ಸೋಮವಾರಪೇಟೆ, ಮಾ. ೧೬: ಕೊಡಗಿನ ಜಾನಪದ ಕಲೆಗಳು ಶ್ರೀಮಂತ ಸಂಸ್ಕೃತಿ, ವೀರ ಪರಂಪರೆ ಮತ್ತು ಪ್ರಕೃತಿಯೊಂದಿಗಿನ ನಿಕಟ ಸಂಬAಧ ಹೊಂದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ. ಪಿ. ರಮೇಶ್ ಹೇಳಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಸಾಂದೀಪನಿ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ ದಿ. ಡಿ. ಜೆ. ಪದ್ಮನಾಭ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ, ‘ಕೊಡಗಿನಲ್ಲಿ ಜಾನಪದ ಕಲೆ’ ವಿಷಯ ಬಗ್ಗೆ ವಿಚಾರ ಮಂಡಿಸಿದರು. ಬೊಳಕಾಟ್, ಕೋಲಾಟ್, ಉಮ್ಮತ್ತಾಟ್ ಮತ್ತು ಕತ್ತಿಯಾಟ್ ಪ್ರಮುಖ ನೃತ್ಯ ಪ್ರಾಕಾರಗಳಾಗಿವೆ. ಇವುಗಳನ್ನು ಸಾಂಪ್ರದಾಯಿಕ ಉಡುಗೆಯೊಂದಿಗೆ, ಡೋಲು ಮತ್ತು ಛತ್ರಿಗಳ ಲಯಕ್ಕೆ ಪ್ರದರ್ಶಿಸಲಾಗುತ್ತದೆ. ಕೊಡಗಿನ ಬೇರೆ ಬೇರೆ ಜನಾಂಗಗಳೂ ಸಹ ತಮ್ಮದೇ ರೀತಿಯಲ್ಲಿ ಜನಪದ ಹಾಡು ಮತ್ತು ನೃತ್ಯಗಳ ಮೂಲಕ ಕೊಡಗಿನ ಸಂಸ್ಕೃತಿಗೆ ಕೊಡುಗೆ ನೀಡಿವೆ ಎಂದರು. ಸೊಬಾನೇ ಹಾಡು, ಒಕ್ಕಲಿಗ ಜನಾಂಗದ ಸುಗ್ಗಿ ಕುಣಿತ, ಯರವ, ಮತ್ತು ಕುರುಬರ ಹಾಡು, ನೃತ್ಯಗಳೂ ಸೇರಿದಂತೆ ಹಲವಾರು ಜನಾಂಗಗಳು ಕೊಡಗಿನ ಸಾಂಸ್ಕೃತಿಕ ಲೋಕಕ್ಕೆ ಕೊಡುಗೆಗಳನ್ನು ನೀಡಿವೆ. ರಂಗಭೂಮಿ ಮತ್ತು ಜಾನಪದ, ಕೊಡಗಿನ ಸಾಂಸ್ಕೃತಿಕ ಲೋಕದೊಂದಿಗೆ ಬೆಸೆದುಕೊಂಡಿದೆ ಎಂದು ರಮೇಶ್ ಅಭಿಪ್ರಾಯಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೇಶವ ಕಾಮತ್ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ವಿಷಯಗಳನ್ನು ಅಭಿವೃದ್ಧಿಗೊಳಿಸುವ ಕಾರ್ಯಕ್ರಮಗಳನ್ನು ಸಾಹಿತ್ಯ ಪರಿಷತ್ ದತ್ತಿ ಕಾರ್ಯಕ್ರಮಗಳ ಮೂಲಕ ಜಿಲ್ಲೆಯಾದ್ಯಂತ ಹಮ್ಮಿಕೊಂಡಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಅಧ್ಯಕ್ಷ ಎಸ್. ಡಿ.ವಿಜೇತ್ ವಹಿಸಿದ್ದರು. ಸಾಂದೀಪನಿ ಶಾಲೆಯ ವ್ಯವಸ್ಥಾಪಕಿ ಹರಿಣಿ, ಪ್ರಬಾರ ಮುಖ್ಯೋಪಾಧ್ಯಾಯಿನಿ ಮಹದೇವಮ್ಮ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿವೇಕ್ ರೈ, ತಾಲೂಕು ಕಾರ್ಯದರ್ಶಿ ಎ. ಪಿ. ವೀರರಾಜ್, ಕಾರ್ಯದರ್ಶಿ ಜ್ಯೋತಿ ಅರುಣ್, ಖಜಾಂಚಿ ಕೆ. ಪಿ. ದಿನೇಶ್, ನಂಗಾರು ಕೀರ್ತಿ ಪ್ರಸಾದ್, ಸಂಘಟನಾ ಕಾರ್ಯದರ್ಶಿ ವಸಂತಿ ರವೀಂದ್ರ ಸೇರಿದಂತೆ ಇತರರು ಇದ್ದರು.
ಪ್ರೌಢಶಾಲಾ ವಿದ್ಯಾರ್ಥಿಗಳು ನಾಡಗೀತೆಯನ್ನು ಹಾಡಿದರು. ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು