ಸೋಮವಾರಪೇಟೆ, ಮಾ. ೨೫: ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮನೆಗಳನ್ನು ಕಟ್ಟಿಕೊಂಡು ನೆಲೆಸಿರುವ ಬಡ ಮಂದಿಯ ನಿವೇಶನಗಳನ್ನು ಸಕ್ರಮಗೊಳಿಸುವ ಉದ್ದೇಶದಿಂದ ಜಾರಿಗೆ ತಂದ ೯೪ ಸಿ ಹಾಗೂ ೯೪ ಸಿ.ಸಿ. ಅರ್ಜಿ ಸ್ವೀಕೃತಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಬೇಕೆಂದು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಸರ್ಕಾರದ ಗಮನ ಸೆಳೆದರು.

ವಿಧಾನ ಸಭಾ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಶಾಸಕ ಡಾ. ಮಂತರ್ ಗೌಡ ಅವರು, ಮಡಿಕೇರಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೯೪ ಸಿ ಹಾಗೂ ೯೪ಸಿ.ಸಿ. ಅಡಿಯಲ್ಲಿ ಸಲ್ಲಿಸಿದ್ದ ಹಲವು ಅರ್ಜಿಗಳು ರದ್ದಾಗಿವೆ. ಈ ಹಿನ್ನೆಲೆ ಮತ್ತೊಮ್ಮೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಇಲ್ಲವಾದಲ್ಲಿ ಈಗಾಗಲೇ ಸಲ್ಲಿಸಿರುವ ಅರ್ಜಿಗಳನ್ನು ಮತ್ತೊಮ್ಮೆ ಪುನರ್ ಪರಿಶೀಲಿಸಿ ಸಕ್ರಮ ಮಾಡಬೇಕೆಂದು ಕಂದಾಯ ಸಚಿವರ ಗಮನ ಸೆಳೆದರು.

ಕಂದಾಯ ಸಚಿವರ ಅನುಪಸ್ಥಿತಿಯಲ್ಲಿ ಅರಣ್ಯ ಇಲಾಖಾ ಸಚಿವ ಈಶ್ವರ್ ಖಂಡ್ರೆ ಅವರು ಸದನಕ್ಕೆ ಉತ್ತರ ನೀಡಿದರು. ಕಳೆದ ೧.೧.೨೦೧೫ರ ಪೂರ್ವದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ವಾಸದ ಮನೆಗಳನ್ನು ಸಕ್ರಮಗೊಳಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆ ೬೪ರ ಕಲಂ ೯೪ ಸಿ. ಮತ್ತು ೯೪ ಸಿ. ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಲು ೩೧ ಮಾರ್ಚ್ ೨೦೨೨ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಸಕ್ರಮ ಕೋರಿ ನಮೂನೆ ೩ಎ. ಅಡಿಯಲ್ಲಿ ಪೂರಕ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಲು ತಿಳಿಸಲಾಗಿತ್ತು. ಈ ಬಗ್ಗೆ ತಹಶೀಲ್ದಾರ್‌ಗಳು ನೋಟೀಸ್ ನೀಡಿ ಕ್ರಮ ವಹಿಸಬೇಕಾಗಿರುತ್ತದೆ. ಇದರೊಂದಿಗೆ ಸಂಬAಧಪಟ್ಟ ತಾಲೂಕಿನ ತಹಶೀಲ್ದಾರ್‌ಗಳು ಸಕ್ಷಮ ಪ್ರಾಧಿಕಾರಿಗಳಾಗಿದ್ದು, ಅರ್ಹ ಅರ್ಜಿದಾರರಿಗೆ ನಿಯಮಾನುಸಾರ ಹಕ್ಕುಪತ್ರ ವಿತರಿಸಲು ಅವಕಾಶವಿದೆ. ಮಡಿಕೇರಿ ಕ್ಷೇತ್ರಕ್ಕೆ ಸಂಬAಧಿಸಿದAತೆ ೯೪ ಸಿ. ಅಡಿಯಲ್ಲಿ ೧೬,೮೪೬ ಅರ್ಜಿಗಳು ಸ್ವೀಕೃತಗೊಂಡಿವೆ. ಇದರಲ್ಲಿ ೪,೯೩೪ ಅರ್ಜಿಗಳನ್ನು ಸಕ್ರಮಗೊಳಿಸಲಾಗಿದೆ. ೧೧,೧೧೨ ಅರ್ಜಿಗಳು ತಿರಸ್ಕೃತಗೊಂಡಿವೆ. ೯೪ ಸಿಸಿ ಅಡಿಯಲ್ಲಿ ಒಟ್ಟು ೨,೭೦೦ ಅರ್ಜಿಗಳು ಸ್ವೀಕೃತಗೊಂಡಿದ್ದು, ೧,೧೬೧ ಅರ್ಜಿಗಳನ್ನು ಸಕ್ರಮಗೊಳಿಸಲಾಗಿದೆ. ೧,೫೩೯ ಅರ್ಜಿಗಳು ತಿರಸ್ಕೃತಗೊಂಡಿದ್ದು, ಎರಡೂ ಯೋಜನೆಯಡಿ ಯಾವುದೇ ಅರ್ಜಿಗಳು ಬಾಕಿಯಿಲ್ಲ ಎಂದರು.

ಮುAದುವರೆದು ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ವಾಸದ ಮನೆಗಳನ್ನು ಸಕ್ರಮಗೊಳಿಸಲು, ಕಾಯ್ದೆ ೬೪ರ ೯೪ ಸಿ. ಮತ್ತು ೯೪ಸಿ.ಸಿ. ಅಡಿಯಲ್ಲಿ ಹೊಸದಾಗಿ ಅರ್ಜಿ ಸ್ವೀಕರಿಸಲು ಅನುವಾಗುವಂತೆ ಕಾಲಾವಕಾಶ ವಿಸ್ತರಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಉತ್ತರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಡಾ. ಮಂತರ್ ಗೌಡ, ೨೦೨೨ನೇ ಮಾರ್ಚ್ ೩೧ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದರೂ ಸಹ, ನಂತರ ಹಲವಾರು ನಾಗರಿಕರು ಸರ್ಕಾರಿ ಜಾಗದಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಅರಣ್ಯ ಜಾಗವನ್ನು ಹೊರತುಪಡಿಸಿ ಸರ್ಕಾರಿ ಪೈಸಾರಿ ಜಾಗದಲ್ಲಿ ಮನೆಗಳನ್ನು ಕಟ್ಟಿಕೊಂಡಿರುವ ಸಾರ್ವಜನಿಕರ ಅರ್ಜಿಗಳನ್ನು ಸಕ್ರಮಗಳೊಳಿಸಲು ಮತ್ತೊಮ್ಮೆ ಸರ್ಕಾರ ಕ್ರಮ ವಹಿಸಬೇಕೆಂದು ಗಮನ ಸೆಳೆದರು.ಹೊಸದಾಗಿ ಅರ್ಜಿ ಸ್ವೀಕರಿಸಲು ಅವಕಾಶ ಕಲ್ಪಿಸಲು ಸರ್ಕಾರ ಅವಕಾಶ ನೀಡಬೇಕು. ಇದರೊಂದಿಗೆ ಈಗಾಗಲೇ ತಿರಸ್ಕೃತಗೊಂಡಿರುವ ಅರ್ಜಿಗಳನ್ನೂ ಪುನರ್ ಪರಿಶೀಲಿಸಬೇಕು ಎಂದರು. ನಮ್ಮ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿವೇಶನ ರಹಿತರಿದ್ದು, ಹಲವರು ಇಂದಿಗೂ ಲೈನ್‌ಮನೆಗಳಲ್ಲಿ ವಾಸವಿದ್ದಾರೆ. ಕೆಲವರು ಪೈಸಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಇವರುಗಳನ್ನು ತೆರವುಗೊಳಿಸಲು ಸರ್ಕಾರಗಳು ಹಾಗೂ ನಮ್ಮಂತ ಜನಪ್ರತಿನಿಧಿಗಳು ಬಿಡುವುದಿಲ್ಲ. ಈ ಹಿನ್ನೆಲೆ ೯೪ಸಿ ಮತ್ತು ೯೪ ಸಿ.ಸಿ.ಗೆ ಅರ್ಜಿ ಸಲ್ಲಿಸಲು ಸರ್ಕಾರ ಮತ್ತೊಮ್ಮೆ ಅವಕಾಶ ಕಲ್ಪಿಸಬೇಕೆಂದು ಸದನದ ಗಮನ ಸೆಳೆದರು. - ವಿಜಯ್