ಮಡಿಕೇರಿ, ಮಾ. ೨೬: ಮಾರ್ಚ್ ೩೧ರಂದು ವೀರ ಸೇನಾನಿ ಜನರಲ್ ಕೆ.ಎಸ್ ತಿಮ್ಮಯ್ಯ ಅವರ ೧೨೦ನೇ ವರ್ಷದ ಜನ್ಮದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಲು ಮಡಿಕೇರಿಯ ಎಫ್‌ಎಂಸಿ - ಜಿ.ಟಿ. ಫೌಂಡೇಶನ್ ಸಿದ್ಧತೆ ನಡೆಸುತ್ತಿದೆ ಎಂದು ಸಂಸ್ಥೆಯ ಸಂಚಾಲಕ ಪುತ್ತರಿರ ಪಪ್ಪು ತಿಮ್ಮಯ್ಯ ತಿಳಿಸಿದರು.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೀ.ಮಾ ಕೆ.ಎಂ ಕಾರ್ಯಪ್ಪ ಹಾಗೂ ಜ.ತಿಮ್ಮಯ್ಯ ಅವರ ಹುಟ್ಟುಹಬ್ಬ, ಪುಣ್ಯತಿಥಿಯನ್ನು ಸರಿಯಾದ ರೀತಿಯಲ್ಲಿ ಆಚರಿಸದಿರುವುದು ಹಾಗೂ ಅವರ ಸ್ಮಾರಕಗಳ ದುಸ್ಥಿತಿಯನ್ನು ಗಮನಿಸಿದ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಅವರು ಸ್ವಯಂಪ್ರೇರಿತರಾಗಿ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಮುಂದಾಗಿದ್ದಾರೆ. ಸೇನಾನಿಗಳ ಸ್ಮರಣಾರ್ಥ ಕಾರ್ಯಕ್ರಮಗಳನ್ನು ಆಯೋಜಿಸುವ ನಿಟ್ಟಿನಲ್ಲಿ ಸಮಾನ ಮನಸ್ಕರ ಸಮಿತಿಯನ್ನು ರಚಿಸಲಾಗಿದ್ದು, ಶಾಸಕ ಪೊನ್ನಣ್ಣ ಅಧ್ಯಕ್ಷರಾಗಿದ್ದಾರೆ ಎಂದರು.

ಮಾ.೩೧ರಂದು ಕೊಡಗಿನ ವೃದ್ದಾಶ್ರಮ ಹಾಗೂ ಅನಾಥಾಶ್ರಮಗಳಲ್ಲಿ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಲು ನಿರ್ಧರಿಸಿದ್ದು, ಈಗಾಗಲೇ ಸಿದ್ದತೆಗಳು ಪ್ರಾರಂಭಗೊAಡಿವೆ ಎಂದು ಅವರು ಮಾಹಿತಿ ನೀಡಿದರು. ನಗರದ ಸುದರ್ಶನ ವೃತ್ತ ಬಳಿಯ ಕೆ.ಎಂ ಕಾರ್ಯಪ್ಪ ಪ್ರತಿಮೆ ಒತ್ತಿನಲ್ಲೇ ಇರುವ ಜಾಗದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು, ಪೊಲೀಸ್ ಇಲಾಖೆ ಆ ಭಾಗದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಬೇಕೆಂದು ಪಪ್ಪು ತಿಮ್ಮಯ್ಯ ಮನವಿ ಮಾಡಿದರು.

ಮತ್ತೋರ್ವ ಸಂಚಾಲಕ ಚೊಟ್ಟೆಯಂಡ ಸಂಜು ಕಾವೇರಪ್ಪ ಮಾತನಾಡಿ, ಇಬ್ಬರು ಮಹಾನ್ ಸೇನಾನಿಗಳ ಪ್ರತಿಮೆಯನ್ನು ಸೂಕ್ತ ನಿರ್ವಹಣೆ ಮಾಡುವಲ್ಲಿ ನಗರಸಭೆ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮನೆಮನೆಗಳಲ್ಲೂ ಕೆ.ಎಂ ಕಾರ್ಯಪ್ಪ ಹಾಗೂ ಜ.ತಿಮ್ಮಯ್ಯ ಅವರ ಜನ್ಮದಿನವನ್ನು ಆಚರಿಸುವಂತಾಗಬೇಕು. ಆ ಮೂಲಕ ಕೊಡಗಿನ ಇಬ್ಬರು ವೀರರ ಬಗ್ಗೆ ಇಂದಿನ ಪೀಳಿಗೆಗೆ ಅರಿವು ಮೂಡಿಸುವ ಕೆಲಸವಾಗಬೇಕೆಂದು ಹೇಳಿದರು.

ಸಂಸ್ಥೆಯ ಸಹ ಸಂಚಾಲಕ ತೇಲಪಂಡ ಸುಬ್ಬಯ್ಯ ಮಾತನಾಡಿ, ಫೀ.ಮಾ ಕಾರ್ಯಪ್ಪ ಹಾಗೂ ಜ.ತಿಮ್ಮಯ್ಯ ಅವರನ್ನು ಹುಟ್ಟೂರಿನಲ್ಲೇ ಕಡೆಗಣಿಸುತ್ತಿರುವುದು ಬೇಸರದ ವಿಚಾರ ಎಂದರು. ಈ ಕುರಿತು ಜಿಲ್ಲಾಡಳಿತ ಮುತುವರ್ಜಿ ವಹಿಸಬೇಕಿದೆ ಎಂದರು. ಮತ್ತೋರ್ವ ಸಹ ಸಂಚಾಲಕ ಚಂಗAಡ ಸೂರಜ್ ತಮ್ಮಯ್ಯ ಮಾತನಾಡಿ, ಇಬ್ಬರು ಸೇನಾನಿಗಳು ಕೊಡಗಿಗೆ ಮಾತ್ರವಲ್ಲ, ಇಡೀ ದೇಶದ ಆಸ್ತಿಯಾಗಿದ್ದಾರೆ. ಆದ್ರೆ ಇಲ್ಲಿನವರಿಗೆ ಅವರ ಬೆಲೆ ಗೊತ್ತಿಲ್ಲದಿರುವುದು ವಿಷಾದನೀಯ ಎಂದರು.

ಈ ಹಿಂದೆಯೂ ಸ್ವಯಂಪ್ರೇರಿತವಾಗಿ ಸೇನಾನಿಗಳ ಹುಟ್ಟುಹಬ್ಬ, ಪ್ರತಿಮೆಗಳ ನಿರ್ವಹಣೆಯಂತಹ ಕೆಲಸಗಳನ್ನು ನಾವುಗಳು ಮಾಡಿದ್ದೇವೆ. ಆದರೆ ಸಂಬAಧಿಸಿದ ಇಲಾಖೆಗಳು, ಮತ್ತಿತರರಿಂದ ಸೂಕ್ತ ಸ್ಪಂದನ ಸಿಗದಿರುವುದು ಅಸಮಾಧಾನ ಮೂಡಿಸಿದೆ ಎಂದು ಈ ಪದಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಇದೀಗ ನೂತನವಾಗಿ ಎಫ್‌ಎಂಸಿ - ಜಿಟಿ ಫೌಂಡೇಶನ್ ಪ್ರಾರಂಭಿಸಲಾಗಿದ್ದು, ಮತ್ತಷ್ಟು ಕಾಳಜಿ ವಹಿಸಲಾಗುತ್ತಿರುವುದಾಗಿ ವಿವರಿಸಿದರು. ಸಂಸ್ಥೆಯ ಅಧ್ಯಕ್ಷರಾಗಿ ಎ.ಎಸ್. ಪೊನ್ನಣ್ಣ ಅವರು ಕಾರ್ಯನಿರ್ವಹಿಸುತ್ತಿದ್ದು, ಗೌರವ ಸಂಚಾಲಕರಾಗಿ ಅಜ್ಜೀನಂಡ ತಮ್ಮು ಪೂವಯ್ಯ, ಸಂಚಾಲಕರಾಗಿ ಚೊಟ್ಟೆಯಂಡ ಸಂಜು ಕಾವೇರಪ್ಪ ಹಾಗೂ ಪುತ್ತರೀರ ಪಪ್ಪು ತಿಮ್ಮಯ್ಯ ಕಾರ್ಯನಿರ್ವಹಿಸುತ್ತಿದ್ದಾರೆ. ಸಹ ಸಂಚಾಲಕರಾಗಿ ಪಾಲೆಂಗಡ ಅಮಿತ್ ಭೀಮಯ್ಯ, ಅಜ್ಜಮಕ್ಕಡ ವಿನು ಕುಶಾಲಪ್ಪ, ಚೋಕಿರ ಅನಿತಾ ಪ್ರವೀಣ, ಚೆಯ್ಯಂಡ ಸತ್ಯ, ತೇಲಪಂಡ ಸುಬ್ಬಯ್ಯ ಹಾಗೂ ಚಂಗAಡ ಸೂರಜ್ ತಮ್ಮಯ್ಯ ಅವರುಗಳು ಸಮಿತಿಯಲ್ಲಿ ಇದ್ದಾರೆ.