ಮಡಿಕೇರಿ, ಏ. ೧: ಚೆಟ್ಟಳ್ಳಿಯ ಪ್ರೌಢಶಾಲಾ ಮೈದಾನದಲ್ಲಿಂದು ಮಹಿಳೆಯರ ಕಲರವ.. ಕನಿರಾ.. ಪುಡಿರಾ, ಬುಡತೆರಾ.. ಎಂಬಿತ್ಯಾದಿ ಹರ್ಷೋದ್ಘಾರಗಳ ನಡುವೆ ಕೊಡವ ಪೊಮ್ಮಕ್ಕಡ ಕೂಟ ತಂಡಗಳ ನಡುವೆ ಜರುಗಿದ ಥ್ರೋಬಾಲ್ ಪಂದ್ಯಾಟ ಮನರಂಜಿಸುವುದರೊAದಿಗೆ ಯಶಸ್ಸು ಕಂಡಿತು. ಚೆಟ್ಟಳ್ಳಿ ಕೊಡವ ಸಮಾಜದ ಅಧೀನದ ಜೋಮಾಲೆ ಪೊಮ್ಮಕ್ಕಡ ಕೂಟದ ವತಿಯಿಂದ ಅಲ್ಲಿನ ಪ್ರೌಢಶಾಲಾ ಮೈದಾನದಲ್ಲಿ ಜಿಲ್ಲೆಯ ವಿವಿಧ ಪೊಮ್ಮಕ್ಕಡ ಕೂಟ ತಂಡಗಳು ಸೇರಿದಂತೆ ಬೆಂಗಳೂರು, ಮೈಸೂರಿನಿಂದ ಪಾಲ್ಗೊಂಡಿದ್ದ ಒಟ್ಟು ೧೬ ತಂಡಗಳನ್ನು ಒಳಗೊಂಡ ಥ್ರೋಬಾಲ್ ಪಂದ್ಯಾಟದಲ್ಲಿ ಮಹಿಳೆಯರು ಉತ್ಸಾಹದಿಂದ ತೊಡಗಿಸಿಕೊಂಡಿದ್ದರು. ವಿಶೇಷವಾಗಿ ವಿವಾಹಿತ ಮಹಿಳೆಯರನ್ನು ಒಳಗೊಂಡ ಪಂದ್ಯಾಟ ಇದಾಗಿತ್ತು. ಬೆಳಿಗ್ಗೆ ಕ್ರೀಡಾಕೂಟವನ್ನು ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಅವರು ಉದ್ಘಾಟಿಸಿದರು. ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಈ ಸಂದರ್ಭ ಜೋಮಾಲೆ ಪೊಮ್ಮಕ್ಕಡ ಕೂಟದ ವತಿಯಿಂದ ಥ್ರೋಬಾಲ್ ಪಂದ್ಯಾವಳಿಯನ್ನು ಆಯೋಜಿಸಿರುವುದು ಶ್ಲಾಘನೀಯ, ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕ್ರೀಡಾಕೂಟಗಳನ್ನು ಆಯೋಜನೆ ಮಾಡುವುದರಿಂದ ಗ್ರಾಮೀಣ ಕ್ರೀಡಾಪ್ರತಿಭೆಗಳು ಬೆಳಕಿಗೆ ಬರಲು ಸಾಧ್ಯ ಎಂದರಲ್ಲದೆ ಎಲ್ಲಾ ಊರುಗಳಲ್ಲಿ ಕೊಡವ ಪೊಮ್ಮಕ್ಕಡ ಕೂಟದ ವತಿಯಿಂದ ಹಲವಾರು ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಂಡು ಬರಲಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಇದರಿಂದ ಸಮಾಜಕ್ಕೆ ಉತ್ತಮ ಸಂದೇಶ ಸಾರಿದಂತಾಗುವುದು ಎಂದರು. ಪಂದ್ಯಾವಳಿಯಲ್ಲಿ ಬೆಂಗಳೂರು ಸೇರಿದಂತೆ ಕೊಡಗಿನ ವಿವಿಧ ಕೊಡವ ಸಮಾಜಗಳ ಪೊಮ್ಮಕ್ಕಡ ಕೂಟದ ೧೬ ತಂಡಗಳು ಪಾಲ್ಗೊಂಡಿರುವುದು ಶ್ಲಾಘನೀಯ ಎಂದರು
ಚೆಟ್ಟಳ್ಳಿಯ ಜೋಮಾಲೆ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಮುಳ್ಳಂಡ ಶೋಭಾ ಚಂಗಪ್ಪ ಅವರು ಮಾತನಾಡಿ, ಜೋಮಾಲೆ ಪೊಮ್ಮಕ್ಕಡ ಕೂಟದ ವತಿಯಿಂದ ಇದೇ ಪ್ರಥಮ ಬಾರಿಗೆ ಚೆಟ್ಟಳ್ಳಿಯಲ್ಲಿ ಥ್ರೋಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಪಂದ್ಯಾವಳಿಗೆ ಚೆಟ್ಟಳ್ಳಿಯ ಕೊಡವ ಸಮಾಜ ಅಗತ್ಯ ಸಹಕಾರವನ್ನು ನೀಡಿದೆ. ಪಂದ್ಯಾವಳಿಯಲ್ಲಿ ಪ್ರಥಮ, ದ್ವಿತೀಯ, ತ್ರತೀಯ ಹಾಗೂ ನಾಲ್ಕನೇ ಸ್ಥಾನ ಪಡೆಯುವ ತಂಡಗಳಿಗೆ ನಗದು ಸೇರಿದಂತೆ ಆಕರ್ಷಕ ಟ್ರೋಫಿಯನ್ನು ಬಹುಮಾನವಾಗಿ ನೀಡಲಾಗುವುದು. ಜತೆಗೆ ಆಟಗಾರರಿಗೆ ವೈಯಕ್ತಿಕ ಬಹುಮಾನವನ್ನು ನೀಡಲಾಗುವುದು ಎಂದರಲ್ಲದೇ, ಜೋಮಾಲೆ ಪೊಮ್ಮಕ್ಕಡ ಕೂಟದ ವತಿಯಿಂದ ಮುಂದಿನ ದಿನಗಳಲ್ಲಿ ರಕ್ತದಾನ ಶಿಬಿರ ಹಾಗೂ ವೃದ್ಧಾಶ್ರಮ ವಾಸಿಗಳಿಗೆ ಅಗತ್ಯ ನೆರವು ನೀಡುವ ಉದ್ದೇಶ ಹೊಂದಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜೋಮಾಲೆ ಪೊಮ್ಮಕ್ಕಡ ಕೂಟದ ಪದಾಧಿಕಾರಿಗಳಾದ ಉಪಾಧ್ಯಕ್ಷೆ ಚೋಳಂಡ ಜ್ಯೋತಿ ನಾಣಯ್ಯ, ಕಾರ್ಯದರ್ಶಿ ಅಡಿಕೆರ ಶಾಂತಿ ಮುತ್ತಪ್ಪ, ಖಜಾಂಚಿ ಪುತ್ತರಿರ ಗಂಗು ಅಚ್ಚಯ್ಯ, ಸಹ ಕಾರ್ಯದರ್ಶಿ ಕೆಚ್ಚೆಟ್ಟಿರ ರತಿ ಕಾರ್ಯಪ್ಪ, ಚೆಟ್ಟಳ್ಳಿ ಕೊಡವ ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತು ಚಂಗಪ್ಪ, ಉಪಾಧ್ಯಕ್ಷ ಬಿದ್ದಂಡ ಮಾದಯ್ಯ ಮತ್ತಿತರರು ಪಾಲ್ಗೊಂಡಿದ್ದರು. ಉದ್ಘಾಟನಾ ಪಂದ್ಯ ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟ ಹಾಗೂ ಅಮ್ಮತ್ತಿ ಕೊಡವ ಸಮಾಜ ಪೊಮ್ಮಕ್ಕಡ ಕೂಟ ತಂಡಗಳ ನಡುವೆ ನಡೆಯಿತು. ದಿನವಿಡೀ ನಡೆದ ಪಂದ್ಯಾವಳಿಯ ಸಂದರ್ಭ ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು.