ಮಡಿಕೇರಿ, ಮಾ. ೨೧; ಜಿಲ್ಲೆಯಾದ್ಯಂತ ಇಂದು ಹನಫಿ ಮುಸ್ಲಿಂ ಸಮುದಾಯದವರು ಪವಿತ್ರ ರಂಜಾನ್ ಹಬ್ಬ ಆಚರಿಸಿದರು. ಬೆಳಿಗ್ಗೆ ಮಸೀದಿಗಳಲ್ಲಿ ಪ್ರಾರ್ಥನೆ ನೆರವೇರಿಸಿದ ಬಳಿಕ ಮೆರವಣಿಗೆ ಮೂಲಕ ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಅಗಲಿದ ಹಿರಿಯರನ್ನು ಸ್ಮರಿಸಿದರು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಮನೆ ಮನೆಗಳಲ್ಲಿ ವಿವಿಧ ಖಾದ್ಯಗಳನ್ನು ತಯಾರಿಸಿ ಸಹ ಭೋಜನದೊಂದಿಗೆ ಉಪವಾಸ ವ್ರತಾಚರಣೆಯನ್ನು ಮುಕ್ತಾಯಗೊಳಿಸಿದರು.
ಕುಶಾಲನಗರ
ಕುಶಾಲನಗರ: ರಂಜಾನ್ ಹಬ್ಬವನ್ನು ಕುಶಾಲನಗರ ಜಾಮಿಯಾ ಮಸೀದಿ ಆಶ್ರಯದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕುಶಾಲನಗರ ಮಡಿಕೇರಿ ರಸ್ತೆಯ ಗಂಧದ ಕೋಟೆ ಬಳಿ ಈದ್ಗಾ ಮೈದಾನದಲ್ಲಿ ನಡೆಯಿತು.
ಸ್ಥಳೀಯ ಜಾಮಿಯಾ ಮಸೀದಿ, ದಂಡಿನಪೇಟೆ ರಸುಲ್ಪುರ ಮಸೀದಿ ವ್ಯಾಪ್ತಿಯ ಸಮುದಾಯ ಬಾಂಧವರು ಈದ್ಗಾ ಮೈದಾನದಲ್ಲಿ ಸೇರಿ ನಮಾಜ್ ಸಲ್ಲಿಸಿದರು. ಧರ್ಮ ಗುರುಗಳಾದ ಮುಫ್ತಿ ರಶೀದ್ ಅವರು ಧಾರ್ಮಿಕ ಪ್ರವಚನ ನೀಡಿದರು.
ದಿನಕ್ಕೆ ಐದು ಬಾರಿ ಪರಿಪೂರ್ಣ ಮನಸ್ಸಿನಿಂದ ಪ್ರಾರ್ಥನೆ ಸಲ್ಲಿಸಿದಲ್ಲಿ ಒಳಿತಾಗುತ್ತದೆ. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ವಿಶ್ವಶಾಂತಿಗಾಗಿ ಪ್ರತಿಯೊಬ್ಬರೂ ಪ್ರಾರ್ಥನೆ ಸಲ್ಲಿಸುವ ಅಗತ್ಯತೆ ಇದೆ ಎಂದು ರಶೀದ್ ಹೇಳಿದರು.
ಜಾಮಿಯಾ ಮಸೀದಿ ಅಧ್ಯಕ್ಷ ಮುಬಿನ್, ಉಪಾಧ್ಯಕ್ಷ ಸಾಜಿದ್, ಕಾರ್ಯದರ್ಶಿ ರಫೀಕ್ ಅಹಮದ್, ಖಜಾಂಚಿ ಎಸ್. ಆದಂ ಮತ್ತು ಸದಸ್ಯರು ಇದ್ದರು.
ಈದ್ಗಾ ಮೈದಾನದಲ್ಲಿ ಜಾಗದ ಕೊರತೆ ಕಾರಣ ಕುಶಾಲನಗರ ಮಡಿಕೇರಿ ಹೆದ್ದಾರಿ ರಸ್ತೆ ಮೇಲೆ ನೂರಾರು ಮಂದಿ ಪ್ರಾರ್ಥನೆ ಸಲ್ಲಿಸಬೇಕಾಯಿತು. ಈ ಸಂದರ್ಭ ಕುಶಾಲನಗರ ಮಡಿಕೇರಿ ರಸ್ತೆಯ ಸಂಚಾರ ವ್ಯವಸ್ಥೆ ಬಹುತೇಕ ಏರುಪೇರು ಉಂಟಾಯಿತು.
ಕುಶಾಲನಗರದಿಂದ ಗುಡ್ಡೆ ಹೊಸೂರು ತನಕ ವಾಹನಗಳು ಸಾಲಾಗಿ ನಿಲ್ಲಬೇಕಾದ ಪ್ರಮೇಯ ಎದುರಾಯಿತು. ಈ ಸಂದರ್ಭ ಪೊಲೀಸರು ಹೆದ್ದಾರಿಯಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಕಲ್ಪಿಸಿದ್ದರು.
ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್ ನೇತೃತ್ವದಲ್ಲಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.