ಮಡಿಕೇರಿ, ಮಾ. ೨೭: ಮಡಿಕೇರಿ ನಗರದಲ್ಲಿ ತಾತ್ಕಾಲಿಕ ಮಳಿಗೆ ತೆರವುಗೊಳಿಸುವ ಬಗ್ಗೆ ಕಳೆದ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯದ ವಿರುದ್ಧ ಅಧ್ಯಕ್ಷರು ಪೌರಾಯುಕ್ತರಿಗೆ ನೀಡಿರುವ ಪತ್ರದ ಕುರಿತಾಗಿ ಚರ್ಚೆ, ವಿಚರ್ಚೆ, ಗೊಂದಲಗಳು ಏರ್ಪಟ್ಟು ಅಧ್ಯಕ್ಷರ ರಾಜೀನಾಮೆ ಹಾಗೂ ಕ್ಷಮೆಯಾಚನೆಗೆ ಆಗ್ರಹಿಸಿ ಕಾಂಗ್ರೆಸ್ ಸದಸ್ಯರುಗಳು ಸಭಾತ್ಯಾಗ ಮಾಡಿದರೆ, ವಿಪಕ್ಷದವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರಸಂಗ ನಗರಸಭೆಯಲ್ಲಿಂದು ನಡೆಯಿತು. ನಗರಸಭಾಧ್ಯಕ್ಷೆ ಕಲಾವತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯ ರಾಜೇಶ್ ಯಲ್ಲಪ್ಪ ಅವರು; ಸಾರಿಗೆ ಸಂಸ್ಥೆ ಡಿಪೋ ಬಳಿ ಇರುವ ತಾತ್ಕಾಲಿ ಶೆಡ್ ಅನ್ನು ತೆರವುಗೊಳಿಸುವಂತೆ ಕಳೆದ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೂ ಯಾವದೇ ಕ್ರಮ ಕೈಗೊಂಡಿಲ್ಲ. ಬದಲಿಗೆ ೫೦ದಿನಗಳ ಬಳಿಕ ಸಂಬAಧಿಸಿದವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ, ಅದಾದ ಬಳಿಕ ಅಧ್ಯಕ್ಷರು ‘ನನ್ನ ಗಮನಕ್ಕೆ ಬಾರದೆ ಯಾವದೇ ಕ್ರಮ ಕೈಗೊಳ್ಳಬಾರದು’ ಎಂದು ಅಧ್ಯಕ್ಷರು ಪೌರಾಯುಕ್ತರಿಗೆ ಪತ್ರದ ಮೂಲಕ ಸೂಚನೆ ನೀಡಿದ್ದಾರೆ. ಇದು ಅಕ್ಷಮ್ಯ ಅಪರಾಧ, ನಿರ್ಣಯ ಮಾಡುವ ಸಂದರ್ಭದಲ್ಲಿ ಯಾವದೇ ನ್ಯಾಯಾಲಯದ ತಡೆಯಾಜ್ಞೆ ಇರಲಿಲ್ಲ. ಉದ್ದೇಶಪೂರ್ವಕವಾಗಿ ಸಮಯಾವಕಾಶ ನೀಡಿ ಈ ರೀತಿ ಮಾಡಿರುವದು ಜನರಿಗೆ ಮಾಡಿದ ದ್ರೋಹವಾಗಿದೆ. ಒಮ್ಮೆ ೨೮ ಮಂದಿ ಸದಸ್ಯರುಗಳ ಸಮ್ಮುಖದಲ್ಲಿ ಕೈಗೊಂಡ ನಿರ್ಣಯದ ವಿರುದ್ಧವಾಗಿ ನಡೆದುಕೊಳ್ಳಲಾಗಿದೆ. ಇದು ಒಂದು ಪಕ್ಷದ ನಿರ್ಣಯವಲ್ಲ, ಯಾರದೊ ಮಾತು ಕೇಳಿ ನಡೆದುಕೊಳ್ಳುವ ನಿಮಗೆ ಅಧ್ಯಕ್ಷರಾಗಿರಲು ನೈತಿಕತೆ ಇಲ್ಲ. ಸಭೆಯ ಕ್ಷಮೆ ಕೇಳುವದರೊಂದಿಗೆ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದರು. ಪ್ರತಿಕ್ರಿಯಿಸಿದ ಅಧ್ಯಕ್ಷರು; ಪ್ರಕರಣ ನ್ಯಾಯಾಲಯದಲ್ಲಿರುವದರಿಂದ ಪತ್ರ ಬರೆದಿದ್ದೇನೆ. ನಗರದಲ್ಲಿ ಇದೊಂದೇ ಮಳಿಗೆ ಇರುವದಲ್ಲ, ನೀವುಗಳು ಇದೊಂದರ ಬಗ್ಗೆ ಮಾತ್ರ ಚರ್ಚೆ ಮಾಡುತ್ತೀರ, ಅಭಿವೃದ್ಧಿ ಕಾರ್ಯದ ಬಗ್ಗೆ ಮಾತಾಡುವದಿಲ್ಲ, ನಾನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲವೆಂದು ಹೇಳಿದರು. ಸದಸ್ಯ ಅಮೀನ್ ಮೊಹಿಸಿನ್ ಮಾತನಾಡಿ; ಸಾಮಾನ್ಯ ಸಭೆಯಲ್ಲಿ ನಿರ್ಣಯ ಆದಮೇಲೆ ಮತ್ತೆ ಈ ರೀತಿ ಪತ್ರ ಬರೆದು ಕಾನೂನು ಉಲ್ಲಂಘನೆ ಮಾಡಿದ್ದೀರ, ಈ ವಿಚಾರದಲ್ಲಿ ಪೌರಾಯುಕ್ತರು ಕೂಡ ಕಾನೂನಿಗೆ ಬದ್ಧರಾಗಿರಬೇಕು. ಅಧ್ಯಕ್ಷರನ್ನು ಸಮಸ್ಯೆಗೆ ಸಿಲುಕಿಸುವದಲ್ಲ, ಅಧ್ಯಕ್ಷರು ಕೂಡ ಬೇರೆಯವರ ಮಾತನ್ನು ಕೇಳಬಾರದು, ಇದು ಸೂಕ್ಷö್ಮ ವಿಚಾರ, ಸಮಸ್ಯೆಗೆ ಸಿಲುಕಿಕೊಳ್ಳಬಾರದು. ಸಭೆಯಲ್ಲಿ ನಿಮ್ಮ ತೀರ್ಮಾನದ ವಿರುದ್ಧ ನೀವೇ ಪತ್ರ ಬರೆಯೋದಾ ಎಂದು ಅಧ್ಯಕ್ಷರನ್ನು ಪ್ರಶ್ನಿಸಿದರು. ಸದಸ್ಯ ಮನ್ಸೂರ್ ಮಾತನಾಡಿ; ಈ ವಿಚಾರದ ಬಗ್ಗೆ ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರು ಸದನದಲ್ಲಿ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಈ ಬಗ್ಗೆ ನಗರಸಭೆಗೆ ನೋಟೀಸ್ ಕೂಡ ಜಾರಿಯಾಗಿದೆ ಈ ಬಗ್ಗೆ ಮಾಹಿತಿ ನೀಡುವಂತೆ ಆಯುಕ್ತರಲ್ಲಿ ಕೋರಿದರು. ಮಧ್ಯ ಪ್ರವೇಶಿಸಿದ ಉಪಾಧ್ಯಕ್ಷ ಮಹೇಶ್ ಜೈನಿ ಈ ವಿಚಾರ ನ್ಯಾಯಾಲ ಯದಲ್ಲಿರುವದರಿಂದ ಈ ಬಗ್ಗೆ ಚರ್ಚೆ ಬೇಡವೆಂದು ಹೇಳಿದರು. ಸದಸ್ಯ ಮನ್ಸೂರ್ ಮಾತನಾಡಿ; ಕಾನೂನು ಬಗ್ಗೆ ಮಾಹಿತಿಯನ್ನು ನೀಡಬೇಕೆಂದು ಪೌರಾಯುಕ್ತರಲ್ಲಿ ಹೇಳಿದರು. ಪ್ರತಿಕ್ರಿಯಿಸಿದ ಪೌರಾಯುಕ್ತ ರಮೇಶ್; ಇದು ಕಾನೂನು ವಿರುದ್ಧವಾಗಿದೆ, ಈ ಪತ್ರ ಸಿಂಧುವಾಗುವದಿಲ್ಲ ಎಂದು ಹೇಳಿದ್ದೆ. ಆದರೂ ತಮ್ಮ ಕೊಠಡಿಗೆ ಕರೆಸಿಕೊಂಡು ನೀಡಿದರು ಎಂದು ಹೇಳಿದರು.

ಮುಂದೂಡಿದ ಸಭೆ

ಒಂದೇ ವಿಚಾರ ಮಧ್ಯಾಹ್ನದವರೆಗೂ ಮುಂದುವರೆದಾಗ ಊಟದ ವಿರಾಮ ನೀಡಿದ ಅಧ್ಯಕ್ಷರು ಸಭೆಯನ್ನು ಮಧ್ಯಾಹ್ನ ೨.೩೦ಕ್ಕೆ ಮುಂದೂಡಿದರು. ಬಳಿಕ ಆರಂಭವಾದ ಸಭೆಯಲ್ಲಿ ವಿಚಾರ ಮತ್ತೆ ಪ್ರಸ್ತಾಪಗೊಂಡಿತು. ಅಧ್ಯಕ್ಷರು ಕ್ಷಮೆ ಕೇಳದೆ ಸಭೆ ಮುಂದುವರೆಯಲು ಅವಕಾಶ ನೀಡುವದಿಲ್ಲವೆಂದು ರಾಜೇಶ್ ಹಾಗೂ ನಾಮ ನಿರ್ದೇಶಿತ ಸದಸ್ಯರುಗಳಾದ ಮುದ್ದುರಾಜ್, ಜಗದೀಶ್, ಸದಾ ಮುದ್ದಪ್ಪ, ಜುಲೇಕಾಬಿ ಪಟ್ಟು ಹಿಡಿದರು.

ತಪ್ಪಾಗಿದೆ

ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರುವ ಸಲುವಾಗಿ ಮಾತನಾಡಿದ ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್ ಶೆಟ್ಟಿ; ಈ ವಿಚಾರದಲ್ಲಿ ತಪ್ಪಾಗಿದೆ. ಒಮ್ಮೆ ನಿರ್ಣಯ ಆದ ಮೇಲೆ ಯಾರೋ ಹೇಳಿದರು ಅಂತ ಏನೋ ಮಾಡಬೇಡಿ, ಕಾನ್ವೆಂಟ್ ಜಂಕ್ಷನ್‌ನಲ್ಲಿದ್ದ ಅಂಗಡಿಗಳನ್ನು ತೆಗೆಸಿದ್ದೀರಿ, ಇದರಲ್ಲಿ ನಿರ್ಣಯ ಆಗಿದೆ, ಕಾನೂನು ಪ್ರಕಾರ ಮಾಡಿ ಎಂದು ಅಧ್ಯಕ್ಷರಿಗೆ ಸಲಹೆ ಮಾಡಿದರು. ಉಪಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ; ಈ ವಿಚಾರ ನ್ಯಾಯಾಲಯದಲ್ಲಿದೆ, ಇದನ್ನು ಬಿಡಿ, ನಿಮ್ಮ ವಾರ್ಡ್ಗಳಲ್ಲಿ ಕೆಲಸ ಆಗುವದು ಬೇಡವಾ, ಮಳೆ ಆರಂಭವಾಗಲಿದೆ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ಮಾಡೋಣವೆಂದು ಸಲಹೆ ಮಾಡಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್ ಮಾತನಾಡಿ; ಈ ವಿಚಾರದಲ್ಲಿ ರಾಜೇಶ್ ಅವರಿಗೆ ತಪ್ಪು ಅಂತ ಅನಿಸುತ್ತಿದೆ, ನಮಗೆ ಸರಿ ಅಂತ ಅನಿಸುತ್ತಿದೆ. ಒಂದು ವೇಳೆ ತಪ್ಪಾಗಿದ್ದರೆ ಸರಿಪಡಿಸಿಕೊಳ್ಳುವದಾಗಿ ಹೇಳಿ ಅಧ್ಯಕ್ಷರೇ ಎಂದು ಸಲಹೆ ಮಾಡಿದರು.

ಅಮೀನ್ ಮಾತನಾಡಿ; ಕ್ಷಮೆ ಕೇಳಿದರೆ ಶೆಡ್ ಬಂದ್ ಆಗುವದಿಲ್ಲ, ಕೇಳದಿದ್ದರೂ ಓಪನ್ ಆಗುವದಿಲ್ಲ, ಸಭೆಯಲ್ಲಿ ನಿರ್ಣಯ ಆದ ಮೇಲೂ ತೆರವುಗೊಳಿಸದೆ ಸಮಯಾವಕಾಶ ನೀಡಿದ್ದರಿಂದ ನ್ಯಾಯಾಲಯದಿಂದ ತಡೆಯಾಜ್ಞೆ ತರುವಂತಾಗಿದೆ. ಈ ಮಳಿಗೆ ಅಕ್ರಮವೆಂದು ಉಚ್ಚ ನ್ಯಾಯಾಲಯ ಕೂಡ ೯ ವಿಚಾರಗಳನ್ನು ಮುಂದಿಟ್ಟು ಆಕ್ಷೇಪ ವ್ಯಕ್ತಪಡಿಸಿದೆ. ಈ ವಿಚಾರದಲ್ಲಿ ಪ್ರತಿಷ್ಠೆ ಬೇಡ, ಅಧ್ಯಕ್ಷರು ಕ್ಷಮೆ ಕೇಳಿದರೆ ಸ್ಥಾನ ಪಲ್ಲಟವಾಗುವದಿಲ್ಲ, ಸಾರ್ವಜನಿಕರಲ್ಲೂ ಕೂಡ ನಗರಸಭೆಯ ಹಣೆಬರಹ ಇಷ್ಟೇ ಎಂಬ ಭಾವನೆ ಮೂಡುವದು ಸಹಜ, ಈ ನಡವಳಿಕೆ ಬಗ್ಗೆ ಅಸಮಾಧಾನವಿದೆ, ಸಾಮಾನ್ಯ ಸಭೆಯಲ್ಲಿ ಬಜೆಟ್ ಮಂಡನೆಯ ಅನುಮೋದನೆಗೆ ಇರಿಸಿರುವದರಿಂದ ಈ ಸಭೆ ಅಸಿಂಧುವಾಗಲಿದೆ, ಇದಕ್ಕೊಂದು ಇತಿಶ್ರೀ ಹಾಡಿ ಎಂದು ಅಸಮಾಧಾನದಿಂದ ನುಡಿದರು. ಈ ಸಂದರ್ಭ ಮಾತನಾಡಿದ ಉಪಾಧ್ಯಕ್ಷ ಮಹೇಶ್ ಜೈನಿ; ಪ್ರಕರಣ ನ್ಯಾಯಾಲಯದಲ್ಲಿದ್ದರೂ ಮಹಿಳಾ ಅಧ್ಯಕ್ಷರೆಂದು ಕ್ಷಮೆ ಕೇಳಬೇಕೆಂದು ಅವಮಾನ ಮಾಡೋದಾ..? ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿ ಎಂದು ಹೇಳಿದರು. ಕೊನೆಗೂ ಅಧ್ಯಕ್ಷರು ಕ್ಷಮೆ ಕೇಳುವದಿಲ್ಲವೆಂದೇ ಹೇಳಿ ಸಭೆ ಮುಂದುವರೆಸಿದರು. ಈ ಸಂದರ್ಭ ಸದಸ್ಯ ರಾಜೇಶ್ ಹಾಗೂ ನಾಮ ನಿರ್ದೇಶಿತ ಸದಸ್ಯರುಗಳು ಅಧ್ಯಕ್ಷರು ಹಾಗೂ ಆಡಳಿತದವರಿಗೆ ಧಿಕ್ಕಾರ ಕೂಗುತ್ತಾ ಸಭಾತ್ಯಾಗ ಮಾಡಿದರು. ಈ ಸಂದರ್ಭ ಉಪಾಧ್ಯಕ್ಷ ಮಹೇಶ್ ‘ನಿಮ್ಮ ಕಾಂಗ್ರೆಸ್ ಸಂಸ್ಕೃತಿ ತೋರಿಸಿಬಿಟ್ಟಿರಿ’ ಎಂದು ಹೇಳಿದರೆ, ಅರುಣ್ ಶೆಟ್ಟಿ ‘ಇದು ಲಜ್ಜೆಗೇಡಿತನ’ ಎಂದರು. ಅಮೀನ್ ‘ನಿಮ್ಮ ಲಜ್ಜೆಗೇಡಿತನಕ್ಕೆ ಹೀಗೆ ಆಗಿರೋದು, ನಿಮ್ಮಲ್ಲಿ ವಿವೇಚನೆ, ತಾಳ್ಮೆ ಇಲ್ಲ, ಅಧ್ಯಕ್ಷರಿಗೆ ಪವರ್ ಇಲ್ಲ’ ಎಂದು ಕೂಗಿದರು.