ಮಡಿಕೇರಿ, ಮಾ.೧೬: ನಾನು ಗೆದ್ದೆ ಎಂಬ ಅಹಂ...ಗೆದ್ದವರಲ್ಲಿರಲಿಲ್ಲ...ಆದರೆ ಸಾಧಿಸಿದ ಸಂತೃಪ್ತಿ ಇತ್ತು. ನಂತರದ ಸ್ಥಾನ ಪಡೆದು ಮನದಲ್ಲಿ ಒಂದಷ್ಟು ನಿರಾಶಾಭಾವನೆ ಮೂಡಿದರೂ ಸೋತು ಹೋದೆ ಎಂಬ ದುಗುಡ-ದುಮ್ಮಾನ ಇವರಲ್ಲಿರಲಿಲ್ಲ.. ಬದಲಿಗೆ ಸ್ಪರ್ಧೆಯಲ್ಲಿ ಭಾಗಿಯಾದ, ಎಲ್ಲರಂತೆ ತಾವೂ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದೇವೆ ಎಂಬ ಸಂತೃಪ್ತಿಯ ಭಾವ ಎಲ್ಲರಲ್ಲೂ ಕಂಡು ಬರುತ್ತಿತ್ತು...

ಇದು ವಿಶೇಷಚೇತನ ಮಕ್ಕಳಲ್ಲಿ ತಾವು ಯಾರಿಗೂ ಕಡಿಮೆ ಇಲ್ಲ ಎಂಬ ಧೈರ್ಯ ತುಂಬಲು ಆಯೋಜಿಸಿದ್ದ ವಿಶೇಷ ಕಾರ್ಯಕ್ರಮ.

ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಸ್ಥ ವಿಶೇಷಚೇತನ ಶಾಲೆ ಹಾಗೂ ಪುನರ್ವಸತಿ ಕೇಂದ್ರ-ಸುAಟಿಕೊಪ್ಪ/ಪಾಲಿಬೆಟ್ಟ ಸಹಯೋಗದಲ್ಲಿ ವಿಶೇಷಚೇತನರಿಗೆ ಆಯೋಜಿತ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿಶೇಷಚೇತನರು ತಮ್ಮ ಭೌತಿಕ ಹಾಗೂ ಮಾನಸಿಕ ಭಿನ್ನತೆಗಳನ್ನು ಬದಿಗೊತ್ತಿ ತಮ್ಮ ಸಾಮರ್ಥ್ಯಕ್ಕೂ ಮೀರಿ ಪ್ರಯತ್ನಿಸಿ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಂಡರು. ಗೆದ್ದ ಮಕ್ಕಳು ಉತ್ಸಾಹದಿಂದ ಪದಕ, ಪ್ರಮಾಣಪತ್ರ ಪಡೆದುಕೊಂಡರೆ, ಸೋತವರು ಮುಂದಿನ ಬಾರಿ ಪ್ರಯತ್ನಿಸಿ ಗೆಲ್ಲುತ್ತೇವೆಂಬ ಆಶಾಭಾವನೆಯಲ್ಲಿದ್ದರು.

ಕ್ರೀಡಾಕೂಟ ಉದ್ಘಾಟನೆ ಸಂದರ್ಭ ಕ್ರೀಡಾಜ್ಯೋತಿಯನ್ನು ಹೊತ್ತು ಹುಮ್ಮಸಿನಿಂದ ಓಡಿಬಂದ ವಿದ್ಯಾರ್ಥಿಗಳು ಕ್ರೀಡಾಜ್ಯೋತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹಸ್ತಾಂತರಿಸಿದರು.

೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ‘ಫ್ಲೇಮ್ ಆಫ್ ಹೋಪ್‘-ಭರವಸೆಯ ಜ್ಯೋತಿ ಹೆಸರಿನ ಜ್ಯೋತಿಯನ್ನು ಹಚ್ಚಿದ ಎಸ್.ಪಿ, ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕೊಡಗರಹಳ್ಳಿ ಶಾಂತಿನಿಕೇತನ ಶಾಲೆಯ ಮುಂದಾಳತ್ವದಲ್ಲಿ ನಡೆದ ಪಥಸಂಚಲನದಲ್ಲಿ ವಿವಿಧ ವಿಶೇಷ ಶಾಲೆಗಳ ವಿದ್ಯಾರ್ಥಿಗಳು ಕೂಡ ಭಾಗವಹಿಸಿ ಶಿಸ್ತಿನ ಹೆಜ್ಜೆ ಹಾಕಿದರು.

ಬೈಲುಕೊಪ್ಪ ಬೋಧಿ ಸತ್ವ ಸಂಸ್ಥೆಯ ಸ್ಥಾಪಕ ಕರ್ಮಾ ರಿನ್‌ಪೋಜೆ ಅವರು ತಾವು ಪೋಷಿಸಿದ ಗಿಡವನ್ನು ನೆಟ್ಟು ಅದರ ಪೋಷಣೆಯ ಜವಾಬ್ದಾರಿಯನ್ನು ಸ್ವಸ್ಥ ಶಾಲೆಗೆ ವಹಿಸಿದರು.

ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ವಿವಿಧೆಡೆಯ ೧೫೦ ಮಕ್ಕಳು ಭಾಗವಹಿಸಿದ್ದರು. ಸ್ವಸ್ಥ ಶಾಲೆಯ ಸುಂಟಿಕೊಪ್ಪ ಹಾಗೂ ಪಾಲಿಬೆಟ್ಟ ಕೇಂದ್ರ, ಪಾಲಿಬೆಟ್ಟದ ಚೆಶೈರ್ ಹೋಮ್ಸ್, ಮಡಿಕೇರಿಯ ಕೊಡಗು ವಿದ್ಯಾಲಯ ವಿಶೇಷ ಶಾಲೆ, ಮೈಸೂರಿನ ದೇವ್‌ದನ್ ಫೌಂಡೇಶನ್, ಮಂಡ್ಯದ ಪ್ರೇರಣಾ ಸಂಸ್ಥೆ, ಮೈಸೂರಿನ ಮಾತೃ ಮಂಡಳಿ, ಬೈಲುಕೊಪ್ಪದ ಬೋಧಿ ಸತ್ವ ಕೇಂದ್ರ ಸೇರಿದಂತೆ ಸ್ವಸ್ಥದ ವತಿಯಿಂದ ಸಮುದಾಯ ಆಧಾರಿತ ಪುನರ್ವಸತಿ ಕಾರ್ಯಕ್ರಮದಡಿಯಲ್ಲಿ ಪ್ರಯೋಜನ ಪಡೆದುಕೊಂಡ ವಿಶೇಷಚೇತನರೂ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

ವಿವಿಧ ವಯೋಮಿತಿಗಳಡಿಯಲ್ಲಿ ಬಾಲಕ-ಬಾಲಕೀಯರಿಗೆ ೫೦, ೧೦೦ ಹಾಗೂ ೨೦೦ ಮೀಟರ್ ಓಟದ ಸ್ಪರ್ಧೆಗಳು, ಶಾಟ್‌ಪುಟ್ ಹಾಗೂ ಲಾಂಗ್ ಜಂಪ್ ಕ್ರೀಡಾಕೂಟಗಳು ಜರುಗಿದವು.

ಯಾವುದಾದರೊಂದು ಕ್ರೀಡೆಯಲ್ಲಿ ಭಾಗವಹಿಸುವುದು ಅತ್ಯಗತ್ಯ - ಎಸ್.ಪಿ ಬಿಂದುಮಣಿ

ಕ್ರೀಡಾಕೂಟವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರು, ಆರೋಗ್ಯಕರ ಜೀವನಕ್ಕಾಗಿ ಯಾವುದಾದರೊಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು ಅತ್ಯಗತ್ಯ. ಆ ಕ್ರೀಡೆಯಲ್ಲಿ ಪರಿಣಿತರಾಗಿರಬೇಕೆಂದಿಲ್ಲ, ದೈಹಿಕ ಕ್ಷಮತೆಗೆ ಕ್ರೀಡೆಯಲ್ಲಿ ಭಾಗವಹಿಸುವ ಗುರಿಯನ್ನು ಎಲ್ಲರೂ ಇಟ್ಟುಕೊಳ್ಳಬೇಕೆಂದರು. ವಿಶೇಷ ಮಕ್ಕಳು ತಮ್ಮ ತಪ್ಪುಗಳ ಬಗ್ಗೆ ಯಾವುದೇ ಚಿಂತನೆಯಿಲ್ಲದೆ ಉತ್ತಮವಾಗಿ ಪಥಸಂಚಲನ ನೆರವೇರಿಸಿಕೊಟ್ಟರು. ಭಾಗವಹಿಸುವಿಕೆಯಷ್ಟೆ ಅವರಿಗೆ ಮುಖ್ಯ, ಇದೇ ರೀತಿ ಎಲ್ಲರೂ ವಿವಿಧ ಕ್ರೀಡೆಗಳಲ್ಲಿ ತೊಡಗಿಸಿಕೊಂಡರೆ ಉತ್ತಮ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ವಸ್ಥ ವಿಶೇಷ ಶಾಲೆಯ ಸ್ಥಾಪಕಿ ಹಾಗೂ ಕೂರ್ಗ್ ಫೌಂಡೇಶನ್ ಟ್ರಸ್ಟಿಗಳಾದ ಗಂಗಾ ಚಂಗಪ್ಪ ಅವರು ಮಾತನಾಡಿ, ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸುವುದೇ ಪೋಷಕರಿಗೆ ಒಂದು ಜಯ. ಎಲ್ಲ ಕ್ರೀಡಾಪಟುಗಳು ಉತ್ತಮವಾಗಿ ಆಡುವಂತೆ ಶುಭ ಹಾರೈಸಿದರು.

ಟಾಟಾ ಕಾಫಿ ಲಿಮಿಟೆಡ್‌ನ ಹಿರಿಯ ವ್ಯವಸ್ಥಾಪಕರಾದ ರಾಜೀವ್ ಕೆ.ಜಿ ಅವರು ಮಾತನಾಡಿ, ಮಕ್ಕಳ ಪ್ರತಿಭೆ ಅನಾವರಣಕ್ಕೆ ಇದೊಂದು ವೇದಿಕೆಯಾಗಿದ್ದು, ತರಬೇತಿ ನೀಡಿದ ಶಿಕ್ಷಕರ ಸೇವೆಗೆ ಶ್ಲಾಘನೆ ವ್ಯಕ್ತಪಡಿಸಿದರು.

ಟಾಟಾ ಕಾಫಿ ಲಿಮಿಟೆಡ್ ಉಪ ವ್ಯವಸ್ಥಾಪಕರಾದ ಬೋಪಯ್ಯ ಸಿ.ಎ ಅವರು ಮಾತನಾಡಿ, ವಿಶೇಷ ಶಾಲೆಗಳನ್ನು ನಿರ್ವಹಣೆ ಮಾಡುವುದು ಸಾಮಾನ್ಯ ಕೆಲಸವಲ್ಲ, ಇದು ದೇವರ ಕೆಲಸವಿದ್ದಂತೆ ಎಂದು ಶಿಕ್ಷಕರ ಸೇವೆಯನ್ನು ಬಣ್ಣಿಸಿದರು.

ಕಾಫಿ ಬೆಳೆಗಾರರಾದ ಬೋಸ್ ಮಂದಣ್ಣ ಅವರು ಮಾತನಾಡಿ, ಸ್ವಸ್ಥ ವಿಶೇಷ ಶಾಲೆಯ ಸಮೀಪವೇ ತಮ್ಮ ನಿವಾಸವಿದ್ದು, ಪ್ರತಿನಿತ್ಯ ಶಾಲೆಯ ಮಕ್ಕಳನ್ನು ಗಮನಿಸುತ್ತೇನೆ. ಅವರುಗಳು ಯಾವಾಗಲೂ ಹರುಷದಿಂದಲೇ ಇರುತ್ತಾರೆ. ವಿಶೇಷ ಮಕ್ಕಳ ಸೇವೆಯನ್ನುಗೈಯುತ್ತಿರುವ ಶಿಕ್ಷಕರು ನೇರವಾಗಿ ಸ್ವರ್ಗಕ್ಕೆ ಹೆÆÃಗುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕೊಡಗು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನ ಡೀನ್ ಡಾ.ಲೋಕೇಶ್ ಅವರು ಮಾತನಾಡಿ, ಕ್ರೀಡಾಕೂಟ ಆಯೋಜಕರನ್ನು ಶ್ಲಾಘಿಸಿದರಲ್ಲದೆ ಆರೋಗ್ಯ ಸಂಬAಧ ಏನೇ ಸಹಕಾರ ಅಗತ್ಯವಿದ್ದರೂ ನೀಡುವುದಾಗಿ ಭರವಸೆ ನೀಡಿದರು. ಕಾಲೇಜಿನ ಇ.ಎನ್.ಟಿ ವಿಭಾಗದ ಮುಖ್ಸಸ್ಥೆ ಶ್ವೇತಾ, ಟಾಟಾ ಕಾಫಿ ಲಿಮಿಟೆಡ್ ವ್ಯವಸ್ಥಾಪಕ ಗೌತಮ್ ಸಿ ಮಣಿ, ಡಾ. ಮೋಹನ್ ಅಪ್ಪಾಜಿ ಅವರುಗಳು ಹಾಜರಿದ್ದರು.

ಸ್ವಸ್ಥ ಸಂಸ್ಥೆಯ ನಿರ್ದೇಶಕಿ ಆರತಿ ಸೋಮಯ್ಯ ಅವರು ಸ್ವಾಗತಿಸಿದರು. ಮಡಿಕೇರಿ ಎಫ್.ಎಮ್.ಸಿ ಕಾಲೇಜಿನ ವಿದ್ಯಾರ್ಥಿಗಳಾದ ಚೆರಿ ಚೋಂದಮ್ಮ ಹಾಗೂ ಸಪ್ನ ಸೇಟ್ ಅವರುಗಳು ಪ್ರಾರ್ಥನೆ ನೆರವೇರಿಸಿದರು. ಚೋಕಿರ ಅನಿತಾ ಅವರು ಕಾರ್ಯಕ್ರಮ ನಿರ್ವಹಿಸಿದರು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಕ್ರೀಡಾಪಟು ಡಾ.ಪುಷ್ಪಾ ಕುಟ್ಟಣ್ಣ, ಟಾಟ ಕಾಫಿ ಉಪ ವ್ಯವಸ್ಥಾಪಕ ಸಿ.ಟಿ ಮುತ್ತಣ್ಣ, ಅಮ್ಮತ್ತಿ ಆರ್.ಐ.ಹೆಚ್.ಪಿ ಚೀಫ್ ಮೆಡಿಕಲ್ ಆಫಿಸರ್ ಡಾ.ಚಂದ್ರು ಸಿ,ಕೆ.ಎನ್, ಉದ್ಯಮಿ ತಮ್ಮು ಪೂವಯ್ಯ ಹಾಗೂ ಪ್ರಮುಖರಾದ ವಿಸ್ಮಯ ಚಕ್ರಬೋರ್ಟಿ ಅವರು ಭಾಗವಹಿಸಿ ಶುಭ ಹಾರೈಸಿದರು.

ರಾಜ್ಯ-ರಾಷ್ಟçಮಟ್ಟಗಳಲ್ಲಿ ಶಟಲ್ ಬ್ಯಾಡ್‌ಮಿಂಟನ್ ಹಾಗೂ ಅಥ್ಲೆಟಿಕ್ಸ್ನಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ದರ್ಶನ್ ಹಾಗೂ ಸ್ವಾತಿ ಅವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಅಥ್ಲೆಟಿಕ್ಸ್ ಸಮಗ್ರ ಚಾಂಪಿಯನ್ ಆಗಿ ಮಂಡ್ಯ ಜಿಲ್ಲೆಯ ಪ್ರೇರಣಾ ಸಂಸ್ಥೆ ಹೊರಹೊಮ್ಮಿತು. ೨ನೇ ಸ್ಥಾನವನ್ನು ಸ್ವಸ್ಥ ಸುಂಟಿಕೊಪ್ಪ ಹಾಗೂ ೩ನೇ ಸ್ಥಾನವನ್ನು ಮಂಗಳೂರಿನ ಸಾನಿಧ್ಯ ಸಂಸ್ಥೆ ಪಡೆದುಕೊಂಡಿತು.