ಚೆಯ್ಯಂಡಾಣೆ, ಮಾ. ೧೮: ನರಿಯಂದಡ ಹಾಗೂ ಚೆಯ್ಯಂಡಾಣೆ ಗ್ರಾಮದಲ್ಲಿ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆ ಹಿಂಡು ಕಾಫಿ, ಬಾಳೆ, ಮತ್ತಿತರ ಗಿಡಗಳನ್ನು ತುಳಿದು ಹಾನಿಪಡಿಸಿದೆ.

ಗ್ರಾಮದ ನಿವಾಸಿಗಳಾದ ತೋಟಂಬೈಲು ಪವನ್, ಬೆಳಿಯಂಡ್ರ ವೇಣುಗೋಪಾಲ್, ಹರಿಪ್ರಸಾದ್ ಹಾಗೂ ಪೋಕ್ಕುಳಂಡ್ರ ಕುಟುಂಬಸ್ಥರ ಹಾಗೂ ಮತ್ತಿತರರು ತೋಟಕ್ಕೆ ಲಗ್ಗೆಇಟ್ಟ ಕಾಡಾನೆಗಳ ಹಿಂಡು ಕೃಷಿ ಫಸಲು ನಾಶಗೊಳಿಸಿದೆ. ತಾ.೧೭ ರ ಮಧ್ಯರಾತ್ರಿ ಎರಡು ಕಾಡಾನೆ ಮನೆಯ ಸಮೀಪ ತೆರಳುತ್ತಿರುವ ವೀಡಿಯೋ ಪೋಕ್ಕುಳಂಡ್ರ ಅಭಿಲಾಷ್ ಅವರ ಮನೆಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು, ಆತಂಕ ಸೃಷ್ಟಿಯಾಗಿದೆ. ಕಾಡಾನೆ ಹಾವಳಿಯಿಂದ ಕಾರ್ಮಿಕರು ತೋಟಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಈ ವ್ಯಾಪ್ತಿಯಲ್ಲಿ ರೈತರು ಜೀವ ಭಯದಲ್ಲೇ ತೋಟಕ್ಕೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಅನಾಹುತ ಸಂಭವಿಸುವ ಮುನ್ನ ಅರಣ್ಯ ಇಲಾಖೆ ಕಾಡಾನೆ ತೋಟಕ್ಕೆ ನುಸುಳದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ಕಾಡಾನೆಯನ್ನು ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸಬೇಕು ಹಾಗೂ ನಷ್ಟ ಹೊಂದಿದ ತೋಟದ ಮಾಲೀಕರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.