ವೀರಾಜಪೇಟೆ, ಮಾ. ೨೭: ವೀರಾಜಪೇಟೆಯ ಆರ್ಜಿ ಗ್ರಾಮದ ಕಲ್ಲುಬಾಣೆಯ ಶ್ರೀ ಮುತ್ತಪ್ಪ ಸೇವಾ ಸಂಘದ ವತಿಯಿಂದ ಕಲ್ಲುಬಾಣೆಯಲ್ಲಿ ೧೧ನೇ ವರ್ಷದ ಕಲಶ ಮಹೋತ್ಸವ ೨ ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ನಡೆಯಿತು.

ಮೊದಲ ದಿನ ಕಲಶ ಪ್ರತಿಷ್ಠಾಪನೆ, ಶ್ರೀ ಮುತ್ತಪ್ಪ ದೇವರ ಪೈಂಗುತ್ತಿ ಸೇವೆ ನಡೆಯಿತು. ಬಳಿಕ ಸಂಜೆ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕಲಶ ಮಹೋತ್ಸವದ ಅಂಗವಾಗಿ ವಿವಿಧ ಸಾಧಕರನ್ನು, ಗ್ರಾಮದ ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಬಾಣೆಯಲ್ಲಿ ಕಸ ಸಂಗ್ರಹಣೆ ಮಾಡಿ ಸ್ವಚ್ಛತಾ ಕಾರ್ಯ ನಿರ್ವಹಿಸುವ ಸ್ವಚ್ಛತಾ ಸಿಬ್ಬಂದಿಗಳಾದ ಚೆಲುವರಾಜು ಹಾಗೂ ಅಕ್ಷಂiÀi, ಸಾಹಿತಿ, ಪತ್ರಕರ್ತೆ ರಜಿತಾ ಕಾರ್ಯಪ್ಪ, ಮತ್ತು ಮುತ್ತಪ್ಪ ಸೇವಾ ಸಂಘದಲ್ಲಿ ಸೇವೆ ಸಲ್ಲಿಸಿದ ಟಿ.ಕೆ. ನಾರಾಯಣ ಮತ್ತು ಬಿ.ಎಂ. ಗಂಗಾಧರ್ ಅವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು ಕಲಾ ಪ್ರದರ್ಶನ ನೀಡಿದ ಸ್ಥಳೀಯ ಪ್ರತಿಭೆಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಕಲಶ ಮಹೋತ್ಸವದ ಎರಡನೆಯ ದಿನ ಸಂಜೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳ ಬಳಿಕ ಮುತ್ತಪ್ಪ ಕಲಶ ಹಾಗೂ ಮಹಿಳೆಯರು ಕಲಶ ಹೊತ್ತು ಚಂಡೆ ಮೇಳದೊಂದಿಗೆ ಕಲ್ಲುಬಾಣೆಯಿಂದ ವೀರಾಜಪೇಟೆಯ ಮೀನುಪೇಟೆಯಲ್ಲಿರುವ ಚೈತನ್ಯ ಮಠಪುರ ಶ್ರೀ ಮುತ್ತಪ್ಪ ದೇವಾಲಯದವರೆಗೆ ಮೆರವಣಿಗೆ ನಡೆಯಿತು. ಬಳಿಕ ಮುತ್ತಪ್ಪ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು. ಟಿ.ಎನ್. ಪ್ರಶಾಂತ್, ಬಿ.ಎಸ್. ಕೃಷ್ಣಪ್ಪ, ಬಿ.ಕೆ. ಆದರ್ಶ್ ಶ್ರೀ ಮುತ್ತಪ್ಪ ದೇವರ ಕಲಶ ಹೊತ್ತು ಸಾಗಿದರು.

ದೇವಾಲಯದಲ್ಲಿ ಅನ್ನಪ್ರಸಾದ ವಿತರಿಸಲಾಯಿತು. ಕಲಶ ಪೂಜೆ ನೆರವೇರಿದ ಬಳಿಕ ಕಲ್ಲುಬಾಣೆಯಲ್ಲಿ ಪೈಂಗುತ್ತಿ ಸೇವೆ ನಡೆಸಿ ಈ ವರ್ಷದ ಮುತ್ತಪ್ಪ ಕಲಶ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು. ಈ ಸಂದರ್ಭ ಶ್ರೀ ಮುತ್ತಪ್ಪ ಸೇವಾ ಸಂಘದ ಅಧ್ಯಕ್ಷ ವಾನಂಡ ಕಾವೇರಪ್ಪ, ಉಪಾಧ್ಯಕ್ಷ ಎ.ಎನ್. ಗೋಪಾಲ, ಖಜಾಂಚಿ ಟಿ.ಕೆ. ರಾಜನ್, ಕಾರ್ಯದರ್ಶಿ ಬಿ.ಎಸ್. ರಾಜ, ಗೌರವ ಅಧ್ಯಕ್ಷರಾದ ಟಿ.ಕೆ. ನಾರಾಯಣ, ಬಿ.ಎಂ. ಗಂಗಾಧರ್, ಮೀನಾ ಗಂಗಾಧರ್ ಸೇರಿದಂತೆ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸ್ಥಳಿಯರು ಹಾಜರಿದ್ದರು.