ಕಣಿವೆ, ಮಾ. ೧೫: ಹಾರಂಗಿ ಜಲಾಶಯದ ಕ್ರೆಸ್ಟ್ ಗೇಟುಗಳ ಮುಂಬದಿಯ ಅನತಿ ದೂರದಲ್ಲಿ ಹೊಸದಾದ ಸೇತುವೆ ನಿರ್ಮಾಣದ ಕನಸು ಕೊನೆಗೂ ನನಸಾಗಿದೆ. ಶಾಸಕ ಡಾ. ಮಂತರ್ ಗೌಡ ಅವರ ಪ್ರಯತ್ನದಿಂದಾಗಿ ಜಲಸಂಪನ್ಮೂಲ ಸಚಿವಾಲಯದಿಂದ ಸೇತುವೆ ನಿರ್ಮಾಣಕ್ಕೆ ಪೂರಕವಾದ ಅನುದಾನ ಮಂಜೂರಾತಿಯಾಗಿದೆ. ರೂ. ೩೬.೫೦ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸೇತುವೆ ಜಲಾಶಯಕ್ಕೆ ಆಗಮಿಸುವ ಪ್ರವಾಸಿಗರ ಮುಖ್ಯ ಆಕರ್ಷಣೆಯಾಗಲಿದೆ. ಕಳೆದ ಹಲವು ದಶಕಗಳಿಂದ ಪ್ರತಿ ವರ್ಷದ ಮಳೆಗಾಲದಲ್ಲಿ ಜಲಾಶಯದಿಂದ ನದಿಗೆ ೨೫ ಸಾವಿರ ಕ್ಯೂಸೆಕ್ಸ್ಗಳಿಗೂ ಅಧಿಕ ಪ್ರಮಾಣದ ನೀರು ಹರಿಸಿದಾಗ ಜಲಾಶಯದ ಮುಂಬದಿಯಲ್ಲಿ ಈಗ ಇರುವ ಸೇತುವೆ ಮುಳುಗಡೆಗೊಳ್ಳುತ್ತವೆ. ಇದರಿಂದಾಗಿ ಈ ಸೇತುವೆಯ ಸಂಪರ್ಕ ಹಾಗೂ ಸಂಬAಧ ಹೊಂದಿದ್ದ ಅಕ್ಕಪಕ್ಕದ ಗ್ರಾಮಗಳ ಕೃಷಿಕರಿಗೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ ಹಾಗೂ ಗುಡ್ಡೆಹೊಸೂರು ಕಡೆಯಿಂದ ಸೋಮವಾರಪೇಟೆಯತ್ತ ಧಾವಿಸುತ್ತಿದ್ದ ಪ್ರಯಾಣಿಕರ ಸಂಪರ್ಕ ಮಳೆಗಾಲದಲ್ಲಿ ಕಡಿತಗೊಳ್ಳುತ್ತದೆ. ಈ ಸಮಸ್ಯೆ ಮನಗಂಡ ಶಾಸಕ ಡಾ. ಮಂತರ್ ಗೌಡ ವಿಶೇಷ ಆಸಕ್ತಿ ವಹಿಸಿ ಹೊಸ ಸೇತುವೆಯ ನಿರ್ಮಾಣಕ್ಕೆ ತೊಟ್ಟ ಪಣ ನೆರವೇರಿದೆ. ಇದೀಗ ೩೬.೫೦ ಕೋಟಿ ರೂ.ಗಳ ವೆಚ್ಚದ ಹೊಸ ಸೇತುವೆ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಜಲಾಶಯದ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ಹೇಳಿದ್ದಾರೆ.