ಮಡಿಕೇರಿ, ಮಾ. ೧೮: ಕೊಡಗು ವಿಶ್ವವಿದ್ಯಾಲಯದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಹಾಗೂ ಸಾಯಿ ಹಾಕಿ ತರಬೇತಿ ಕೇಂದ್ರ ಮಡಿಕೇರಿ ಇವರ ಸಹಯೋಗದಲ್ಲಿ ಫಿಟ್ ಇಂಡಿಯಾ ಪರಿಕಲ್ಪನೆಯೊಂದಿಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.

ಮಡಿಕೇರಿ ತಾಲೂಕಿನ ಐದು ಕಾಲೇಜುಗಳ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ನಡೆದ ಪಂದ್ಯಾವಳಿಯಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ತಂಡವು ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಾಯಿ ಹಾಕಿ ತರಬೇತಿ ಕೇಂದ್ರ ಮಡಿಕೇರಿಯ ತರಬೇತಿದಾರರು ಮತ್ತು ಉಸ್ತುವಾರಿಯಾದ ಮಿನಿ ಉನ್ನಿರಾಜ್ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಮೇಜರ್ ರಾಘವ ಬಿ. ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕರಾದ ಪ್ರೊಫೆಸರ್ ತಿಪ್ಪೇಸ್ವಾಮಿ, ಭಾರತ ಹಾಕಿ ತಂಡದ ಕ್ಯಾಂಪರ್ ಅಕ್ಷತಾ, ಕಿಲೋ ಇಂಡಿಯಾ ಹಾಕಿ ತಂಡದ ಆಟಗಾರ್ತಿಯರಾದ ಸೀಮಾ ಆನಂದ್ ಪವರ್ ಹಾಗೂ ಗಧೇಲಾ ಗಾಯತ್ರಿ ಉಪಸ್ಥಿತರಿದ್ದರು.