ವೀರಾಜಪೇಟೆ, ಮಾ. ೨೦: ಬೆಂಗಳೂರಿನ ಕೊಡತಿ ಗ್ರಾಮದಲ್ಲಿ ನಡೆದ ಕೊಡಗು ಜಿಲ್ಲೆಯ ಪೊನ್ನಂಪೇಟೆಯ ರಂಜಿತಾ ಕೊಲೆ ಪ್ರಕರಣವನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ವಿ. ನಾಗರಾಜ್ ಬಣ ತೀವ್ರವಾಗಿ ಖಂಡಿಸುತ್ತದೆ. ಅಲ್ಲದೆ ಕೊಲೆ ಆರೋಪಿ ಅಯ್ಯಪ್ಪನಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಜಿಲ್ಲಾ ಸಂಯೋಜಕ ಹೆಚ್.ಎಸ್. ಕೃಷ್ಣಪ್ಪ ಆಗ್ರಹಿಸಿದ್ದಾರೆ.
ವೀರಾಜಪೇಟೆ ಪ್ರೆಸ್‌ಕ್ಲಬ್‌ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ದಲಿತ ಹೆಣ್ಣು ಮಕ್ಕಳ ಮೇಲೆ ಯತ್ತೇಚ್ಚವಾಗಿ ಅತ್ಯಾಚಾರ, ದೌರ್ಜನ್ಯಗಳು ನಡೆಯುತ್ತಿದ್ದರು ಕೂಡ ಸರ್ಕಾರ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳಲು ವಿಫಲವಾಗಿದೆ ಎಂದರು. ನೊಂದ ಕುಟುಂಬಕ್ಕೆ ಸರ್ಕಾರ ರೂ. ೨೫ ಲಕ್ಷ ಪರಿಹಾರ ನೀಡಬೇಕು. ಕುಟುಂಬ ಸದಸ್ಯರಿಗೆ ಒಬ್ಬರಿಗೆ ಸರ್ಕಾರಿ ಕೆಲಸ ಹಾಗೂ ಅವರ ಜೀವನಕ್ಕಾಗಿ ೫ ಎಕರೆ ಜಾಗವನ್ನು ನೀಡಬೇಕು ಎಂದು ಹೇಳಿದರು.
ಜಿಲ್ಲಾ ಸಹ ಸಂಯೋಜಕ ರಜನಿಕಾಂತ್ ಮಾತನಾಡಿ, ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಅಯ್ಯಪ್ಪನ ಆಸ್ತಿಯನ್ನು ಮುಟ್ಟುಗೋಲು ಹಾಕಿ ರಂಜಿತಾ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಹೇಳಿದರು.
ಗೋಷ್ಠಿಯಲ್ಲಿ ಜಿಲ್ಲಾ ಖಜಾಂಚಿ ನೀಲೇಶ್, ಸಂಘಟನಾ ಸಂಯೋಜಕ ಹೆಚ್.ಇ. ಶಿವಕುಮಾರ್, ಜಿಲ್ಲಾ ಕಾರ್ಮಿಕ ಒಕ್ಕೂಟದ ಸಹ ಸಂಚಾಲಕ ನಾಗೇಶ್ ಮೌರ್ಯ ಉಪಸ್ಥಿತರಿದ್ದರು.