ಮಡಿಕೇರಿ, ಮಾ. ೩೧: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಸರ್ಕಾರಿ ಶುಶ್ರೂಷ ಕಾಲೇಜಿನ ಎರಡನೇ ಘಟಿಕೋತ್ಸವ ಸಮಾರಂಭ ಅದ್ದೂರಿಯಾಗಿ ಜರುಗಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಂಗಳೂರು ವೈದ್ಯಕೀಯ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ಶ್ರೀಕಾಂತ್ ಫುಲಾರಿ ಅವರು ಮಾತನಾಡಿ, ೮೯ ವಿದ್ಯಾರ್ಥಿಗಳು ಪದವಿ ಸ್ವೀಕರಿಸುತ್ತಿರುವುದು ಶ್ಲಾಘನೀಯ. ನರ್ಸಿಂಗ್ ಶಿಕ್ಷಣ ಬೆಳೆಸುವಲ್ಲಿ ಎಲ್ಲರ ಪಾತ್ರ ಹೆಚ್ಚಿನದ್ದು, ನರ್ಸಿಂಗ್ ಶಿಕ್ಷಣದಿಂದ ಲಭಿಸುವ ಉದ್ಯೋಗಗಳು ಸಮಾಜದಲ್ಲಿ ಅತ್ಯಂತ ಗೌರವಾನ್ವಿತವಾಗಿವೆ ಹಾಗೂ ಸೇವಾಭಾವನೆಯ ಪ್ರತಿರೂಪವಾಗಿವೆ ಎಂದರು.
ಉತ್ತಮ ನೈಪುಣ್ಯ ಮತ್ತು ಕಾಳಜಿಯ ಮನೋಭಾವದಿಂದ ರೋಗಿಗಳ ಆರೋಗ್ಯದಲ್ಲಿ ಮಹತ್ತರ ಬದಲಾವಣೆ ತರಬಹುದು. ಇಂದಿನ ಯುಗದಲ್ಲಿ ನರ್ಸಿಂಗ್ ವೃತ್ತಿಗೆ ದೇಶ-ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದಲ್ಲಿ ಶಿಸ್ತಿನ ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕರಾದ ಡಾ. ಲೋಕೇಶ್ ಎ.ಜೆ ಅವರು ಮಾತನಾಡಿ, ಸಂಸ್ಥೆಯ ಎರಡನೇ ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಲಭಿಸಿದ್ದು ಬಹಳ ಸಂತೋಷಕರ ಎಂದರು. ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ತಿರುವು ಆಗಿದ್ದು, ಮುಂದೆ ಉತ್ತಮ ವೈದ್ಯಕೀಯ ಸೇವೆಯನ್ನು ಸಮಾಜಕ್ಕೆ ಸಲ್ಲಿಸುವ ಜವಾಬ್ದಾರಿಯೂ ವಿದ್ಯಾರ್ಥಿಗಳ ಮೇಲಿದೆ ಎಂದರು.
ಸAಸ್ಥೆಯು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲು ಬದ್ಧವಾಗಿದ್ದು, ಭವಿಷ್ಯದಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡಲು ಎಲ್ಲಾ ವಿದ್ಯಾರ್ಥಿಗಳು ಶ್ರಮಿಸಬೇಕು ಎಂದು ಕರೆ ನೀಡಿದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಾಂಶುಪಾಲರಾದ ಡಾ.ವಿಶಾಲ್ ಕುಮಾರ್ ಅವರು ಮಾತನಾಡಿ, ಸಮಾಜದ ಸೇವೆಗೆ ವಿದ್ಯಾರ್ಥಿಗಳು ಸಜ್ಜಾಗಿರುವ ಈ ಸಂದರ್ಭದಲ್ಲಿ ಜ್ಞಾನ ಮತ್ತು ನಿಷ್ಠೆ ಜನರಿಗೆ ಬೆಳಕಾಗಲಿ ಎಂದು ಹಾರೈಸಿದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆಯ ಸ್ಥಾನೀಯ ವೈದ್ಯಾಧಿಕಾರಿಗಳಾದ ಡಾ. ಅಭಿನಂದನ್ ಬಿ ವಂದಕುದರಿ ಅವರು ಮಾತನಾಡಿ, ಇದು ಕೇವಲ ವಿದ್ಯಾರ್ಥಿಗಳ ಸಂಭ್ರಮವಷ್ಟೇ ಅಲ್ಲ, ಸಂಸ್ಥೆಯ ಹೆಮ್ಮೆಯ ಪ್ರತೀಕವಾಗಿದೆ ಎಂದು ಹೇಳಿದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆಯ ಸ್ಥಾನೀಯ ವೈದ್ಯಾಧಿಕಾರಿಗಳಾದ ಡಾ. ಧನಂಜಯ್ ಕುಮಾರ್ ಅವರು ಮಾತನಾಡಿ, ನರ್ಸಿಂಗ್ ಕೇವಲ ಶಿಕ್ಷಣ ಅಲ್ಲ, ಇದೊಂದು ತ್ಯಾಗಮಯ ಸೇವೆಯಾಗಿದೆ ಎಂದು ಹೇಳಿದರು. ರೋಗಿಗಳಿಗೆ ನಿಮ್ಮ ಚಿಕಿತ್ಸೆಗಿಂತ ಹೆಚ್ಚಾಗಿ ನಿಮ್ಮ ಕಾಳಜಿ ಮತ್ತು ಪ್ರೀತಿ ಮುಖ್ಯವಾಗುತ್ತದೆ. ವೈದ್ಯರು ರೋಗವನ್ನು ಗುಣಪಡಿಸಿದರೆ, ನರ್ಸ್ ರೋಗಿಯ ಮನಸ್ಸನ್ನೇ ಬದಲಾಯಿಸುತ್ತಾರೆ ಎಂದು ಹೇಳಿದರು.
ತುರ್ತು ವೈದ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಮೋಹನ್ ಅಪ್ಪಾಜಿ ಅವರು ಮಾತನಾಡಿ, ಪರಿಶ್ರಮ, ನಿಷ್ಠೆ ಮತ್ತು ಸಂಕಲ್ಪವು ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ತಂದುಕೊಡುತ್ತದೆ ಎಂದರು.
ಇದೇ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯದಲ್ಲಿ ರ‍್ಯಾಂಕ್ ಪಡೆದ ವಿಧ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು. ಘಟಿಕೋತ್ಸವ ಸಮಾರಂಭ ಪದವಿ ಸ್ವೀಕರಿಸಿದ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ರೋಹಿಣಿ ಕೆ.ಎಂ, ಸರ್ಕಾರಿ ಶುಶ್ರೂಷಾ ಕಾಲೇಜಿನ ಪ್ರಾಧ್ಯಾಪಕರಾದ ದೀಪರಾಜ್ ಸಿ.ಎಂ, ಸಹ ಪ್ರಾಧ್ಯಾಪಕರಾದ ಮಾರ್ಟಿನ್ ಲೂಥರ್ ಕಿಂಗ್, ಸಹಾಯಕ ಪ್ರಾಧ್ಯಾಪಕರಾದ ರಂಜಿನಿ ಎಸ್.ಎನ್, ಅಶ್ವಿನಿ ಕೆ.ಎನ್, ಉಪನ್ಯಾಸಕರಾದ ಗೀತಾ ಕೆ.ಬಿ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆಯ ನರ್ಸಿಂಗ್ ಮೇಲ್ವಿಚಾರಕರಾದ ಮಹೇಶ್ ಹಾಗೂ ಇನ್ನಿತರ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು, ಪೋಷಕರು, ವಿಧ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಬಿ.ಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಾದ ಜಿಸ್ಟಿ ಮತ್ತು ರಮ್ಯಾ ನಿರೂಪಿಸಿದರು, ಸರ್ಕಾರಿ ಶುಶ್ರೂಷಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಅಶ್ವಿನಿ ಕೆ ಎನ್ ವಂದನಾರ್ಪಣೆ ಸಮರ್ಪಿಸಿದರು. ಸರ್ಕಾರಿ ಶುಶ್ರೂಷಾ ಕಾಲೇಜಿನ ಪ್ರಾಂಶುಪಾಲರಾದ ಮಂಜುಳ ಎ.ಕೆ ಮಾತನಾಡಿ, ಕಳೆದ ನಾಲ್ಕು ವರ್ಷದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗಳನ್ನು ಉಲ್ಲೇಖಿಸಿ ಕಾಲೇಜು ವರದಿ ವಾಚಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಶುಶ್ರೂಷಾ ಕಾಲೇಜಿನ ಸಹ ಪ್ರಾಧ್ಯಾಪಕರಾದ ಗುರುಪಾದ ಕೆ.ಪಿ ಸ್ವಾಗತಿಸಿದರು. ಬಿ.ಎಸ್.ಸಿ ನರ್ಸಿಂಗ್ ವಿದ್ಯಾರ್ಥಿ ಆಶಿತಾ ಪ್ರಾರ್ಥನೆಯನ್ನು ನೆರವೇರಿಸಿದರು. ಶ್ರೀಕಾಂತ್ ಫುಲಾರಿ ಅವರು ಪ್ರತಿಜ್ಞೆಯನ್ನು ಬೋಧಿಸಿದರು.
ಕೊನೆಗೆ ವಿಧ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಲಾ ವೈಭವ ಕಾರ್ಯಕ್ರಮಗಳು ನಡೆಯಿತು.