ಮಡಿಕೇರಿ, ಮಾ. ೨೫: ಮೊಟ್ಟಮೊದಲ ಬಾರಿಗೆ ಘೋಷಣೆಯಾದ ‘ಜಿಲ್ಲಾ ಮಟ್ಟದ’ ಗಾಂಧಿ ಗ್ರಾಮ ಪುರಸ್ಕಾರವನ್ನು ಕೊಡಗು ಜಿಲ್ಲಾ ಮಟ್ಟದಲ್ಲಿ ಪೊನ್ನಂಪೇಟೆಯ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಪಡೆದುಕೊಂಡಿದೆ. ಈ ಮೂಲಕ ಒಟ್ಟು ರೂ.೮ ಲಕ್ಷ ಪ್ರೋತ್ಸಾಹಧನವನ್ನು ವಿವಿಧ ಯೋಜನೆಗಳಲ್ಲಿ ಬಳಸಲು ಪಡೆದುಕೊಂಡಿದೆ.
ಗ್ರಾಮ ಪಂಚಾಯಿತಿಗಳು ಸ್ಥಳೀಯ ಮಟ್ಟದಲ್ಲಿ ಸ್ವಯಂ ಆಡಳಿತ ಸಂಸ್ಥೆಗಳಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕೆಂಬ ಸದುದ್ದೇಶದಿಂದ ರಾಜ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಗ್ರಾಮ ಪಂಚಾಯಿತಿಗಳನ್ನು ಪ್ರೋತ್ಸಾಹಿಸಲು ೨೦೧೩-೧೪ನೇ ಸಾಲಿನಿಂದ ಪ್ರತಿ ತಾಲೂಕಿಗೆ ಒಂದರAತೆ ಗ್ರಾಮ ಪಂಚಾಯಿತಿಯನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುತ್ತಿದೆ. ೨೦೨೪-೨೫ನೇ ಸಾಲಿಗೆ ಗಾಂಧಿ ಗ್ರಾಮ ಪುರಸ್ಕಾರವನ್ನು ತಾಲೂಕು ಮಟ್ಟದ ಜೊತೆಗೆ, ಜಿಲ್ಲಾ ಹಾಗೂ ವಿಭಾಗ ಮಟ್ಟಕ್ಕೂ ವಿಸ್ತರಿಸಲಾಗಿದೆ. ೨೦೨೪-೨೫ನೇ ಸಾಲಿಗೆ ಪ್ರಶಸ್ತಿ ಪಡೆದ ಪಂಚಾಯಿತಿಗಳ ವಿವರವನ್ನು ತಾ.೨೪ ರಂದು ಪಂಚಾಯತ್ ರಾಜ್ ಇಲಾಖೆ ಪ್ರಕಟಿಸಿದ್ದು, ಕೊಡಗು ಜಿಲ್ಲಾ ಮಟ್ಟದ ಗಾಂಧಿ ಗ್ರಾಮ ಪುರಸ್ಕಾರವನ್ನು ಪೊನ್ನಂಪೇಟೆ ತಾಲೂಕಿನ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಪಡೆದುಕೊಂಡಿದೆ. ರೂ.೮ ಲಕ್ಷ ಪ್ರೋತ್ಸಾಹಧನವನ್ನು ಈ ಮೂಲಕ ಪಂಚಾಯಿತಿಯು ಪಡೆಯಲಿದೆ.
ಉಳಿದಂತೆ ತಾಲೂಕು ಮಟ್ಟದ ಪ್ರಶಸ್ತಿಗಳನ್ನು ಕುಶಾಲನಗರ ತಾಲೂಕಿನ ಗುಡ್ಡೆಹೊಸೂರು ಪಂಚಾಯಿತಿ, ಮಡಿಕೇರಿ ತಾಲೂಕಿನ ಕರಿಕೆ ಪಂಚಾಯಿತಿ, ಸೋಮವಾರಪೇಟೆಯ ಶನಿವಾರಸಂತೆ ಪಂಚಾಯಿತಿ ಹಾಗೂ ವೀರಾಜಪೇಟೆ ತಾಲೂಕಿನ ಬೇಟೋಳಿ ಪಂಚಾಯಿತಿಗಳು ಪಡೆದುಕೊಂಡಿದ್ದು ತಲಾ ರೂ.೪ ಲಕ್ಷ ಪ್ರೋತ್ಸಾಹಧನಕ್ಕೆ ಭಾಜನವಾಗಿವೆ.
೨೦೨೪-೨೫ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ವಿಭಾಗ ಮಟ್ಟ, ಜಿಲ್ಲಾ ಮಟ್ಟ ಮತ್ತು ತಾಲೂಕು ಮಟ್ಟಕ್ಕೆ ಆಯ್ಕೆಯಾದ ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ಒಟ್ಟು ರೂ.೧,೧೭೬ ಲಕ್ಷ ಪ್ರೋತ್ಸಾಹಧನವನ್ನು ಬಿಡುಗಡೆಗೊಳಿಸಲು ಮಂಜೂರಾತಿ ನೀಡಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ತಾ.೨೪ ರಂದು ಆದೇಶಿಸಿದೆ.
೨೦೨೪-೨೦೨೫ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ, ರಾಜ್ಯದ ಒಟ್ಟು ೨೩೯ ತಾಲೂಕುಗಳ ಪೈಕಿ ಬಾಗಲಕೋಟೆ ಜಿಲ್ಲೆಯ ‘ತೇರದಾಳ’ ತಾಲೂಕನ್ನು ಹೊರತುಪಡಿಸಿ, ವಿಭಾಗ ಮಟ್ಟದ ಪುರಸ್ಕಾರಕ್ಕೆ ೧೨, ಜಿಲ್ಲಾ ಮಟ್ಟದ ಪುರಸ್ಕಾರಕ್ಕೆ ೩೧ ಹಾಗೂ ತಾಲೂಕು ಮಟ್ಟದ ಪುರಸ್ಕಾರಕ್ಕೆ ೧೯೫ ಗ್ರಾಮ ಪಂಚಾಯತಿಗಳು ಸೇರಿದಂತೆ ಒಟ್ಟು ೨೩೮ ಗ್ರಾಮ ಪಂಚಾಯತಿಗಳನ್ನು ರಾಜ್ಯ ಮಟ್ಟದ ಪರಾಮರ್ಶೆ ಸಮಿತಿ ಸಭೆಯಲ್ಲಿ ಆಯ್ಕೆ ಮಾಡಲಾಗಿತ್ತು. ಕೊಡಗಿನ ಒಟ್ಟು ೫ ಪಂಚಾಯಿತಿಗಳೂ ಇದರಲ್ಲಿ ಸೇರಿದ್ದು ಇದೀಗ ಹಣ ಬಿಡುಗಡೆಗೆ ಮಂಜೂರಾತಿಯಾಗಿದೆ.
ಬಿಡುಗಡೆಗೊಳಿಸಿದ ಪ್ರೋತ್ಸಾಹಧನವನ್ನು ಗಾಂಧಿ ಗ್ರಾಮ ಪುರಸ್ಕಾರ ಮಾರ್ಗಸೂಚಿಗಳನ್ವಯ ವಿನಿಯೋಗಿಸುವಂತೆ ಇಲಾಖೆಯ ಪ್ರಕಟಣೆಯಲ್ಲಿ ಆದೇಶಿಸಲಾಗಿದೆ.
ಮಾರ್ಗಸೂಚಿಗಳು
*ಗ್ರಾಮ ಪಂಚಾಯಿತಿ ಘನ ತ್ಯಾಜ್ಯ ನಿರ್ವಹಣಾ ಘಟಕದ ನವೀಕರಣ ಮತ್ತು ನಿರ್ವಹಣೆಗೆ ಸಂಬAಧಿಸಿದAತೆ, ಸ್ವಚ್ಛ ಸಂಕೀರ್ಣ ರೂಫ್ ಮತ್ತು ಗೋಡೆ ನಡುವೆ ಇರುವ ತೆರೆದ ಭಾಗದಲ್ಲಿ ಗ್ರಿಲ್ ಅಳವಡಿಸುವುದು, ಶೌಚಾಲಯ ವ್ಯವಸ್ಥೆ, ಬೇಲಿ ನಿರ್ಮಾಣ, ಸಂಪರ್ಕ ರಸ್ತೆ ನಿರ್ಮಾಣ ಮತ್ತು ಸಮರ್ಪಕ ವಿದ್ಯುದೀಕರಣ ವ್ಯವಸ್ಥೆ ಕಲ್ಪಿಸುವುದು.
*ಗ್ರಾಮ ಪಂಚಾಯಿತಿ ಕೂಸಿನ ಮನೆಗಳಿಗೆ ಮೂಲಭೂತ ಸೌಕರ್ಯಗಳಾದ ಅಡುಗೆ ಮನೆ ನಿರ್ಮಾಣ, ನೆಲಹಾಸು, ಗ್ಯಾಸ್ ಸ್ಟವ್ ಇಡಲು ಸ್ಲಾಬ್ ಅಳವಡಿಸುವುದು, ಮಕ್ಕಳ ಸ್ನೇಹಿ ಶೌಚಾಲಯ, ಮಕ್ಕಳಿಗೆ ಅನುಕೂಲವಾಗುವಂತೆ ವಾಷ್ ಬೇಸಿನ್, ಸಮರ್ಪಕ ವಿದ್ಯುದೀಕರಣ, ಫ್ಯಾನ್ ಅಳವಡಿಕೆ, ಮಕ್ಕಳು ಕುಳಿತುಕೊಳ್ಳಲು, ಮಲಗಲು ಜಮಖಾನೆ / ಚಾಪೆ, ಸೊಳ್ಳೆ ಪರದೆ ವ್ಯವಸ್ಥೆ, ಅವಶ್ಯಕ ಪೀಠೋಪಕರಣಗಳ ಮತ್ತು ಆಟೋಪಕರಣಗಳ ವ್ಯವಸ್ಥೆ ಕಲ್ಪಿಸುವುದು.
*ಗ್ರಾಮ ಪಂಚಾಯಿತಿ ಅರಿವು ಕೇಂದ್ರಗಳು, ಹೊಸ ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಮೂಲಭೂತ ಸೌಕರ್ಯ ಕುರಿತಂತೆ ಅಗತ್ಯ ದುರಸ್ತಿ, ಸಮರ್ಪಕ ವಿದ್ಯುದೀಕರಣ, ಯು.ಪಿ.ಎಸ್ ವ್ಯವಸ್ಥೆ ಕಲ್ಪಿಸುವುದು, ಫ್ಯಾನ್ ಅಳವಡಿಕೆ, ಶೌಚಾಲಯ ನಿರ್ಮಾಣ, ಸ್ಥಳಾವಕಾಶವಿದ್ದಲ್ಲಿ ಮಕ್ಕಳಿಗೆ ಹಿತವಾದ ಪೀಠೋಪಕರಣಗಳು, ರ್ಯಾಕ್ಗಳ ವ್ಯವಸ್ಥೆ, ಆಟೋಪಕರಣಗಳ ವ್ಯವಸ್ಥೆ ಮತ್ತು ವಿಶೇಷಚೇತನರಿಗೆ ಸಹಾಯಕ ಸಾಧನಗಳ ವ್ಯವಸ್ಥೆ ಕಲ್ಪಿಸುವುದು ಹಾಗೂ ಡಿಜಿಟಲ್ ಲೈಬ್ರರಿಗಳ ಸ್ಥಾಪನೆ ಮಾಡುವುದು.
*ಹೊಸ ಗ್ರಾಮ ಪಂಚಾಯಿತಿಗಳಿಗೆ ಅವಶ್ಯವಿರುವ ಪೀಠೋಪಕರಣ, ಕಂಪ್ಯೂಟರೀಕರಣಕ್ಕಾಗಿ ಅನುದಾನ ಭರಿಸುವುದು.
*ಪ್ರಸ್ತುತ ಇರುವ ಗ್ರಾಮ ಪಂಚಾಯಿತಿಯ ಕಟ್ಟಡ ದುರಸ್ತಿ ಮತ್ತು ನವೀಕರಣ, ಸಭಾ ಭವನ ನಿರ್ಮಾಣ ಮತ್ತು ನವೀಕರಣ ಮತ್ತು ಕಛೇರಿಗೆ ಹಾಗೂ ಅರಿವು ಕೇಂದ್ರಗಳಿಗೆ ಸಿ.ಸಿ ಟಿ.ವಿ ಅಳವಡಿಸುವುದು.
*ಬೀದಿ ದೀಪಗಳಿಗೆ ಸ್ವಯಂಚಾಲಿತ ನಿಯಂತ್ರಕಗಳನ್ನು ಅಳವಡಿಸುವುದು.
*ಇತರೆ ಯೋಜನೆಗಳ ಒಗ್ಗೂಡಿಸುವಿಕೆಯಡಿ ಗ್ರಾಮ ಪಂಚಾಯಿತಿ ಹೊಸ ಕಟ್ಟಡ ನಿರ್ಮಾಣ.
*ಗ್ರಾಮ ಪಂಚಾಯಿತಿಗಳಲ್ಲಿ ಬೀದಿ ದೀಪಗಳ ವ್ಯವಸ್ಥಿತ ಮೀಟರಿಂಗ್ ಅಳವಡಿಕೆ.