ಮಡಿಕೇರಿ, ಮಾ. ೨೯: ಮಹಿಳಾ ಸಬಲೀಕರಣಕ್ಕಾಗಿ ವೃತ್ತಿಪರ ಕೌಶಲ್ಯ ಶಿಬಿರದಡಿ ರೋಟರಿ ಮಡಿಕೇರಿ ವತಿಯಿಂದ ಆಯೋಜಿಸಿರುವ ಟೈಲರಿಂಗ್ ತರಬೇತಿಗೆ ಮಡಿಕೇರಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಚಾಲನೆ ನೀಡಲಾಯಿತು.
ಕಾಲೇಜು ಸಭಾಂಗಣದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ವೆಂಕಟೇಶ್ ಪ್ರಸನ್ನ ಅವರು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿಪರ ಕೌಶಲ್ಯದ ತರಗತಿಗಳನ್ನು ನಡೆಸಿ ಸ್ವಾವಲಂಬಿ ಬದುಕಿಗೆ ಮಾರ್ಗದರ್ಶನ ನೀಡಲಾಗುತ್ತಿದೆ ಎಂದರು.
ಬ್ಯೂಟಿಷಿಯನ್ ಮತ್ತು ಉತ್ತಮ ಆತಿಥ್ಯಕ್ಕೆ ಸಂಬAಧಿಸಿದ ತರಬೇತಿಗಳನ್ನು ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಶೈಕ್ಷಣಿಕ ಜೀವನದ ನಂತರ ಎದೆಗುಂದದೆ ಸ್ವಯಂ ಉದ್ಯೋಗ ಸೃಷ್ಟಿಸಿಕೊಳ್ಳಬೇಕು ಎನ್ನುವುದು ನಮ್ಮ ಗುರಿಯಾಗಿದೆ. ಇದೀಗ ಸಾಮಾಜಿಕ ಕಳಕಳಿ ಹೊಂದಿರುವ ರೋಟರಿ ಮಡಿಕೇರಿ ಸಂಸ್ಥೆ ಕೂಡ ವಿದ್ಯಾರ್ಥಿನಿಯರಿಗೆ ಟೈಲರಿಂಗ್ ತರಬೇತಿ ನೀಡಲು ಮುಂದೆ ಬಂದಿರುವುದು ಹೆಚ್ಚು ಉಪಯುಕ್ತವೆನಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೋಟರಿ ಮಡಿಕೇರಿ ಅಧ್ಯಕ್ಷೆ ಲಲಿತಾ ರಾಘವನ್ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಿ ಸ್ವಾವಲಂಬಿ ಜೀವನ ಸಾಗಿಸಬೇಕು ಎಂದು ಕರೆ ನೀಡಿದರು.
ರೋಟರಿಯ ಸಮುದಾಯ ಸೇವಾ ವಿಭಾಗದ ನಿರ್ದೇಶಕ ಸುದಯ್ ನಾಣಯ್ಯ ಮಾತನಾಡಿ, ಟೈಲರಿಂಗ್ ವೃತ್ತಿಯಲ್ಲಿ ಸುಮಾರು ೪೧ ವರ್ಷಗಳ ಅನುಭವ ಹೊಂದಿರುವ ತರಬೇತುದಾರ ರಮೇಶ್ ರೈ ಅವರ ನೇತೃತ್ವದಲ್ಲಿ ಟೈಲರಿಂಗ್ ತರಬೇತಿ ನಡೆಯಲಿದ್ದು, ೭೪ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಪ್ರತಿ ವಿದ್ಯಾರ್ಥಿಗೆ ೩೦ ಗಂಟೆ ತರಬೇತಿ ಮತ್ತು ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಕಾಲೇಜಿನಲ್ಲಿ ಈಗಾಗಲೇ ೫ ಟೈಲರಿಂಗ್ ಯಂತ್ರಗಳಿದ್ದು, ರೋಟರಿ ಸಂಸ್ಥೆ ಮೂಲಕ ಮತ್ತೆ ೫ ಟೈಲರಿಂಗ್ ಯಂತ್ರಗಳನ್ನು ನೀಡಿದ್ದೇವೆ. ಮತ್ತಷ್ಟು ಸಮಾಜಮುಖಿ ಕಾರ್ಯದಲ್ಲಿ ಸಂಸ್ಥೆ ತೊಡಗಿಸಿಕೊಳ್ಳಲಿದೆ ಎಂದರು.
ಕಾಲೇಜಿನ ವೃತ್ತಿಪರ ಕೌಶಲ್ಯ ಅಭಿವೃದ್ಧಿ ವಿಭಾಗದ ಉಪನ್ಯಾಸಕಿ ದೀಕ್ಷಿತ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗೆ ಬ್ಯೂಟಿಷಿಯನ್ ಮತ್ತು ಉತ್ತಮ ಆತಿಥ್ಯಕ್ಕೆ ಸಂಬAಧಿಸಿದ ತರಬೇತಿಯನ್ನು ನೀಡುತ್ತಿದ್ದೇವೆ. ಶಿಕ್ಷಣದೊಂದಿಗೆ ಸ್ವಾವಲಂಬಿ ಬದುಕಿನ ಮಾರ್ಗದರ್ಶನವನ್ನು ಕೂಡ ನೀಡಲಾಗುತ್ತಿದೆ ಎಂದು ತಿಳಿಸಿದರು.
ತರಬೇತುದಾರ ರಮೇಶ್‌ರೈ, ರೋಟರಿಯ ಯುವಸೇವಾ ನಿರ್ದೇಶಕ ಅನಿಲ್ ಕೃಷ್ಣಾನಿ, ಮಲ್ಲಿಗೆಪೈ, ವೃತ್ತಿಪರ ಕೌಶಲ್ಯ ಅಭಿವೃದ್ಧಿ ವಿಭಾಗದ ಉಪನ್ಯಾಸಕಿ ಅನುಪಮ, ರೋಟಾರೆಕ್ಟ್ ಕ್ಲಬ್ ಸಂಯೋಜಕಿ ಸುಪ್ರಿಯ ಭಟ್, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.