ಐಗೂರು, ಮಾ. ೨೫: ಸೋಮವಾರಪೇಟೆ-ಮಡಿಕೇರಿ ಹೆದ್ದಾರಿ ರಸ್ತೆಯ ನಡುವಿನ ಐಗೂರಿನಲ್ಲಿ ನೂತನ ಸೇತುವೆ ಕಾಮಗಾರಿ ಪ್ರಾರಂಭವಾದ ಹಿನ್ನೆಲೆ ಹೆದ್ದಾರಿ ಸಂಚಾರ ತಾತ್ಕಾಲಿಕ ಬಂದ್ ಮಾಡಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಕಾಜೂರು ಮುಖಾಂತರ ಬದಲಿ ಮಾರ್ಗವನ್ನು ವ್ಯವಸ್ಥೆ ಮಾಡಲಾಗಿದೆ.
ಸೋಮವಾರಪೇಟೆ-ಬೆಂಗಳೂರು ಕಡೆಗೆ ಪ್ರಯಾಣಿಸುವ ಪ್ರಯಾಣಿಕರು ಕಾಜೂರು ಜಂಕ್ಷನ್‌ನ ಅರಣ್ಯ ಇಲಾಖೆಯ ವಸತಿ ಗೃಹದ ಮುಂಭಾಗದಲ್ಲಿ ಬಸ್‌ಗಾಗಿ ಕಾಯುವುದು ಸಾಮಾನ್ಯ ದೃಶ್ಯವಾಗಿದೆ. ರಾಜ್ಯ ಸಾರಿಗೆ ಬಸ್ಸಿನ ಮುಂಗಡ ಟಿಕೆಟ್ ಪಡೆದು ರಾತ್ರಿ ವೇಳೆ ಸೋಮವಾರಪೇಟೆ-ಬೆಂಗಳೂರು ಕಡೆಗೆ ಪ್ರಯಾಣಿಸುವ ಪ್ರಯಾಣಿಕರು ಬಸ್‌ಗಾಗಿ ಕಾಯುವ ಈ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಆನೆಗಳ ಸಂಚಾರ ಹೆಚ್ಚಾಗಿದ್ದು, ಭೀತಿ ಮೂಡಿಸಿದೆ. ಮತ್ತೊಂದು ಆತಂಕದ ಸಂಗತಿ ಎಂದರೆ ಈ ಸ್ಥಳದಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಿದ್ದರೂ ಬಲ್ಬುಗಳು ಉರಿಯದೆ ಮೂರು ತಿಂಗಳು ಕಳೆದಿದ್ದು, ಪ್ರದೇಶವು ಸಂಪೂರ್ಣ ಕತ್ತಲೆಮಯವಾಗಿದೆ. ರಾತ್ರಿ ವೇಳೆ ಪ್ರಯಾಣಿಕರು ಆನೆಯ ಭೀತಿಯಲ್ಲಿ ಬಸ್‌ಗಾಗಿ ಕಾಯಬೇಕಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಮಾರ್ಗದ ನಾಮಫಲಕವನ್ನು ಐಗೂರಿನ ಸಂಗಮ್ ಯುವಕ ಸಂಘ ಉಚಿತವಾಗಿ ಅಳವಡಿಸಿದ್ದು, ಆದಷ್ಟು ಬೇಗ ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳು ಬೀದಿ ದೀಪಗಳನ್ನು ಅಳವಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.