ಕುಶಾಲನಗರ, ಮಾ. ೧೬: ಮಹಿಳಾ ದಿನಾಚರಣೆಯು ಕೇವಲ ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತವಾದ ದಿನವಾಗಬಾರದು ಅಬಲೆ ಎನಿಸಿದ್ದ ಮಹಿಳೆಯರನ್ನು ಸಬಲೆಯಾಗಿ, ಉತ್ತಮ ಆಡಳಿತಗಾರ್ತಿಯಾಗಿ ಹೊರಹೊಮ್ಮಿಸಿದ ಕ್ರಾಂತಿಕಾರಿ ದಿನಗಳ ಸ್ಮರಣೆ ಮಾಡುವ ಸಂಭ್ರಮದ ದಿನವಾಗಿದೆ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಹೇಳಿದರು.
ಕುಶಾಲನಗರ ಪುರಸಭೆ ವತಿಯಿಂದ ಪುರಸಭಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣು ಸಂಸಾರದ ಕಣ್ಣು, ಹೆಣ್ಣೆಂದರೆ ಮನೆಯ ಬೆಳಗುವ ದೀಪ. ನಾಲ್ಕು ಗೋಡೆಗಳಿಗೆ ಸೀಮಿತವಾಗಿದ್ದ ಹೆಣ್ಣು ಇಂದು ಸಂಭ್ರಮಿಸದ ಕ್ಷೇತ್ರವಿಲ್ಲ. ಎಲ್ಲಾ ಕ್ಷೇತ್ರದಲ್ಲಿ ಪುರುಷರಿಗೆ ಸಮಾನವಾಗಿ ಪೈಪೋಟಿಯಲ್ಲಿರುವುದನ್ನು ಕಾಣಬಹುದು. ಮಹಿಳೆಯರು ತನ್ನದೇ ಛಾಪು ಮೂಡಿಸಿ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಗಳಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಟಿ ಎಸ್ ಗಿರೀಶ್ ಮಾತನಾಡಿ, ಮಹಿಳೆಯರು ಯಾವುದೇ ಕೀಳರಿಮೆ ಇಲ್ಲದೆ ಜೀವನದಲ್ಲಿ ಮುನ್ನುಗಿದರೆ ಯಶಸ್ಸು ಕಂಡುಕೊಳ್ಳಲು ಸಾಧ್ಯ ಎಂದು ಕಿವಿಮಾತು ಹೇಳಿದರು. ಸರಕಾರದ ಮೂಲಕ ಲಭಿಸುವ ಎಲ್ಲಾ ಯೋಜನೆಗಳ ಸದುಪಯೋಗ ಪಡೆಯುವ ಮೂಲಕ ಸಮಾಜದ ಮುಖ್ಯ ವಾಹಿನಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ವೈದ್ಯಾದಿಕಾರಿ ಡಾ ಅಂಜಲಿ ಮಾತನಾಡಿ ತಂಬಾಕಿನಿAದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ಒದಗಿಸಿದರು.
ಈ ಸಂದರ್ಭ ಪುರಸಭೆ ವ್ಯವಸ್ಥಾಪಕಿ ಸವಿತಾ, ಹಿರಿಯ ಆರೋಗ್ಯ ಅಧಿಕಾರಿ ಉದಯಕುಮಾರ್, ಕಂದಾಯ ಅಧಿಕಾರಿ ರಾಮು, ಪೌರ ಸೇವಾ ಸಂಘದ ಅಧ್ಯಕ್ಷ ಧನಂಜಯ, ಉಪಾಧ್ಯಕ್ಷೆ ರಶ್ಮಿ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಪುರಸಭಾ ಸಿಬ್ಬಂದಿಗಳು ಪೌರ ಕಾರ್ಮಿಕರು ಇದ್ದರು.