ಕುಶಾಲನಗರ, ಮಾ. ೧೬: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ಆಶ್ರಯದಲ್ಲಿ ಮೂಕಾಂಬಿಕಾ ಪ್ರೌಢಶಾಲೆ ಕುಶಾಲನಗರದ ೧೦ನೇ ತರಗತಿಯ ವಿದ್ಯಾರ್ಥಿಗಳ ವಿಶೇಷ ತರಗತಿ ಕಾರ್ಯಾಗಾರದ ಸಮಾರೋಪ ಸಮಾರಂಭ ನಡೆಯಿತು.
ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಗಣಿತ ವಿಷಯದಲ್ಲಿ ವಿಶೇಷ ತರಗತಿಯನ್ನು ನಡೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ಪರೀಕ್ಷೆಯನ್ನು ಎದುರಿಸಲು ಆತ್ಮವಿಶ್ವಾಸ ತುಂಬುವ ಕೆಲಸವನ್ನು ಕಳೆದ ಮೂರು ತಿಂಗಳಿನಿAದ ನುರಿತ ಶಿಕ್ಷಕರ ಮೂಲಕ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭ ಕಾಲೇಜು ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ ಮಾತನಾಡಿ, ಯೋಜನೆಯಿಂದ ಶೈಕ್ಷಣಿಕ ಅಭಿವೃದ್ಧಿಗಾಗಿ ಸಿಗುವ ಸೌಲಭ್ಯಗಳ ಬಗ್ಗೆ ಯೋಜನೆಯ ಕಾರ್ಯಕ್ರಮಗಳು ಕುರಿತು ವಿವರವಾದ ಮಾಹಿತಿಯನ್ನು ನೀಡಿದರು.
ಭೂಮಿಕಾ ಮಹಿಳಾ ಹಿತ ರಕ್ಷಣಾ ವೇದಿಕೆ ಅಧ್ಯಕ್ಷರಾದ ಫಿಲೋಮಿನ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ನಡೆಸುವ ಎಲ್ಲಾ ಸಮಾಜಮುಖಿ ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಸಂಸ್ಥೆಯ ಮುಖ್ಯ ಶಿಕ್ಷಕರಾದ ಸುರೇಶ್ ಈ ಸಂದರ್ಭ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಮೂಲಕ ಶಿಕ್ಷಣಕ್ಕಾಗಿ ನಮ್ಮ ಶಾಲೆಗೆ ಕೊಟ್ಟಂತ ಕೊಡುಗೆಗಳ ಬಗ್ಗೆ ಸ್ಮರಿಸಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಜ್ಞಾನವಿಕಾಸ ಮೇಲ್ವಿಚಾರಣಾಧಿಕಾರಿ ಕವನ ಸೇವಾ ಪ್ರತಿನಿಧಿ ಜಯಲಕ್ಷ್ಮಿ, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.