(ಕಾಯಪಂಡ ಶಶಿ ಸೋಮಯ್ಯ)

ಮಡಿಕೇರಿ, ಮಾ. ೧೭: ಕೊಡವ ಕುಟುಂಬಗಳ ನಡುವಿನ ಗಿನ್ನಿಸ್ ದಾಖಲೆ ಸೇರಿದಂತೆ ವರ್ಲ್ಡ್ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಗುರುತಿಸಲ್ಪಟ್ಟಿರುವ ಕೌಟುಂಬಿಕ ಹಾಕಿ ಉತ್ಸವಕ್ಕೆ ದಿನಗಣನೆ ಆರಂಭಗೊAಡಿದೆ.

೨೬ನೆಯ ವರ್ಷದ ಕೊಡವ ಕೌಟುಂಬಿಕ ಹಾಕಿ ನಮ್ಮೆಯನ್ನು ಚೇನಂಡ ಕುಟುಂಬಸ್ಥರು ನಾಲ್ನಾಡ್ ವ್ಯಾಪ್ತಿಯ ನಾಪೋಕ್ಲುವಿನಲ್ಲಿ ಆಯೋಜಿಸುತ್ತಿದ್ದಾರೆ. ಕೌಟುಂಬಿಕ ಹಾಕಿ ಇತಿಹಾಸದಲ್ಲಿ ನಾಪೋಕ್ಲುವಿನಲ್ಲಿ ಇದೀಗ ಆರನೆಯ ಉತ್ಸವ ನಡೆಯುತ್ತಿದ್ದು, ಹೆಚ್ಚು ಹಾಕಿ ಅಭಿಮಾನಿಗಳನ್ನು ಹೊಂದಿರುವ ವ್ಯಾಪ್ತಿ ಇದಾಗಿದ್ದು, ಹಾಕಿ ಕಲರವ ಆರಂಭಗೊಳ್ಳುತ್ತಿದೆ. ನಾಪೋಕ್ಲುವಿನಲ್ಲಿ ೨೦೦೩ರಲ್ಲಿ ಕಲಿಯಂಡ ಕಪ್ ಹಾಕಿ ಉತ್ಸವ ಜರುಗಿದ್ದು, ೨೦೧೭ರಲ್ಲಿ ಬಿದ್ದಾಟಂಡ ಕಪ್, ೨೦೧೮ ರಲ್ಲಿ ಕುಲ್ಲೇಟಿರ ಕಪ್ ಜರುಗಿತ್ತು. (೨೦೧೯ ರಿಂದ ೨೨ರವರೆಗೆ ಕಾರಣಾಂತರದಿAದ ಉತ್ಸವ ಸ್ಥಗಿತಗೊಂಡಿತು) ನಂತರದಲ್ಲಿ ೨೦೨೩ರಲ್ಲಿ ಅಪ್ಪಚೆಟ್ಟೋಳಂಡ ಕುಟುಂಬದವರು ನಾಪೋಕ್ಲುವಿನಲ್ಲೇ ಉತ್ಸವ ಆಯೋಜಿಸುವ ಮೂಲಕ ಹಾಕಿ ನಮ್ಮೆ ಪುನರಾರಂಭಗೊAಡಿತ್ತು. ಇದರ ನಂತರದಲ್ಲಿ ೨೦೨೪ರಲ್ಲಿ ಕುಂಡ್ಯೋಳAಡ ಕುಟುಂಬಸ್ಥರು ೨೪ನೆಯ ವರ್ಷದ ಉತ್ಸವವನ್ನೂ ಮತ್ತೆ ನಾಪೋಕ್ಲುವಿನಲ್ಲೇ ನಡೆಸಿದ್ದು, ಈ ಸಂದರ್ಭ ಕೌಟುಂಬಿಕ ಹಾಕಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದ್ದು ಐತಿಹ್ಯ. ೨೦೨೫ರಲ್ಲಿ ಮುದ್ದಂಡ ಕಪ್ ಮಡಿಕೇರಿಯಲ್ಲಿ ನಡೆದಿದ್ದು, ಇದೀಗ ಮತ್ತೊಮ್ಮೆ ಚೇನಂಡ ಕಪ್‌ನ ಮೂಲಕ ನಾಪೋಕ್ಲುವಿನಲ್ಲಿ ೬ನೆಯ ಬಾರಿಗೆ ಹಾಕಿ ಉತ್ಸವಕ್ಕೆ ಸಿದ್ಧತೆ ನಡೆದಿದೆ.

ಚೇನಂಡ ಸಿದ್ಧತೆ... ಏ. ೫ ರಿಂದ ಆರಂಭ

೨೬ನೆಯ ವರ್ಷದ ಹಾಕಿ ನಮ್ಮೆಯ ಯಶಸ್ಸಿಗೆ ಚೇನಂಡ ಕುಟುಂಬಸ್ಥರು ಶ್ರಮಿಸುತ್ತಿದ್ದಾರೆ. ಒಂದು ಗೋಲು... ಒಂದು ಗಿಡ ಎಂಬ ಪರಿಕಲ್ಪನೆ, ಜತೆಗೆ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ತಂಡಗಳಿಗೆ ಹಾಕಿ ಪಂದ್ಯಾವಳಿಯ ವಿಶೇಷತೆಯನ್ನು ನಡೆಸುವ ಮೂಲಕ ಇದೀಗ ಉತ್ಸವ ಜರುಗುವ ಕೇಂದ್ರ ಸ್ಥಾನವಾದ ನಾಪೋಕ್ಲುವಿನಲ್ಲಿ ಸಿದ್ಧತೆ ಆರಂಭಗೊAಡಿದೆ.ಏಪ್ರಿಲ್ ೫ ರಂದು ಹಾಕಿ ನಮ್ಮೆ ಶುಭಾರಂಭಗೊಳ್ಳಲಿದೆ. ಪ್ರಸ್ತುತ ಮೈದಾನ ಸಮತಟ್ಟುಗೊಳಿಸುವದರೊಂದಿಗೆ, ಸುಮಾರು ೩೦ ಸಾವಿರ ಪ್ರೇಕ್ಷಕರು ಕುಳಿತು ಪಂದ್ಯಾವಳಿ ವೀಕ್ಷಿಸಲು ಅನುಕೂಲವಾಗುವಂತೆ ಗ್ಯಾಲರಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ಗ್ಯಾಲರಿ ನಿರ್ಮಾಣ ಕೆಲಸ ಭರದಿಂದ ಸಾಗುತ್ತಿದೆ. ಕ್ಯಾಲಿಕಟ್‌ನ ಪರಿಣಿತರು ಈ ಕೆಲಸದ ಗುತ್ತಿಗೆ ಪಡೆದಿದ್ದಾರೆ. ೪ಐದನೇ ಪುಟಕ್ಕೆ

೨೪೦ ತಂಡಗಳ ನೋಂದಣಿ

(ಮೊದಲ ಪುಟದಿಂದ) ಹಾಕಿ ಉತ್ಸವದಲ್ಲಿ ಪಾಲ್ಗೊಳ್ಳಲು ಈಗಾಗಲೇ ೨೪೦ ರಷ್ಟು ಕುಟುಂಬಗಳು ಹೆಸರು ನೋಂದಾಯಿಸಿಕೊAಡಿವೆ. ಜಿಲ್ಲೆಯ ೩೪ ಕಡೆಗಳಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದ್ದು, ಆನ್‌ಲೈನ್ ಮೂಲಕವೂ ನೋಂದಣಿ ನಡೆಯುತ್ತಿರುವುದರಿಂದ ನಿಖರ ಮಾಹಿತಿ ಲಭ್ಯವಾಗಿಲ್ಲ. ೩೦ಕ್ಕೂ ಅಧಿಕ ಮಹಿಳಾ ತಂಡಗಳೂ ಮಹಿಳಾ ಹಾಕಿ ಪಂದ್ಯಾಟಕ್ಕೆ ಮುಂದೆ ಬಂದಿವೆ. ಮಾರ್ಚ್ ೨೦ರ ತನಕವೂ ನೋಂದಣಿಗೆ ಅವಧಿ ವಿಸ್ತರಿಸಲಾಗಿದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ. ತಾ. ೨೩ ರ ಬಳಿಕ ಟೈಸ್ ಸಿದ್ಧಪಡಿಸಲಾಗುವುದು.

ಒಟ್ಟು ನಾಲ್ಕು ಮೈದಾನ

ನಾಪೋಕ್ಲು ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣ ಮುಖ್ಯ ಮೈದಾನವಾಗಿದೆ. ಇದರ ಕೆಳಭಾಗದಲ್ಲಿ ಇನ್ನೆರಡು ಮೈದಾನ ಸೇರಿದಂತೆ, ಸೀನಿಯರ್ ಕಾಲೇಜ್‌ನಲ್ಲಿ ಕುಂಡ್ಯೋಳAಡ ಕುಟುಂಬಸ್ಥರು ನಿರ್ಮಾಣ ಮಾಡಿರುವ ಮತ್ತೊಂದು ಮೈದಾನ ಸೇರಿದಂತೆ ಒಟ್ಟು ನಾಲ್ಕು ಮೈದಾನಗಳಲ್ಲಿ ಈ ಬಾರಿ ಪಂದ್ಯಾವಳಿ ಜರುಗಲಿವೆ.

ಚೇನಂಡ ಕಪ್‌ನ ಅಂಗವಾಗಿ ಉತ್ಸವ ನಡುವೆ ಈಗಾಗಲೇ ಆಯ್ಕೆ ಮಾಡಿರುವ ವಿದ್ಯಾರ್ಥಿಗಳಿಗೆ, ತರಬೇತಿ ಶಿಬಿರ, ಬಾಳೋಪಾಟ್ ಶಿಬಿರ, ಮೆರಥಾನ್ ಸ್ಪರ್ಧೆ ೪x೧೦೦ ಕುಟುಂಬವಾರು ರಿಲೇ ಸ್ಪರ್ಧೆ, ತಂದ್ - ಬೆಂದ್ ಶಿಬಿರ ಮತ್ತಿತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು. ಉತ್ಸವಕ್ಕೆ ಜಿಲ್ಲೆಯ ಒಲಂಪಿಯನ್‌ಗಳನ್ನು ವಿಶೇಷವಾಗಿ ಆಹ್ವಾನಿಸಲಾಗುವುದು. ಇಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿದಂತೆ, ರಾಜ್ಯದ ಮುಖ್ಯಮಂತ್ರಿ ಇನ್ನಿತರ ಪ್ರಮುಖರು, ಕೇಂದ್ರದ ಕ್ರೀಡಾ ಸಚಿವರು ಈ ಬಾರಿ ಪಾಲ್ಗೊಳ್ಳುವುದು ಬಹುತೇಕ ಖಚಿತವಾಗಿದೆ.

ಕೊಡವ ಹಾಕಿ ಅಕಾಡೆಮಿ, ಹಾಕಿ ಕೂರ್ಗ್, ಹಾಕಿ ಕರ್ನಾಟಕ, ತೀರ್ಪುಗಾರರ ಸಂಘ ಸೇರಿದಂತೆ ತಾಂತ್ರಿಕ ಸಮಿತಿಯ ಪೂರ್ಣ ಸಹಕಾರವಿದ್ದು, ಈಗಾಗಲೇ ಹಲವು ಸುತ್ತಿನ ಸಭೆಗಳೂ ನಡೆದಿವೆ. ಆರಂಭಿಕ ದಿನದಂದು ಸಾಂಸ್ಕೃತಿಕ ಮೆರವಣಿಗೆ, ಪ್ರದರ್ಶನ ಪಂದ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ದೀನಾ ಚಂಗಪ್ಪ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ