ಕುಶಾಲನಗರ, ಮಾ. ೧೫: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಕುಶಾಲನಗರ ಶಾಖೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ನಡೆಯಿತು.
ಕುಶಾಲನಗರ ಪಟ್ಟಣದ ಬೈಚನಹಳ್ಳಿ ಬಳಿ ನೂತನವಾಗಿ ನಿರ್ಮಾಣಗೊಂಡಿರುವ ಕಟ್ಟಡವನ್ನು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ. ಗಣಪತಿ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭ ಮಾತನಾಡಿದ ಅವರು ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಈ ಮಾರ್ಚ್ ಅಂತ್ಯದೊಳಗೆ ೨ ಸಾವಿರ ಕೋಟಿ ಠೇವಣಿ ಗುರಿ ಹೊಂದಿದ್ದು ಈಗಾಗಲೇ ೧೮೭೬ ಕೋಟಿ ಠೇವಣಿ ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು. ಗ್ರಾಮೀಣ ಜನರಿಗೆ ಬ್ಯಾಂಕ್ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಯಶಸ್ವಿಯಾಗಿದೆ. ಗ್ರಾಮೀಣ ಭಾಗದ ರೈತರು ಬ್ಯಾಂಕ್ ಸೌಲಭ್ಯದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಜಿಲ್ಲೆಯ ವಿವಿಧೆಡೆ ಇರುವ ೨೭ ಶಾಖಾ ಕೇಂದ್ರಗಳಲ್ಲಿ ಬ್ಯಾಂಕ್ ಸೌಲಭ್ಯ ಹೊಂದಿದ್ದು ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಯಶಸ್ಸು ಗಳಿಸಿದ್ದೇವೆ ಎಂದು ತಿಳಿಸಿದರು.
ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಎಸ್. ಪೂವಯ್ಯ ಭದ್ರತಾ ಕೊಠಡಿ ಉದ್ಘಾಟಿಸಿದರು. ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ನಗದು ಕೌಂಟರ್ ವಿಭಾಗಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಕೆ. ಬೆಳ್ಳಿಯಪ್ಪ ಪ್ರಧಾನ ವ್ಯವಸ್ಥಾಪಕರಾದ ಜಿ.ಎಂ. ಭೋಜಮ್ಮ ಮತ್ತು ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕರುಗಳು, ಗ್ರಾಹಕರು ಇದ್ದರು.