*ಗೋಣಿಕೊಪ್ಪ, ಮಾ. ೨೧: ಕಾರು ಮತ್ತು ಎರಡು ಬೈಕುಗಳ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲಿ ಮೃತಪಟ್ಟ ಘಟನೆ ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಪೊನ್ನAಪೇಟೆ ತಾಲೂಕಿನ ತಿತಿಮತಿ - ಮೈಸೂರು ಮಾರ್ಗದ ರಾಜ್ಯ ಹೆದ್ದಾರಿಯ ಬಿ.ಸಿ.ಕೆ. ಕಣದ ಸಮೀಪದ ಚರ್ಚ್ನ ಬಳಿ ಈ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ. ಬೈಕ್ ಸವಾರರಾಗಿದ್ದ ಕೇರಳದ ಪಾಲಕ್ಕಾಡ್ ನಿವಾಸಿ ಮೊಹಮ್ಮದ್ ಶಿಯಾಬ್ (೨೭) ಮತ್ತು ನಂಜನಗೂಡಿನ ನಿವಾಸಿ ಶಿವಕುಮಾರ್ (೨೫) ಮೃತಪಟ್ಟ ದುರ್ದೈವಿಗಳು.

ಮೃತಪಟ್ಟ ಶಿವಕುಮಾರ್ ನಂಜನಗೂಡಿನಿAದ ಹನುಗೋಡು ಗ್ರಾಮದಲ್ಲಿರುವ ತನ್ನ ಪತ್ನಿಯ ಮನೆಗೆ ಬಂದಿದ್ದು ನಂತರ ಗೋಣಿಕೊಪ್ಪದ ಕಡೆ ಪ್ರಯಾಣ ಬೆಳೆಸಿದ್ದ. ಹಿಂದಿರುಗಿ ಹನುಗೋಡಿನ ಕಡೆ ಹೋಗುತ್ತಿರುವಾಗ ತಿತಿಮತಿ ಮಾರ್ಗದ ನಡುವೆ ಓವರ್‌ಟೆಕ್ ಮಾಡಿ ಬರುತ್ತಿದ್ದ ಕಾರು ಎದುರಾದ ಪರಿಣಾಮ ಶಿವಕುಮಾರ್ ತನ್ನ ಬೈಕ್‌ನ ನಿಯಂತ್ರಣ ಕಳೆದುಕೊಂಡು ಕಾರಿಗೆ ಡಿಕ್ಕಿ ಹೊಡೆದಿದ್ದಾನೆ.

ಜೊತೆಗೆ ಮತ್ತೊಂದು ಬೈಕಿನಲ್ಲಿ ಹಿಂಬದಿಯಲ್ಲಿ ಬರುತ್ತಿದ್ದ ಕೇರಳ ಮೂಲದ ನಿವಾಸಿ ಮೊಹಮ್ಮದ್ ಶಿಯಾಬ್ ಬೈಕ್ ಸಹ ಮೊದಲು ನಡೆದ ಅಪಘಾತದಿಂದ ನಿಯಂತ್ರಣ ತಪ್ಪಿ ಕಾರಿಗೆ ಅಪ್ಪಳಿಸಿದೆ. ಪರಿಣಾಮ ಈತನು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದೇ ಬೈಕಿನ ಹಿಂಬದಿಯಲ್ಲಿ ಕುಳಿತಿದ್ದ ಅದಿನಾರ್ (೨೨) ಸಣ್ಣಪುಟ್ಟ ಗಾಯಗಳಿಂದ ಪಾರಾಗಿ ಮೈಸೂರಿನ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಈತನೊಂದಿಗೆ ಸಹ ಸಂಚಾರ ಮಾಡುತ್ತಿದ್ದ ಇತರ ಎರಡು ಬೈಕುಗಳ ಸವಾರರು ಮಾಹಿತಿ ನೀಡಿದ್ದಾರೆ.

ಮೊಹಮ್ಮದ್ ಹಾಗೂ ಇತರ ಸ್ನೇಹಿತರು ಗೋಣಿಕೊಪ್ಪದ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ತಿತಿಮತಿ ಮೂಲಕ ಕುಶಾಲನಗರ ಗೋಲ್ಡನ್ ಟೆಂಪಲ್ ಕಡೆಗೆ ಪಯಣ ಬೆಳೆಸಿದ್ದರು. ಕಾರಿನ ಚಾಲಕ ಮೈಸೂರಿನ ನಿವಾಸಿ ಜೈಲಿಂಗಸ್ವಾಮಿ ಮತ್ತು ಜೊತೆಗಿದ್ದ ಪ್ರಜ್ವಲ್ ಅವರನ್ನು ಪೊಲೀಸರು ವಶಪಡಿಸಿಕೊಂಡು ವಿಚಾರಣೆ ನಡೆಸಿ ಕ್ರಮ ಕೈಗೊಂಡಿದ್ದಾರೆ. ಗೋಣಿಕೊಪ್ಪ ಠಾಣಾಧಿಕಾರಿ ಪ್ರದೀಪ್ ಕುಮಾರ್ ಬಿ.ಕೆ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದರು. - ಎನ್.ಎನ್. ದಿನೇಶ್