ಐಗೂರು, ಮಾ. ೨೦: ಆನೆಗಳು ಗ್ರಾಮಕ್ಕೆ ಲಗ್ಗೆ ಇಡದಂತೆ ಅಳವಡಿಸಿರುವ ರೈಲ್ವೆ ಬ್ಯಾರಿಕೇಡ್ ಕಳೆದ ಮೂರು ವರ್ಷಗಳಿಂದ ದುಸ್ಥಿತಿ ತಲುಪಿದ್ದು, ಅರಣ್ಯ ಇಲಾಖೆ ಇದನ್ನು ದುರಸ್ತಿಗೊಳಿಸದ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವಾರೆ ಭಾಗದ ಕೃಷ್ಣಪ್ಪನಗುಂಡಿ ಎಂಬ ಅರಣ್ಯ ಪ್ರದೇಶದಲ್ಲಿ ಆನೆಗಳು ಗ್ರಾಮದೊಳಗೆ ಲಗ್ಗೆ ಇಡದಂತೆ ಅರಣ್ಯದ ಸುತ್ತಲೂ ಅಳವಡಿಸಿರುವ ಕಬ್ಬಿಣದ ರೈಲ್ವೆ ಬ್ಯಾರಿಕೇಡ್ ಮುರಿದು ಹೋಗಿದೆ. ಆನೆಗಳು ಗ್ರಾಮದೊಳಗೆ ಪ್ರವೇಶಿಸಲು ಸುಲಭ ಮಾರ್ಗವಾಗಿದೆ.
ಕಳೆದ ಮೂರು ವರ್ಷಗಳಿಂದ ಕಬ್ಬಿಣದ ಬ್ಯಾರಿಕೇಡ್ ಸರಿಪಡಿಸುವಂತೆ ಮನವಿ ಸಲ್ಲಿಸುತ್ತಾ ಬಂದರೂ ಇಲಾಖೆಯು ಈ ಬಗ್ಗೆ ತಲೆಕೆಡಿಸಿಕೊಂಡAತೆ ಕಂಡುಬAದಿಲ್ಲ. ಇದರಿಂದ ಗ್ರಾಮಸ್ಥರು ಇಲಾಖೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಡಾನೆಗಳು ಆಹಾರ-ನೀರನ್ನು ಅರಸಿಕೊಂಡು ಯಡವನಾಡು ಮೀಸಲ ಅರಣ್ಯದ ಕಡೆಗೆ ವಲಸೆ ಬಂದಿವೆ. ರೈತರು ಬೆಳೆದ ಬೆಳೆ ನಾಶವಾದರೆ ಸರಕಾರದಿಂದ ದೊರೆಯುವ ಪರಿಹಾರದ ಮೊತ್ತ ಅಲ್ಪ ಪ್ರಮಾಣವಾಗಿದ್ದು ರೈತರ ನಷ್ಟಕ್ಕೆ ಸಮರ್ಪಕವಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಶೀಘ್ರದಲ್ಲೇ ಕಬ್ಬಿಣದ ರೈಲ್ವೆ ಬ್ಯಾರಿಕೇಡ್ ಸರಿಪಡಿಸದಿದ್ದರೆ ಆನೆ ಹೋರಾಟ ಸಮಿತಿಯವರಿಂದ ತಾಲೂಕು ಕೇಂದ್ರದಲ್ಲಿ ಪ್ರತಿಭಟನೆ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.