ಮಡಿಕೇರಿ, ಮಾ. ೨೯: ಭಾರತ ದೇಶದಲ್ಲಿ ಮಹಿಳೆಯರಲ್ಲಿ ಹರಡುತ್ತಿರುವ ಕ್ಯಾನ್ಸರ್ಗಳಲ್ಲಿ ೨ನೇ ಅಪಾಯಕಾರಿ ಗರ್ಭಕಂಠದ ಕ್ಯಾನ್ಸರ್ ತಡೆಯಲು ೧೪ ವರ್ಷದ ಹೆಣ್ಣುಮಕ್ಕಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಪಿವಿ (ಹ್ಯೂಮನ್ ಪ್ಯಾಪಿಲೋಮ ವೈರಸ್) ಲಸಿಕೆ ನೀಡುವ ಅಭಿಯಾನಕ್ಕೆ ಚೇರಂಬಾಣೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಾಲನೆ ನೀಡಲಾಯಿತು.
ಆಡಳಿತ ವೈದ್ಯಾಧಿಕಾರಿ ಡಾ. ಪಾರ್ವತಿ ಮಾತನಾಡಿ, ಅಪಾಯಕಾರಿ ಕ್ಯಾನ್ಸರ್ನಂತ ಪಿಡುಗು ತೊಲಗಿಸಲು ಇಲಾಖೆ ವತಿಯಿಂದ ೧೪ ವರ್ಷದ ಮೇಲ್ಪಟ್ಟು ೧೫ ವರ್ಷದ ಒಳಗಿನ ಎಲ್ಲಾ ಹೆಣ್ಣು ಮಕ್ಕಳಿಗೆ ಗುರಿಯಾಗಿಸಿಕೊಂಡು ಉಚಿತವಾಗಿ ಲಸಿಕೆ ನೀಡಲಾಗುತ್ತಿರುವ ಈ ಅಭಿಯಾನದಲ್ಲಿ ಇಲಾಖೆಯೊಂದಿಗೆ ಎಲ್ಲಾ ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಮುಂದೆ ಬಂದು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು. ಲಸಿಕೆಯಿಂದ ಯಾವುದೇ ತೊಂದರೆ ಆಗುವುದಿಲ್ಲ ಅತ್ಯುತ್ತಮ ಮತ್ತು ಸುರಕ್ಷಿತ ಗುಣಮಟ್ಟದ ಲಸಿಕೆ ಆಗಿದ್ದು ಯಾವ ರೀತಿಯ ಅಡ್ಡಪರಿಣಾಮ ಇರುವುದಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಿಲನ ಮುತ್ತಮ್ಮ, ಬಿಂದು ಹಾಗೂ ಸಮುದಾಯ ಆರೋಗ್ಯ ಅಧಿಕಾರಿ ಕಾರ್ತಿಕ್, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳಾದ ಕೃತಿಕ, ಭವಾನಿ, ಚಂದ್ರಕಲಾ, ಪೂರ್ಣಿಮಾ ಹಾಗೂ ಆಶಾ ಕಾರ್ಯಕರ್ತರು ಇದ್ದರು.