ಮಡಿಕೇರಿ, ಮಾ. ೧೮: ಗ್ರಾಹಕರು ಮೋಸ, ವಂಚನೆಗೆ ಒಳಗಾಗುವುದು ತಪ್ಪಿಸುವಲ್ಲಿ ರಾಜ್ಯಾದ್ಯಂತ ಗ್ರಾಹಕರ ಕಾಯ್ದೆಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೆ ತ್ವರಿತ ತೀರ್ಪು ಪ್ರಕಟದ ಮೂಲಕ ನ್ಯಾಯ ದೊರಕಿಸಿಕೊಡುವ ಕೆಲಸವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಮತ್ತು ಜಿಲ್ಲಾ ನ್ಯಾಯವಾದಿಗಳ ಸಂಘ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ನವೀಕರಣ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕರಾಗಿದ್ದು, ವಂಚನೆಗೆ ಅಥವಾ ಮೋಸಕ್ಕೆ ತುತ್ತಾದರೆ, ಪರಿಹಾರ ಒದಗಿಸುವಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಕ್ರಮವಹಿಸಲಿದೆ. ಗ್ರಾಹಕರಿಗೆ ಸರಿಯಾದ ಸೇವೆ ಒದಗಿಸಬೇಕು ಎಂಬುದು ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಕಚೇರಿಗೆ ಬೇಕಾದ ಎಲ್ಲಾ ರೀತಿಯ ಮೂಲ ಸೌಲಭ್ಯವನ್ನು ಕಲ್ಪಿಸಲು ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಮುಂದಾಗಿದೆ. ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಸಲ್ಲಿಕೆಯಾಗುವ ಪ್ರಕರಣಗಳನ್ನು ೯೦ ದಿನಗಳಲ್ಲಿ ವಿಲೇವಾರಿ ಮಾಡಲು ಆಯೋಗ ಶ್ರಮಿಸುತ್ತಿದೆ. ಗ್ರಾಹಕರ ವ್ಯಾಜ್ಯಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ತೀರ್ಪು ನೀಡಲು ಆಯೊಗ ಕ್ರಮವಹಿಸಿದೆ ಎಂದು ಹೇಳಿದರು. ೪ಆರನೇ ಪುಟಕ್ಕೆ

(ಮೊದಲ ಪುಟದಿಂದ) ರಾಜ್ಯಾದ್ಯಂತ ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಗ್ರಾಹಕರ ಆಯೋಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲಾ ಹಂತದ ನ್ಯಾಯಾಲಯಗಳ ಹಾಗೂ ವಕೀಲರ ಸಂಘದ ಸಹಕಾರ ಅತ್ಯಗತ್ಯ. ನ್ಯಾಯಾಂಗವು ಗ್ರಾಹಕರ ಆಯೋಗದ ಜೊತೆ ಕೈಜೋಡಿಸಿ ಕೆಲಸ ಮಾಡಬೇಕು ಎಂಬುದಾಗಿದೆ. ಗ್ರಾಹಕರ ಹಿತರಕ್ಷಣೆ ಕಾಪಾಡುವುದು ಎಲ್ಲರ ಆದ್ಯತೆಯಾಗಬೇಕು ಎಂದು ತಿಳಿಸಿದರು.

ಗ್ರಾಹಕರ ಹಿತರಕ್ಷಣಾ ಸಮಿತಿ ಸಭೆಯನ್ನು ಮೂರು ತಿಂಗಳಿಗೊಮ್ಮೆ ನಡೆಸಿ ಗ್ರಾಹಕರ ಹಕ್ಕುಗಳ ಕಾಯ್ದೆಯನ್ನು ಸಂರಕ್ಷಿಸುವಲ್ಲಿ ಮುಂದಾಗಬೇಕು. ಗ್ರಾಹಕರಿಗೆ ಮಧ್ಯಸ್ಥಿಕೆ ಮೂಲಕ ಪರಿಹಾರ ಕಂಡುಕೊಳ್ಳುವುದು, ಹಾಗೆಯೇ ಗ್ರಾಹಕರ ಹಿತರಕ್ಷಣೆ ಮತ್ತು ಚಿಂತನೆಯನ್ನು ಅರ್ಥ ಮಾಡಿಕೊಂಡು ಆಯೋಗ ಕಾರ್ಯನಿರ್ವಹಿಸುತ್ತಿದೆ. ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ೧೮ ಕೋಟಿ ಇದ್ದು, ಇದರಲ್ಲಿ ೫ ಕೋಟಿ ರೂ.ವನ್ನು ವಿವಿಧ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಜಾಗೃತಿ ಅಭಿಯಾನಕ್ಕೆ ಬಳಸಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಗ್ರಾಹಕರ ಪರಿಹಾರ ವೇದಿಕೆಯ ಸದಸ್ಯರಾದ ಗೌರಮ್ಮಣಿ ಮಾತನಾಡಿ, ಗ್ರಾಹಕರ ಆಯೋಗವು ಗ್ರಾಹಕರ ಹಿತರಕ್ಷಣೆಗಾಗಿ ಕೆಲಸ ಮಾಡುತ್ತಿದ್ದು, ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ಶ್ರಮಿಸುತ್ತಿದೆ. ಗ್ರಾಹಕರಿಗೆ ನ್ಯಾಯ ಒದಗಿಸುವಲ್ಲಿ ಮುಂದಾಗಲಾಗಿದೆ ಎಂದರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಹೊಸಮನಿ ಪುಂಡಲಿಕ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಿ.ಟಿ. ಜೋಸೆಫ್, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಡಾ.ಸಿ. ರೇಣುಕಾಂಬ ಅವರು ಮಾತನಾಡಿದರು. ಆಹಾರ ಇಲಾಖೆ ಉಪ ನಿರ್ದೇಶಕರಾದ ಎಂ. ಭೀಮರಾಯ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರಾದ ಕೆ.ಟಿ. ಪ್ರಭು, ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ನಾಗೇಂದ್ರ ಬಾಬು, ನ್ಯಾಯಾಧೀಶರು, ನ್ಯಾಯಾವಾದಿಗಳು ಇತರರು ಇದ್ದರು. ಮಹಾಲಿಂಗಸ್ವಾಮಿ ಪ್ರಾರ್ಥಿಸಿದರು, ಡಾ.ಸಿ.ರೇಣುಕಾಂಬ ಸ್ವಾಗತಿಸಿದರು, ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಬಿ.ಎಸ್.ಜಯಪ್ಪ ನಿರೂಪಿಸಿ, ವಂದಿಸಿದರು.