ಕಣಿವೆ, ಮಾ. ೨೫: ಕಾವೇರಿ ನದಿ ಕಲುಷಿತಗೊಳ್ಳುತ್ತಿರುವ ಕುರಿತು ಗಮನ ಸೆಳೆಯುವ ವರದಿ ಶಕ್ತಿ ದಿನಪತ್ರಿಕೆಯಲ್ಲಿ ಪ್ರಕಟಗೊಂಡ ಬೆನ್ನಲ್ಲೆ ಅಧಿಕಾರಿಗಳ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿತು.
ಹೆಬ್ಬಾಲೆ ಬಳಿಯ ಕಾವೇರಿ ನದಿ ಪರಿಸರಕ್ಕೆ ಕುಡಿಯುವ ನೀರು ಯೋಜನೆಯ ಅಧಿಕಾರಿಗಳು ಭೇಟಿ ನೀಡಿದರು. ಕುಡಿಯುವ ನೀರು ಯೋಜನೆಯ ಜಿಲ್ಲಾ ಕಾರ್ಯಪಾಲಕ ಅಭಿಯಂತರ ಆರ್. ಭಾಸ್ಕರ್ ಅವರ ನಿರ್ದೇಶನದ ಮೇರೆಗೆ ಸೋಮವಾರಪೇಟೆ ಸಹಾಯಕ ಕಾರ್ಯಪಾಲಕ ಅಭಿಯಂತರ ವೀರೇಂದ್ರ ನೇತೃತ್ವದ ತಂಡ ಹೆಬ್ಬಾಲೆ ಸೂಳೆಕೋಟೆ ಮಾರ್ಗದ ಕಾವೇರಿ ನದಿಯ ಕುಡಿಯುವ ನೀರು ಜಾಕ್ವೆಲ್ ಬಳಿ ತೆರಳಿ ಅಲ್ಲಿ ಪರಿಶೀಲನೆ ಮಾಡಿದರು.
ಕುಡಿವ ನೀರಿನ ಜಲಮೂಲಗಳ ಸಂರಕ್ಷಣೆ ಹಾಗೂ ಸ್ವಚ್ಛತೆ ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಬೇಕಿದೆ.
ಸಾವಿರಾರು ಮಂದಿ ಕುಡಿಯುವ ಶುದ್ಧ ನೀರನ್ನು ಕಲುಷಿತಗೊಳಿಸುವುದು ಅಪರಾಧ ಚಟುವಟಿಕೆಯಾಗಿದೆ. ಈ ಬಗ್ಗೆ ಇಲಾಖೆ ವತಿಯಿಂದ ಜಾಕ್ವೆಲ್ ಬಳಿ ಸಿಸಿ ಕ್ಯಾಮರಾ ಅಳವಡಿಸಲಾಗುವುದು.
ನದಿಯಿಂದ ಮೇಲೆತ್ತುವ ನೀರನ್ನು ಶುದ್ಧೀಕರಿಸಿದ ನಂತರ ಪೂರೈಸಲಾಗುತ್ತಿದೆ. ಜನರು ಆತಂಕ ಪಡಬೇಕಿಲ್ಲ. ಕಾವೇರಿ ನದಿಯಲ್ಲಿ ನೀರಿನ ಹರಿವು ಕುಂಠಿತವಾಗುತ್ತಿದ್ದು, ನೀರನ್ನು ಕುದಿಸಿ ಕುಡಿಯಬೇಕು.
ನೀರಿನ ಗುಣಮಟ್ಟವನ್ನು ಪ್ರಯೋಗಾಲಯದ ಸಿಬ್ಬಂದಿಗಳಿAದ ಪರೀಕ್ಷಿಸಲಾಗುತ್ತಿದೆ. ಕಾವೇರಿ ನದಿಯ ಸೇತುವೆಯ ಮೇಲಿಂದ ನದಿಯ ನೀರಿಗೆ ತ್ಯಾಜ್ಯ ವಸ್ತುಗಳನ್ನು ಎಸೆಯದಂತೆ ಸೇತುವೆಯ ಎರಡೂ ಬದಿಗಳಲ್ಲಿ ಮೆಶ್ ಅಳವಡಿಸಲು ಕಾವೇರಿ ನೀರಾವರಿ ನಿಗಮಕ್ಕೆ ಪತ್ರ ವ್ಯವಹಾರ ಮಾಡಲಾಗುವುದು. ಸ್ಥಳೀಯ ಹೆಬ್ಬಾಲೆ ಗ್ರಾಮ ಪಂಚಾಯಿತಿ ಆಡಳಿತದ ವತಿಯಿಂದಲೂ ನದಿಯ ಸ್ವಚ್ಛತೆ ಹಾಗೂ ಕುಡಿಯುವ ನೀರು ಘಟಕದ ನಿರ್ವಹಣೆಗೆ ಜವಾಬ್ದಾರಿ ತೆಗೆದುಕೊಳ್ಳುವಂತೆ ಮತ್ತು ನದಿಗೆ ಕಸ ಬಿಸಾಕುವವರನ್ನು ಪತ್ತೆ ಹಚ್ಚಿ ಅವರಿಗೆ ದಂಡ ವಿಧಿಸುವ ಮೂಲಕ ಶಿಕ್ಷೆಗೆ ಒಳಪಡಿಸುವಂತೆ ಅಧಿಕಾರಿಗಳಿಗೆ ಕೋರಲಾಗುತ್ತದೆ ಎಂದು ಕಾರ್ಯಪಾಲಕ ಅಭಿಯಂತರ ಭಾಸ್ಕರ್ ದೂರವಾಣಿಯ ಮೂಲಕ ‘ಶಕ್ತಿ’ಗೆ ಮಾಹಿತಿ ನೀಡಿದರು. ನದಿಯ ನೀರು ಹಾಗು ಪರಿಸರವನ್ನು ಕಲುಷಿತ ಮಾಡಿದರೆ ಮಹಾಪಾಪ. ಆದ್ದರಿಂದ ಸಾರ್ವಜನಿಕರು ಕುಡಿಯುವ ಶುದ್ಧಗಂಗೆ ಹರಿಸುವ ಕಾವೇರಿಯನ್ನು ಪೂಜನೀಯ ಭಾವದಿಂದ ಕಾಣುವಂತಾಗಬೇಕು ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರ ವೀರೇಂದ್ರ ಹೇಳಿದರು.