ಕೂಡಿಗೆ,ಮಾ.೧೬: ಕೂಡ್ಲೂರು ನವಗ್ರಾಮದ ಶ್ರೀಬಸವೇಶ್ವರ ಮತ್ತು ದೊಡ್ಡಮ್ಮ ತಾಯಿ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ಮಾರ್ಚ್ ೧೯ ರಂದು ರಾತ್ರಿ ೮.೩೦ ಕ್ಕೆ ಶ್ರೀ ಶನಿ ಪ್ರಭಾವ ಅಥವಾ ರಾಜವಿಕ್ರಮ ಎಂಬ ಪೌರಾಣಿಕ ನಾಟಕವನ್ನು ಹಮ್ಮಿಕೊಳ್ಳಲಾಗಿದೆ ಎಂದು ನಾಟಕ ಮಂಡಳಿ ಅಧ್ಯಕ್ಷ ಸ್ವಾಮಿಗೌಡ್ರು ಮತ್ತು ಕಾರ್ಯದರ್ಶಿ ಮಂಜು ತಿಳಿಸಿದ್ದಾರೆ. ಕಡುವಿನಹೊಸಳ್ಳಿ ಡ್ರಾಮ ಮಾಸ್ಟರ್ ಗೋವಿಂದೇಗೌಡರ ಮಾರ್ಗದರ್ಶನದಲ್ಲಿ ಈಗಾಗಲೆ ನವಗ್ರಾಮದಲ್ಲಿ ನಾಟಕದ ರಿಹರ್ಸಲ್ ಕಾರ್ಯ ನಡೆಸಲಾಗುತ್ತಿದೆ ಎಂದು ಅಧ್ಯಕ್ಷ ಸ್ವಾಮಿಗೌಡ್ರು ತಿಳಿಸಿದರು. ಕಳೆದ ೧೧ ವರ್ಷಗಳಿಂದ ನಾಟಕ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದು ಈ ಉಚಿತ ಪ್ರದರ್ಶನ ಕಾರ್ಯಕ್ಕೆ ಕೂಡ್ಲೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿ ನಾಟಕ ಯಶಸ್ವಿಗೊಳಿಸಬೇಕಿದೆ ಎಂದು ಕೋರಿದರು.

ಶಾಸಕ ಡಾ.ಮಂತರ್ ಗೌಡ, ಮಾಜಿ ಶಾಸಕ ಅಪ್ಪಚ್ಚುರಂಜನ್, ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಇಂಟೆಕ್ ಮಾಜಿ ಅಧ್ಯಕ್ಷ ನಾಪಂಡ ಮುತ್ತಪ್ಪ, ಕೂಡುಮಂಗಳೂರು ಗ್ರಾಪಂ ಮಾಜಿ ಸದಸ್ಯ ಕೆ.ಕೆ.ಭೋಗಪ್ಪ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಮಂಡಳಿ ಕಾರ್ಯದರ್ಶಿ ಮಂಜು ತಿಳಿಸಿದರು. ನವಗ್ರಾಮದಲ್ಲಿ ಸಮುದಾಯ ಭವನದ ಕೊರತೆಯಿದ್ದು ಗಣೇಶೋತ್ಸವ ಮತ್ತಿತರ ಸಮಾರಂಭ ನಡೆಸುತ್ತಿದ್ದ ಖಾಲಿ ಜಾಗದಲ್ಲಿ ಗುಡಿಸಲು ನಿರ್ಮಿಸಿ ನಾಟಕ ರಿಹರ್ಸಲ್ ನಡೆಸಲಾಗುತ್ತಿದೆ. ಆದರೆ ಗ್ರಾಪಂ ಅಧಿಕಾರಿಗಳಿಂದ ನಮಗೆ ಅನಾನುಕೂಲ ಉಂಟಾಗುತ್ತಿದೆ ಗುಡಿಸಲು ತೆರವಿಗೆ ಒತ್ತಡ ಹೇರುತ್ತಿದ್ದಾರೆ. ಧಾರ್ಮಿಕ ಚಟುವಟಿಕೆಗಳಿಗೆ ಉಪಯೋಗವಾಗುವಂತೆ ಗ್ರಾಮದಲ್ಲಿ ಸಮುದಾಯ ಭವನದ ಕೊರತೆಯಿದ್ದು ಈ ಬಗ್ಗೆ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಕಲಾವಿದರಾದ ಗಣೇಶ್, ಮಂಜೇಗೌಡ, ಸತೀಶ್, ಧರ್ಮೇಶ ಇದ್ದರು.