ಪೊನ್ನಂಪೇಟೆ, ಮಾ. ೨೪: ಗೋಣಿಕೊಪ್ಪಲು ಕಾವೇರಿ ಕಾಲೇಜು ಐಕ್ಯೂಎಸಿ ಹಾಗೂ ಮಹಿಳಾ ಕೋಶದ ವತಿಯಿಂದ ಮಹಿಳಾ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೋಣಿಕೊಪ್ಪಲು ಕಾವೇರಿ ಕಾಲೇಜು ಉಪ ಪ್ರಾಂಶುಪಾಲರಾದ ಪ್ರೊ. ಎಂ.ಎಸ್. ಭಾರತಿ, ಹೆಣ್ಣು ದೇವರ ಅದ್ಭುತ ಸೃಷ್ಟಿಯಾಗಿದ್ದು, ಆಕೆ ಜೀವನದಲ್ಲಿ ಹಲವಾರು ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಾ ಬರುತ್ತಿದ್ದಾಳೆ. ಮಹಿಳೆಯರನ್ನು ಗೌರವದಿಂದ ಕಾಣುವ ಪ್ರದೇಶದಲ್ಲಿ ದೇವರು ವಾಸಿಸುತ್ತಾನೆ ಎಂಬ ಉಕ್ತಿ ಕೇವಲ ಭಾಷಣಕ್ಕೆ ಸೀಮಿತವಾಗದೆ ಆಚರಣೆಯಲ್ಲಿ ಬರಬೇಕು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿನಂತೆ ಮಹಿಳೆಯರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ಉನ್ನತ ಶಿಕ್ಷಣದಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ಸಿಗುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಂತರರಾಷ್ಟಿçÃಯ ಯೋಗ ಶಿಕ್ಷಕಿ ಹಂಸ ಜೀವನ್ ಮಾತನಾಡಿ, ಮಹಿಳೆಯರು ತಮ್ಮ ದೈನಂದಿನ ಒತ್ತಡಗಳನ್ನು ನಿವಾರಿಸಿಕೊಂಡು, ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢವಾಗಿರಲು ನಿಯಮಿತವಾಗಿ ಯೋಗಭ್ಯಾಸ ಮಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನೆರೆದಿದ್ದ ಮಹಿಳೆಯರಿಗೆ ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳಲು ಮಾಡಬಹು ದಾದ ಸರಳ ಯೋಗಭ್ಯಾಸವನ್ನು ಮಾಡಿಸಿದರು.
ಈ ಸಂದರ್ಭ ಕಳೆದ ೩೫ ವರ್ಷಗಳಿಂದ ಕಾವೇರಿ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರೊ. ಎಂ. ಎಸ್. ಭಾರತಿ ಹಾಗೂ ಇತ್ತೀಚೆಗೆ ಡಾಕ್ಟರೇಟ್ ಪದವಿ ಪಡೆದ ಡಾ. ಸಿ.ಟಿ. ಕಾವ್ಯ ಅವರನ್ನು ಸನ್ಮಾನಿಸಲಾಯಿತು.
ಮಹಿಳಾ ಸಿಬ್ಬಂದಿಗಳಿಗೆ ಮನರಂಜನಾ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿ
ತು. ಮಹಿಳೆಯರು ನೃತ್ಯ ಹಾಗೂ ಗಾಯನದ ಮೂಲಕ ರಂಜಿಸಿದರು. ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕಿ ಡಾ. ನಯನ ತಮ್ಮಯ್ಯ, ಮಹಿಳಾ ಕೋಶದ ಸಂಚಾಲಕರಾದ ಕೆ.ಎ. ಕವಿತ, ಪಿ.ಎಸ್. ದಿವ್ಯ ಇದ್ದರು. ಪೂನಂ ಪೂವಮ್ಮ ಅತಿಥಿ ಪರಿಚಯ ಮಾಡಿದರು. ಡಾ. ರೇವತಿ ಪ್ರಾರ್ಥಿಸಿ, ಕವಿತ ಸ್ವಾಗತಿಸಿ, ದಿವ್ಯ ವಂದಿಸಿದರು. ಭಾಗ್ಯ ಮತ್ತು ಕಾವೇರಮ್ಮ ನಿರೂಪಿಸಿದರು.