ಕೂಡಿಗೆ, ಮಾ. ೨೬: ಕೂಡಿಗೆ ಕ್ಲಸ್ಟರ್ ಕೇಂದ್ರ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಗೊಂಡ ಶಿಕ್ಷಕರನ್ನು ಕ್ಲಸ್ಟರ್ ಕೇಂದ್ರ ಹಾಗೂ ಸರ್ಕಾರಿ ಶಾಲಾ ಶಿಕ್ಷಕರ ಬಳಗದ ವತಿಯಿಂದ ಕೂಡುಮಂಗಳೂರು ಸಮೀಪದ ವಿಜಯನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನಿಸಿ, ಬೀಳ್ಕೊಡಲಾಯಿತು.
ನಿವೃತ್ತಗೊಂಡ ಕೂಡಿಗೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಎಂ.ಎA. ಸತೀಶ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜೇನುಕಲ್ಲುಬೆಟ್ಟ ಶಾಲೆಯ ಶಿಕ್ಷಕ ಎಂ.ಎನ್. ರಾಮೇಗೌಡ, ಕೂಡುಮಂಗಳೂರು ಶಾಲೆಯ ಶಿಕ್ಷಕಿ ಎ. ಭೋಜಮ್ಮ, ಸೀಗೆಹೊಸೂರು ಶಾಲೆಯ ಶಿಕ್ಷಕಿ ಟಿ.ಎಸ್. ವಿನೋದ, ಚಿಕ್ಕತ್ತೂರು ಶಾಲೆಯ ಶಿಕ್ಷಕ ಎಚ್.ಎಂ. ಪ್ರಕಾಶ್, ದೊಡ್ಡತ್ತೂರು ಶಾಲೆಯ ಶಿಕ್ಷಕ ಎಸ್.ಸಿ. ಗೋವಿಂದರಾಜ್ ಸೇರಿದಂತೆ ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಸಲ್ಲಿಸಿ ಬೇರೆ ಕ್ಲಸ್ಟರ್ಗಳ ಶಾಲೆಗಳಿಗೆ ವರ್ಗಾವಣೆಗೊಂಡಿರುವ ಎಸ್.ಆರ್. ಸುನಿತ, ಕೆ.ವಿ. ಕಮಲ ಅವರನ್ನು ಸನ್ಮಾನಿಸಲಾಯಿತು.
ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಸ್.ಎ. ಯೋಗೇಶ್, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ಇಂದಿನ ಶಿಕ್ಷಣ ಪದ್ಧತಿ ಸಾಕಷ್ಟು ಬದಲಾಗಿದೆ. ಮಕ್ಕಳನ್ನು ಶಿಕ್ಷಿಸದೇ ಪಾಠ ಮಾಡಬೇಕು ಎಂದು ಪಾಲಕರು ತಾಕೀತು ಮಾಡುತ್ತಿರುವುದರಿಂದ ಮಕ್ಕಳಿಗೆ ಪಾಠ ಮಾಡಲು ಶಿಕ್ಷಕರು ಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ ಎಂದರು.
ಕೂಡುಮAಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಮಕ್ಕಳ ಶೈಕ್ಷಣಿಕ ಪ್ರಗತಿ ಕೂಡ ಉತ್ತಮವಾಗಿದೆ. ಈ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯನ್ನು ವೃದ್ಧಿಸುವುದರೊಂದಿಗೆ ಸರ್ಕಾರಿ ಶಾಲೆಗಳ ಸಬಲೀಕರಣ ಮಾಡಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಸ್. ಪ್ರಸನ್ನ ಮಾತನಾಡಿ, ನಿವೃತ್ತ ಶಿಕ್ಷಕರನ್ನು ಆತ್ಮೀಯವಾಗಿ ಬೀಳ್ಕೊಡುತ್ತಿರುವುದು ಉತ್ತಮ ಕಾರ್ಯ ಎಂದು ಶ್ಲಾಘಿಸಿದರು. ಸನ್ಮಾನಿತರಾದ ನಿವೃತ್ತ ಉಪನ್ಯಾಸಕ ಎಂ.ಎA. ಸತೀಶ್ ಮಾತನಾಡಿ, ಶಿಕ್ಷಕರು ಉತ್ತಮ ಸಂಸ್ಕಾರ ನೀಡಿ ಮಕ್ಕಳ ಉಜ್ವಲ ಭವಿಷ್ಯ ರೂಪಿಸುತ್ತಾರೆ. ಆರೋಗ್ಯಕರ ಸಮಾಜ ನಿರ್ಮಾಣದಲ್ಲೂ ಶಿಕ್ಷಕರ ಪಾತ್ರ ಅವಿಸ್ಮರಣೀಯ ಎಂದರು. ಸಿ.ಆರ್.ಪಿ.ಕೆ. ಶಾಂತಕುಮಾರ್ ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರಗತಿ ಉತ್ತಮಗೊಳ್ಳಲು ಸಂಘಟಿತ ಪ್ರಯತ್ನ ಅಗತ್ಯ ಎಂದರು. ತಾಲೂಕು ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಶಿವಶಂಕರ್, ವಿವಿಧ ಶಾಲಾ ಮುಖ್ಯ ಶಿಕ್ಷಕರಾದ ಎಚ್.ಎಸ್. ಸುಜಾತ, ಕೆ.ಡಿ. ನವೀನ, ಸಣ್ಣಕ್ಕ, ರಾಜಣ್ಣ, ಎನ್.ಡಿ. ಚಂದ್ರಿಕ, ರೇಣುಕ, ಶಿಕ್ಷಕಿ ಎಚ್.ವಿ. ಲತಾಮಣಿ ಅನಿಸಿಕೆ ವ್ಯಕ್ತಪಡಿಸಿದರು. ಶಾಲಾ ಶಿಕ್ಷಕರು ಇದ್ದರು.