ಸಿದ್ದಾಪುರ, ಮಾ.೨೪: ಎಸ್.ಎನ್.ಡಿ.ಪಿ. ಜಿಲ್ಲಾ ವನಿತಾ ಸಂಘಟನೆ, ಎಸ್.ಎನ್.ಡಿ.ಪಿ. ಇಂಜಿಲಗೆರೆಯ ಗೌರಿ ಶಾಖೆ ಹಾಗೂ ಮೂರ್ನಾಡುವಿನ ಕೊಡಗು ಆಯುರ್ವೇದಿಕ್ ಕೇರ್ ಸಂಯುಕ್ತ ಆಶ್ರಯದಲ್ಲಿ ಇಂಜಿಲಗೆರೆ ಗ್ರಾಮದ ಶ್ರೀ ಅಯ್ಯಪ್ಪ ದೇವಾಲಯದ ಸಭಾಂಗಣದಲ್ಲಿ ಉಚಿತ ಆರೋಗ್ಯ ಶಿಬಿರ ನಡೆಯಿತು.

ಕಾರ್ಯಕ್ರಮವನ್ನು ಜಿಲ್ಲಾ ಎಸ್.ಎನ್.ಡಿ.ಪಿ. ಯೂನಿಯನ್‌ನ ಅಧ್ಯಕ್ಷ ವಿ.ಕೆ ಲೋಕೇಶ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಆಯುರ್ವೇದಿಕ್ ಚಿಕಿತ್ಸೆಯು ಪ್ರಾಚೀನ ಕಾಲದ ಚಿಕಿತ್ಸೆಯಾಗಿದೆ. ದೇಶದ ಪರಂಪರೆಯನ್ನು ಹೊಂದಿರುವ ಆಯುರ್ವೇದಿಕ್ ಔಷಧಿಗಳನ್ನು ಋಷಿ-ಮುನಿಗಳು ಕೂಡ ಬಳಸುತ್ತಿದ್ದರು, ವಿದೇಶಿಯರು ಕೂಡ ಇದೀಗ ಬಳಸುತ್ತಿದ್ದಾರೆ. ಉತ್ತಮ ಆರೋಗ್ಯಕ್ಕೆ ಆಯುರ್ವೇದಿಕ್ ಔಷಧಿಗಳು ಸಹಕಾರಿ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಎನ್.ಡಿ.ಪಿ ವನಿತಾ ಸಂಘದ ಜಿಲ್ಲಾಧ್ಯಕ್ಷೆ ರೀಶಾ ಸುರೇಂದ್ರನ್ ಮಾತನಾಡಿ, ಪ್ರತಿಯೊಬ್ಬ ಮನುಷ್ಯನಿಗೂ ಆರೋಗ್ಯವೇ ಮುಖ್ಯವಾಗಿದ್ದು, ಆರೋಗ್ಯವೇ ಭಾಗ್ಯವಾಗಿದೆ. ಈ ಹಿನ್ನಲೆಯಲ್ಲಿ ಸಂಘಟನೆ ವತಿಯಿಂದ ಪುಲಿಯೇರಿ ಗ್ರಾಮದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಇತ್ತೀಚಿನ ದಿನಗಳಲ್ಲಿ ಮನುಷ್ಯನಲ್ಲಿ ಅನೇಕ ಕಾಯಿಲೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಇಂತಹ ಶಿಬಿರಗಳಲ್ಲಿ ಪಾಲ್ಗೊಂಡು ತಪಾಸಣೆಯನ್ನು ಮಾಡಿಕೊಂಡಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಮೂರ್ನಾಡು ಆಯುರ್ವೇದ ಆಸ್ಪತ್ರೆಯ ಮುಖ್ಯಸ್ಥರಾದ ಜೈಸನ್, ವೈದ್ಯರುಗಳಾದ ಡಾ. ಅನೂಪ್, ಡಾ. ದೀಪಿತ, ಇಂಜಿಲಗೆರೆ ಶಾಲೆಯ ಅಧ್ಯಕ್ಷ ಹರಿದಾಸ್ ಪಿ.ಜಿ, ಉಪಾಧ್ಯಕ್ಷ ಮಣಿಲಾಲ್, ಕಾರ್ಯದರ್ಶಿ ಎಂ.ಜಿ ರಾಜು, ಗ್ರಾಮದ ಪ್ರಮುಖರಾದ ಕೋಡಿರ ಕುಶಿ ಭೀಮಯ್ಯ, ಸುಗದನ್, ಸುರೇಶ್ ಪಿ.ಎಸ್ ಹಾಗೂ ಇನ್ನಿತರರು ಹಾಜರಿದ್ದರು.

ಸಂಘದ ಕಾರ್ಯದರ್ಶಿ ಅನಿತಾ ಮಣಿಲಾಲ್ ಸ್ವಾಗತಿಸಿ, ಖಜಾಂಚಿ ಧರ್ಮಜ ವಂದಿಸಿದರು. ಉಚಿತ ಆರೋಗ್ಯ ತಪಾಸಣೆಯಲ್ಲಿ ಸುತ್ತಮುತ್ತಲ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.