ಕೆ.ಎಸ್.ಮೂರ್ತಿ
ಕಣಿವೆ, ಮಾ. ೨೪: ಕುಶಾಲನಗರ ತಾಲೂಕಿನ ಮುಳ್ಳುಸೋಗೆಯಿಂದ ಹೆಬ್ಬಾಲೆಯವರೆಗೆ ಹನ್ನೆರಡು ಗ್ರಾಮಗಳಿಗೆ ಕುಡಿಯುವ ನೀರನ್ನು ಮನೆ ಮನೆಗೆ ಹರಿಸುವ ಕುಡಿಯುವ ಶುದ್ಧ ನೀರಿನ ಯೋಜನೆ ಅಶುದ್ಧವಾಗಿ ಮಾರ್ಪಟ್ಟರೂ ಕೂಡ ಸಂಬAಧ ಪಟ್ಟ ಇಲಾಖೆಗಳ ನಿರ್ಲಕ್ಷö್ಯ ಹಾಗೂ ಬೇಜವಾಬ್ದಾರಿಯಿಂದಾಗಿ ಕಾವೇರಿ ನದಿ ದಂಡೆಯ ಗ್ರಾಮೀಣ ಪ್ರದೇಶಗಳ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಈಗಾಗಲೇ ಈ ಕಲುಷಿತ ನೀರು ಕುಡಿಯುತ್ತಿರುವ ನದಿ ದಂಡೆಯ ನಿವಾಸಿಗಳು ವಿವಿಧ ಸಾಂಕ್ರಾಮಿಕ ಬಾಧೆಗಳಿಂದಾಗಿ ಸ್ಥಳೀಯ ಆಸ್ಪತ್ರೆಗಳಿಗೆ ಎಡತಾಕುತ್ತಿರುವುದು ಕಂಡು ಬರುತ್ತಿದೆ. ನದಿ, ಕೆರೆ ಜಲ ಮೂಲಗಳಿಗೆ ಕಸ ತ್ಯಾಜ್ಯ ಬಿಸಾಡುತ್ತಿರುವ ಪರಿಣಾಮ ಸುಮಾರು ೫೦ ಸಾವಿರ ಮಂದಿಯ ದಾಹ ನೀಗಿಸುವ ಕಾವೇರಿ ನದಿಯು ತೀರಾ ಕಲುಷಿತಗೊಂಡಿದೆ. ಹೆಬ್ಬಾಲೆ ಗ್ರಾಮದಿಂದ ಸೂಳೆಕೋಟೆಗೆ ತೆರಳುವ ಸೇತುವೆಯ ಮೇಲಿಂದ ಕಸ ತ್ಯಾಜ್ಯಗಳನ್ನು ತುಂಬಿಸಿದ ಚೀಲಗಳನ್ನು ತಂದು ಬಿಸಾಕುತ್ತಿರುವ ದುರುಳರಿಂದಾಗಿ ಜೀವ ನದಿ ಕಾವೇರಿ ಕಲುಷಿತಗೊಳ್ಳುತ್ತಿದೆ. ಈ ಕಲುಷಿತ ನೀರು ನದಿಯ ಜಲಾಗಾರದ ನೀರು ಕೊಳವೆಗೆ ನೇರವಾಗಿ ಹರಿಯುತ್ತಿದೆ. ಈ ನೀರನ್ನು ಹೆಬ್ಬಾಲೆಯಿಂದ ಗುಮ್ಮನಕೊಲ್ಲಿವರೆಗಿನ ೧೨ ಗ್ರಾಮಗಳ ಸುಮಾರು ೫೦ ಸಾವಿರ ಮಂದಿ ಕುಡಿಯುತ್ತಿದ್ದಾರೆ. ಜಲಜೀವನ್ ಯೋಜನೆಯಡಿ ಕೈಗೊಂಡಿರುವ ಈ ನೀರಿನ ಯೋಜನೆ ಅಧಿಕಾರಿಗಳ ನಿರಾಸಕ್ತಿಯಿಂದಾಗಿ ಸಂಪೂರ್ಣವಾಗಿ ನಿರ್ಲಕ್ಷö್ಯಕ್ಕೊಳಗಾಗಿದೆ ಎಂಬುದು ಸ್ಥಳೀಯರ ದೂರು. ಅಧಿಕಾರಿಗಳು ಇತ್ತ ಬಂದು ಪರಿಶೀಲನೆ ಮಾಡುತ್ತಿಲ್ಲ. ನದಿಯ ಸೇತುವೆಯ ಮೇಲಿಂದ ತ್ಯಾಜ್ಯ ಬಿಸಾಕುವ ದುರುಳರನ್ನು ಪತ್ತೆ ಹಚ್ಚುವ ಮೂಲಕ ಅವರಿಗೆ ಶಿಕ್ಷೆಯಾದಾಗ ಮಾತ್ರ ಇಂತಹ ಘೋರ ಸನ್ನಿವೇಶಗಳಿಗೆ ಕಡಿವಾಣ ಬಿದ್ದಂತಾಗುತ್ತದೆ. ಕಾವೇರಿ ನದಿಯನ್ನು ಸಂರಕ್ಷಿಸುವ ಕನಿಷ್ಟ ವಿವೇಚನೆ ಇಲ್ಲದ ಇಂತಹ ಮಂದಿಯನ್ನು ಪತ್ತೆ ಹಚ್ಚುವ ಮೂಲಕ ಕಠಿಣ ಶಿಕ್ಷೆಗೆ ಒಳಪಡಿಸಿದಾಗ ಮಾತ್ರ ನದಿಯ ಸಂರಕ್ಷಣೆ ಸಾಧ್ಯವಾಗುತ್ತದೆ ಎಂಬುದು ಗ್ರಾಪಂ ಮಾಜಿ ಸದಸ್ಯ ಮರೂರು ಮಹದೇವ್, ನಾಗರಾಜು, ಭಿಕ್ಷೇಷ್ ಮುಂತಾದವರ ಅಭಿಪ್ರಾಯವಾಗಿದೆ. ಮಾಂಸದ ಅಂಗಡಿಗಳ ತ್ಯಾಜ್ಯಗಳು, ಹೇರ್ ಕಟ್ಟಿಂಗ್ ಅಂಗಡಿಗಳ ತ್ಯಾಜ್ಯ, ಬೇಕರಿಗಳಿಂದ ಉತ್ಪತ್ತಿಯಾಗುವ ತ್ಯಾಜ್ಯ ಸೇರಿದಂತೆ ವಾಣಿಜ್ಯ ಮಳಿಗೆಗಳ ಅನುಪಯುಕ್ತ ಕಸವನ್ನು ಚೀಲದೊಳಗೆ ತುಂಬಿಸಿ ನದಿಗೆ ಹಾಕಲಾಗುತ್ತಿದೆ. ಈ ತ್ಯಾಜ್ಯಗಳ ರಾಶಿಯ ಬಳಿಯೇ ನೀರೆತ್ತುವ ಯಂತ್ರಾಗಾರದ ಕೊಳವೆಯಿದ್ದು ಅದರೊಳಗೆ ಕಸ ತ್ಯಾಜ್ಯದ ಕಲುಷಿತ ನೀರು ಹರಿಯುತ್ತಿದೆ. ಈ ತ್ಯಾಜ್ಯ ಪರಿಸರದ ನದಿಯೊಳಗಿನ ನೀರಿನಲ್ಲಿ ಸಾಂಕ್ರಾಮಿಕ ರೋಗ ಬಾಧೆಯ ಕೀಟಗಳ ರಾಶಿಯೇ ಇದ್ದು ಇದೂ ಕೂಡ ಕುಡಿಯುವ ನೀರಿನಲ್ಲಿ ಸೇರುತ್ತಿದೆ ಎಂಬುದು ಸ್ಥಳೀಯರ ದೂರು. ಆದ್ದರಿಂದ ಕೂಡಲೇ ಹೆಬ್ಬಾಲೆ ಸೂಳೆಕೋಟೆ ಮಾರ್ಗದ ಕಾವೇರಿ ನದಿಯ ಸೇತುವೆಯ ಎರಡೂ ಬದಿಗಳಲ್ಲಿ ಕುಶಾಲನಗರದ ಕಾವೇರಿ ನದಿ ಸೇತುವೆಗೆ ಅಳವಡಿಸಿರುವ ಮಾದರಿಯಲ್ಲಿ ಕಬ್ಬಿಣದ ತಂತಿಯ ಮೆಸ್ ಅಳವಡಿಸಿದರೆ ರಸ್ತೆ ಹೋಕರು ಕಸ ತ್ಯಾಜ್ಯ ಬಿಸಾಕದಂತೆ ತಡೆಯಲು ಸಾಧ್ಯವಾಗುತ್ತದೆ ಎಂಬುದು ಪರಿಸರ ಪ್ರೇಮಿಯೂ ಆದ ಬ್ಯಾಂಕಿನ ನಿವೃತ್ತ ಅಧಿಕಾರಿ ಹೆಚ್.ಎನ್.ಸುಬ್ರಮಣ್ಯ ಸಲಹೆಯಾಗಿದೆ. ಇನ್ನಾದರೂ ಜಲಜೀವನ್ ಯೋಜನೆಯ ಅಧಿಕಾರಿಗಳು ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ಜಂಟಿಯಾಗಿ ನದಿಯ ಸಂರಕ್ಷಣೆಯ ಯೋಜನೆ ರೂಪಿಸುವ ಮೂಲಕ ನದಿಯ ಕುಡಿಯುವ ನೀರಿನ ಶುದ್ದೀಕರಣಕ್ಕೆ ಕ್ರಮ ಜರುಗಿಸಬೇಕಿದೆ.