ಚೆಯ್ಯಂಡಾಣೆ, ಮಾ. ೨೦: ೪೨ ವರ್ಷಗಳ ಕಾಲ ಪಾರಾಣೆ ಅಂಚೆ ಕಚೇರಿಯಲ್ಲಿ ಅಂಚೆ ಪೇದೆ (ಪೋಸ್ಟ್ ಮ್ಯಾನ್)ಆಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಮಾದಪ್ಪ ಅವರನ್ನು ಇತ್ತೀಚೆಗೆ ಚೆಯ್ಯಂಡಾಣೆ ಅಂಚೆ ಕಚೇರಿಯಲ್ಲಿ ಸನ್ಮಾನಿಸಿ, ಗೌರವಿಸಿ ಬೀಳ್ಕೊಡಲಾಯಿತು.
ಕಾರ್ಯಕ್ರಮದಲ್ಲಿ ಮಡಿಕೇರಿ ಅಂಚೆ ಇಲಾಖೆಯ ಅಂಚೆ ನಿರೀಕ್ಷಕರಾದ ಮಂಜುನಾಥ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ೪೨ ವರ್ಷಗಳ ಕಾಲ ಗ್ರಾಮಗಳಲ್ಲಿ ಗ್ರಾಮಸ್ಥರೊಂದಿಗೆ ಮಾದಪ್ಪ ಅವರು ಒಳ್ಳೆಯ ಭಾಂದವ್ಯ ಹೊಂದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನೌಕರರು ಅಲ್ಪಾವಧಿ ಕೆಲಸ ಮಾಡಿ ನಂತರ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಈ ಸನ್ನಿವೇಶದಲ್ಲಿ ೪೨ ವರ್ಷ ಉತ್ತಮವಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿರುವುದು ಶ್ಲಾಘನೀಯ ಎಂದರು.
ಚೆಯ್ಯAಡಾಣೆ ಅಂಚೆ ಕಚೇರಿಯ ಉಸ್ತುವಾರಿ (ಪೋಸ್ಟ್ ಮಾಸ್ಟರ್) ಉಮೇಶ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಇಲಾಖೆಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ಮಾದಪ್ಪ ಅವರ ಸೇವೆಯನ್ನು ಸ್ಮರಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾದಪ್ಪ, ಹಳೆಯ ಕಾಲದ ನೌಕರಿಗೂ ಈಗಿನ ಕಾಲದ ನೌಕರಿಗೂ ಬಹಳ ವ್ಯತ್ಯಾಸವಿದೆ.
ಅಂದಿನ ಕಾಲದಲ್ಲಿ ಪತ್ರಗಳು ಹೆಚ್ಚು ಹೆಚ್ಚಾಗಿ ಬರುತ್ತಿದ್ದವು. ಸಮಯಕ್ಕೆ ಸರಿಯಾಗಿ ಕೆಲಸ ನಿರ್ವಹಿಸಿ ಅದನ್ನು ತಲುಪಿಸುವ ಅವಶ್ಯಕತೆ ಇತ್ತು ಎಂದರು. ಇಲಾಖೆಯ ಸಿಬ್ಬಂದಿಗಳಾದ ಉತ್ತಪ್ಪ (ಮಿಟ್ಟು), ರಾಘವೇಂದ್ರ, ಹರ್ಷ ಮಾತನಾಡಿ, ಮಾದಪ್ಪ ಅವರ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ಮಾದಪ್ಪ ಅವರ ಪತ್ನಿ ರಾಧಾಮಣಿ ಹಾಗೂ ಮಕ್ಕಳು, ಅಂಚೆ ಇಲಾಖೆಯ ಸಹಾಯಕ ಅಧಿಕಾರಿ ಹರೀಶ್, ಚೆಯ್ಯಂಡಾಣೆ ಅಂಚೆ ಕಚೇರಿ ಸಿಬ್ಬಂದಿಗಳು, ಚೆಯ್ಯಂಡಾಣೆ ವ್ಯಾಪ್ತಿಗೆ ಒಳಪಟ್ಟ ಅಂಚೆ ಕಚೇರಿಯ ಸಿಬ್ಬಂದಿಗಳು, ಮತ್ತಿತರರು ಇದ್ದರು. ಹರೀಶ್ ಸ್ವಾಗತಿಸಿ, ವಂದಿಸಿದರು.