ಗೋಣಿಕೊಪ್ಪಲು, ಮಾ. ೨೬: ಏಪ್ರಿಲ್ ತಿಂಗಳಿನಲ್ಲಿ ಕೊಡಗು-ಕೇರಳ ಗಡಿಭಾಗವಾದ ಕುಟ್ಟ ಸರ್ಕಾರಿ ಶಾಲಾ ಮೈದಾನದಲ್ಲಿ ಕ್ರಿಕೆಟ್ ಸಂಭ್ರಮ ನಡೆಯಲಿದೆ.

ಜಿ.ಪಂ. ಮಾಜಿ ಸದಸ್ಯ, ಕಾಂಗ್ರೆಸ್ ಮಾಜಿ ಅಧ್ಯಕ್ಷ, ಕುಟ್ಟದ ನಿವಾಸಿ ಮುಕ್ಕಾಟಿರ ದಿ. ಶಿವು ಮಾದಪ್ಪ ಜ್ಞಾಪಕಾರ್ಥವಾಗಿ ಅವರ ಸ್ನೇಹಿತರ ಬಳಗ ಏಪ್ರಿಲ್ ೧೯ ರಿಂದ ೨೨ ರವರೆಗೆ ೪ ದಿನಗಳ ಕಾಲ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುತ್ತಿದೆ.

ಕುಟ್ಟ ಯೂಥ್ ಫ್ರೆಂಡ್ಸ್ ವತಿಯಿಂದ ಮೊದಲ ಬಾರಿಗೆ ಈ ಪಂದ್ಯಾವಳಿ ನಡೆಯುತ್ತಿದ್ದು, ಜಿಲ್ಲೆಯ ಗ್ರಾಮೀಣ ಭಾಗದ ೩೨ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಪಂದ್ಯಾವಳಿಯ ಅಂಗವಾಗಿ ಶಿವು ಮಾದಪ್ಪ ಅವರ ಪತ್ನಿ ಅರ್ಚನ ಮಾದಪ್ಪ ಅವರು ಕುಟ್ಟದ ಶ್ರೀಕೃಷ್ಣ ದೇವಾಲಯದ ಆವರಣದಲ್ಲಿ ಲಾಂಛನ ಬಿಡುಗಡೆ ಮಾಡಿದರು.

ಲಾಂಛನ ಬಿಡುಗಡೆ ನಂತರ ಸ್ಥಳೀಯ ಬಸ್ ನಿಲ್ದಾಣದ ಸಮೀಪವಿರುವ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪದಾಧಿಕಾರಿಗಳ ಸಭೆಯಲ್ಲಿ ಕುಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ವೈ. ರಾಮಕೃಷ್ಣ ಮಾತನಾಡಿ, ದಿ. ಶಿವು ಮಾದಪ್ಪ ಅವರು ಕ್ರಿಕೆಟ್ ಹಾಗೂ ಹಾಕಿ ಪ್ರೇಮಿಯಾಗಿ ಕೊಡಗಿನ ನಾನಾ ಭಾಗದಲ್ಲಿ ನಡೆಯುತ್ತಿದ್ದ ಪಂದ್ಯಾವಳಿಗಳಲ್ಲಿ ತಮ್ಮ ತಂಡದೊAದಿಗೆ ಭಾಗವಹಿಸುತ್ತಿದ್ದರು. ಕೊಡಗಿನ ಉದ್ದಗಲಕ್ಕೂ ತಮ್ಮದೆ ಆದ ಅಪಾರ ಸ್ನೇಹಿತರನ್ನು ಹೊಂದಿದ್ದರು. ಇವರ ಹೆಸರು ಶಾಶ್ವತವಾಗಿ ಉಳಿಯಬೇಕೆಂಬ ಉದ್ದೇಶದಿಂದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದರು. ಕೊಡಗು ಜಿಲ್ಲೆ ಸೇರಿದಂತೆ ನೆರೆಯ ಕೇರಳ ರಾಜ್ಯದ ಎರಡು ತಂಡಗಳು ಸೇರಿ ಒಟ್ಟು ೩೨ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ವಿಜೇತ ತಂಡಕ್ಕೆ ೫೦ ಸಾವಿರ ನಗದು ಬಹುಮಾನ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ೨೫ ಸಾವಿರ ನಗದು, ೩ನೇ ಸ್ಥಾನ ಪಡೆದ ತಂಡಕ್ಕೆ ೧೫ ಸಾವಿರ ನಗದು, ೪ನೇ ಸ್ಥಾನ ಪಡೆದ ತಂಡಕ್ಕೆ ೧೦ ಸಾವಿರ ನಗದು ಸೇರಿದಂತೆ ಪಾರಿತೋಷಕಗಳನ್ನು ನೀಡಲಾಗುತ್ತಿದೆ. ಅಲ್ಲದೆ ಇನ್ನಿತರ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಸಮಿತಿಯ ಪ್ರಮುಖರಾದ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪಲ್ವಿನ್ ಪೂಣಚ್ಚ, ಕುಟ್ಟ ಗ್ರಾ.ಪಂ. ಮಾಜಿ ಸದಸ್ಯ ಮುಕ್ಕಾಟಿರ ನವೀನ್, ಶ್ರೀಮಂಗಲ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಾದೀರ ಸುಧಿ ಪೊನ್ನಪ್ಪ, ಯೂತ್ ಫ್ರೇಂಡ್ಸ್ನ ಅಧ್ಯಕ್ಷ ಟಿಎಂಟಿ ಅಶ್ರಫ್, ಟಿ. ಸುರೇಶ್, ಎ. ಫರ್ಧಿನ್ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.