನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ ಸಂದರ್ಭ ಆಕೆ ಅಸಲಿ ಕಥೆಯನ್ನು ಬಿಚ್ಚಿಟ್ಟಿದ್ದಾಳೆ. ನಂತರ ಪ್ರವೀಣ್ ಹಾಗೂ ಪಾರ್ವತಮ್ಮ ಅವರುಗಳನ್ನು ವಶಕ್ಕೆ ಪಡೆದಿದ್ದು, ಇಂದು ಕಾಫಿ ತೋಟದೊಳಗೆ ಹೂತು ಹಾಕಿದ್ದ ಪುನೀತ್‌ನ ಮೃತದೇಹವನ್ನು ಹೊರತೆಗೆಯಲಾಗಿದೆ.
ಮೃತದೇಹವನ್ನು ಮಡಿಕೇರಿಯ ಶವಾಗಾರಕ್ಕೆ ಸಾಗಿಸಿ, ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಹಸ್ತಾಂತರಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಆರಂಭದಲ್ಲಿ ಮನುಷ್ಯ ಕಾಣೆ ಎಂದು ದಾಖಲಾಗಿದ್ದ ಪ್ರಕರಣವನ್ನು ಕೊಲೆಯಾಗಿ ಮಾರ್ಪಡಿಸಿ ತನಿಖೆ ಕೈಗೊಳ್ಳಲಾಗಿದೆ. ಶನಿವಾರಸಂತೆ ಪೊಲೀಸ್ ಇನ್ಸ್ಪೆಕ್ಟರ್ ಜಿ. ಕೃಷ್ಣರಾಜು, ಪಿಎಸ್‌ಐ ಗೋವಿಂದರಾಜು, ಚಂದ್ರು, ಸೇರಿದಂತೆ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳು, ಅಪರಾಧ ಕೃತ್ಯ ಪರಿಶೀಲನಾ ತಜ್ಞರ ತಂಡದ ಕಾರ್ಯಕ್ಷಮತೆಯನ್ನು ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಶ್ಲಾಘಿಸಿದ್ದಾರೆ. ಕೊಲೆ ಮಾಡಿದ ಆರೋಪದ ಮೇರೆ ಬಂಧನಕ್ಕೊಳಗಾಗಿರುವ ರತ್ನ, ಪ್ರವೀಣ್, ಪಾರ್ವತಮ್ಮ ಅವರುಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ, ನ್ಯಾಯಾಧೀಶರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. - ವಿಜಯ್