೧೯೭೦-೮೦ರ ದಶಕದಲ್ಲಿ ಲಿಯಾಖತ್ ಆಲಿಯವರ ಪರಿಚಯ ನನಗೆ ಆಯಿತು. ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಾಗೂ ಸರಕಾರಿ ಹಿರಿಯ ಕಾಲೇಜಿ(ಈಗಿನ ಎಫ್.ಎಂ.ಸಿ. ಕಾಲೇಜು)ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಅವರ ಪರಿಚಯವಾಗಿ ಒಳ್ಳೆಯ ಸ್ನೇಹಿತರಾದೆವು. ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿ.ಯು.ಸಿ. ಓದುತ್ತಿದ್ದಾಗ ಅವರು ತಮ್ಮ ಕೋಗಿಲೆ ಕಂಠದಿAದ ಎಲ್ಲರನ್ನೂ ಜಾತಿ, ಮತ, ಪಂಥಗಳ ಬೇಧಭಾವವಿಲ್ಲದೆ ತಮ್ಮ ಕಡೆಗೆ ಆಕರ್ಷಿಸುತ್ತಿದ್ದರು. ಅಂತವರಲ್ಲಿ ನಾನು ಕೂಡಾ ಅವರ ಕಲೆ ಮತ್ತು ವ್ಯಕ್ತಿತ್ವದ ಕಡೆಗೆ ಆಕರ್ಷಿತನಾದೆ. ಅವರು ಉತ್ತಮ ವಾಗ್ಮಿ, ಸಂಗೀತಕಾರ ಹಾಗೂ ನಾಟಕಕಾರರಾಗಿದ್ದರು.
ವಿದ್ಯಾರ್ಥಿ ಜೀವನದಲ್ಲಿಯೇ ಅವರು ದೇಶಪ್ರೇಮವನ್ನು ಮೈಗೂಡಿಸಿಕೊಂಡಿದ್ದರು. ಅದಕ್ಕೆ ಉದಾಹರಣೆ ಎಂಬAತೆ ಪಿ.ಯು.ಸಿ.ಯಲ್ಲಿ ಒಂದು ಅದ್ಭುತವಾದಂತಹ ನಾಟಕವನ್ನು ಮಾಡಿದ್ದರು. ಅದರ ಹೆಸರು ‘ನಾವು ಭಾರತೀಯ ವೀರರು’. ಈ ನಾಟಕದ ಸಾರಾಂಶ ಏನೆಂದರೆ ಭಾರತೀಯ ವೀರ ಯೋಧರು ಭಾರತ - ಪಾಕಿಸ್ತಾನ ಯುದ್ಧದಲ್ಲಿ ಪಾಕಿಸ್ತಾನಿ ಸೈನಿಕರಿಂದ ಸೆರೆಹಿಡಿಯಲ್ಪಟ್ಟು ಅವರ ಖೈದಿಗಳಾಗಿದ್ದರು. ಆ ಸಮಯದಲ್ಲಿ ಪಾಕಿಸ್ತಾನಿ ಸೈನಿಕರು ನಮ್ಮ ವೀರ ಯೋಧರನ್ನು ಖೈದಿಗಳನ್ನಾಗಿ ಮಾಡಿ ತುಂಬಾ ಕೆಟ್ಟದಾಗಿ ನಡೆಸಿಕೊಂಡಿದ್ದರು. ಅಂತಹ ಸಂದರ್ಭ ನಮ್ಮ ವೀರಯೋಧರು ಎದೆಗುಂದದೆ ಎಂತಹ ಕೆಚ್ಚೆದೆಯನ್ನು ಪ್ರದರ್ಶಿಸಿದ್ದರು ಎಂಬುದನ್ನು ನಾಟಕದ ಮೂಲಕ ಆಡಿತೋರಿಸಿದ್ದರು ಲಿಯಾಖತ್ ಆಲಿಯವರು.
ಈ ನಾಟಕದಲ್ಲಿ ನಾನು ಕೂಡ ಪಾತ್ರಧಾರಿಯಾಗಿದ್ದೆ. ಈ ನಾಟಕದ ನಾಯಕ ನಟರಾಗಿ ಲಿಯಾಖತ್ ಆಲಿಯವರು ಉತ್ತಮವಾಗಿ ನಟಿಸಿದ್ದರು. ಆಗಿನ ಸಮಯದಲ್ಲಿ ಆ ನಾಟಕ ಎಲ್ಲರ ಗಮನ ಸೆಳೆದು ವಿದ್ಯಾರ್ಥಿ ಸಮುದಾಯ ಹಾಗೂ ಅಧ್ಯಾಪಕ ವೃಂದದವರ ಮನಗೆದ್ದು ಹೆಸರುವಾಸಿಯಾಗಿತ್ತು. ಅಲ್ಲಿಂದ ಅವರು ಹಂತ ಹಂತವಾಗಿ ಬೆಳೆದು ನಿಂತರು.
ಲಿಯಾಖತ್ ಆಲಿ ಹಾಡಲು ಎದ್ದುನಿಂತರೆ ಪ್ರತಿಯೊಬ್ಬರು ನಿಶ್ಯಬ್ದರಾಗಿ ಕುಳಿತು ಹಾಡನ್ನು ಆಲಿಸಿ ಮೈಮರೆಯುತ್ತಿದ್ದರು. ಹಾಗೆಯೇ ಪದವಿ ವ್ಯಾಸಂಗ ಮಾಡುವಾಗಲೂ ಕಾಲೇಜಿನಲ್ಲಿ ಕನ್ನಡಪರ ಸಂಘಗಳಲ್ಲಿ ವಿವಿಧ ಸಾಹಿತ್ಯಿಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಗುರುತಿಸಿಕೊಳ್ಳುತ್ತಿದ್ದರು. ನಂತರ ಸಮಯ ಕಳೆದ ಹಾಗೆ ನಾವುಗಳು ಬೇರೆ ಬೇರೆ ಮಾರ್ಗದಲ್ಲಿ ಮುನ್ನಡೆದೆವು. ಆದರೆ ಅವರ ನೆನಪು ನಿತ್ಯವಾಗಿರುತ್ತದೆ. ತಾ. ೧೫ ರಂದು ಅವರು ನಮ್ಮನ್ನು ಅಗಲಿದರು. - ಪ್ರೊಫೆಸರ್ ಪಿ.ಎಂ. ಪದ್ಮನಾಭ, ಮಡಿಕೇರಿ.