ಪೊನ್ನಂಪೇಟೆ, ಮಾ. ೨೭: ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಸಮೀಪದ ಬೆಳ್ಳೂರು ಗ್ರಾಮದ ದಲಿತ ಯುವತಿಯ ಹತ್ಯೆ ಖಂಡಿಸಿ ಆರೋಪಿ ಅಯ್ಯಪ್ಪನಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯ ವತಿಯಿಂದ ಪೊನ್ನಂಪೇಟೆಯಲ್ಲಿ ಪ್ರತಿಭಟನೆ ನಡೆಸಲಾಯಿತು.
ದಲಿತ ಸಂಘರ್ಷ ಸಮಿತಿಯ ಕೊಡಗು ಹಾಗೂ ಮೈಸೂರು ಜಿಲ್ಲಾ ಸಂಚಾಲಕ ಹೆಚ್.ಎನ್. ಕೃಷ್ಣಪ್ಪ ನೇತೃತ್ವದಲ್ಲಿ ಪೊನ್ನಂಪೇಟೆ ಬಸ್ಸು ನಿಲ್ದಾಣದಿಂದ ತಹಶೀಲ್ದಾರ್ ಕಚೇರಿವರೆಗೆ ಆರೋಪಿಗೆ ಗರಿಷ್ಠ ಶಿಕ್ಷೆ ವಿಧಿಸುವಂತೆ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನಾಕಾರರು ತೆರಳಿದರು.
ಸೂಕ್ತವಾದ ತನಿಖೆ ನಡೆಸಿ ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಮತ್ತು ಕೊಲೆಗೆ ಸಹಕರಿಸಿದ ಕಾಣದ ಕೈಗಳನ್ನು ಬಂಧಿಸಿ ಶಿಕ್ಷೆ ವಿಧಿಸಬೇಕು. ಮೃತಳ ಕುಟುಂಬಕ್ಕೆ ಸರ್ಕಾರಿ ನೌಕರಿ ಮತ್ತು ೫ ಎಕರೆ ಜಾಗ ಮಂಜೂರು ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭ ಮಹಿಳಾ ಸಂಘರ್ಷ ಸಮಿತಿಯ, ಮಹಿಳಾ ಒಕ್ಕೂಟದ ರಾಜ್ಯ ಸಂಯೋಜಕಿ ಗಿರಿಜಾ, ಕೊಡಗು ಹಾಗೂ ಮೈಸೂರು ಜಿಲ್ಲಾ ಸಂಚಾಲಕ ಹೆಚ್.ಎನ್. ಕೃಷ್ಣಪ್ಪ ಹಾಗೂ ಇತರರು ಮಾತನಾಡಿದರು.
ಈ ಸಂದರ್ಭ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಯೋಜಕರಾದ ರಜನಿಕಾಂತ್, ಯೋಗೇಶ್ ಮಡಿಕೇರಿ, ನಾಗೇಶ್, ಪೂವಣ್ಣಿ, ರಾಜು, ವಿಜಯ್, ನಿತೀಶ್ ಇನ್ನಿತರರು ಇದ್ದರು.