ಸೋಮವಾರಪೇಟೆ, ಮಾ.೧೪: ಯುವಜನತೆ ತಮ್ಮ ಜೀವನದ ಗುರಿಯನ್ನು ಸ್ಪಷ್ಟವಾಗಿ ಹೊಂದಿ ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ತಮ್ಮ ಪಾತ್ರವನ್ನು ನಿಭಾಯಿಸಬೇಕು. ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಕೊಡಗು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾನೂನು ನೆರವು ಅಭಿರಕ್ಷಕಿ ಎಚ್.ಆರ್ ಪವಿತ್ರ ಅಭಿಪ್ರಾಯಪಟ್ಟರು.

ಇನ್ನರ್ ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ಕೊಡಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಯಡೂರು ಗ್ರಾಮದ ಬಿ.ಟಿ.ಸಿ.ಜಿ. ಸರ್ಕಾರಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ‘ಮಾದಕ ವಸ್ತುಗಳನ್ನು ತೊರೆದು ಕನಸ್ಸುಗಳನ್ನು ಬೆಳೆಸಿರಿ, ಒತ್ತುವ ಮೊದಲು ಯೋಚಿಸಿ, ಸೈಬರ್ ಅಪರಾಧಗಳಿಂದ ಎಚ್ಚರ’ ವಿಷಯದಲ್ಲಿ ಉಪನ್ಯಾಸ ನೀಡಿದರು.

ಮಾದಕ ವಸ್ತುಗಳಿಂದ ದೂರವಿರುವುದೇ ಉತ್ತಮ ಜೀವನದ ದಾರಿಯಾಗಿದೆ. ಇಂದಿನ ಯುವಜನತೆ ದೇಶದ ಭವಿಷ್ಯವನ್ನು ರೂಪಿಸುವ ಶಕ್ತಿಯಾಗಿದೆ. ಉತ್ತಮ ಪ್ರಜೆಗಳಾಗಿ ಸಮಾಜ ನಿರ್ಮಾಣದಲ್ಲಿ ಪಾಲ್ಗೊಳ್ಳಬೇಕಾದರೆ ವಿದ್ಯಾರ್ಥಿ ಗಳು ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಹೇಳಿದರು.

ಯಾವುದೇ ಕಾರಣಕ್ಕೂ ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗಬಾರದು. ಒಮ್ಮೆ ಮಾದಕ ದ್ರವ್ಯ ಸೇವನೆ ಅಥವಾ ಮಾರಾಟದಂತಹ ಚಟುವಟಿಕೆಗಳಲ್ಲಿ ತೊಡಗಿದರೆ ಅದು ಜೀವನಪರ್ಯಂತ ಕಳಂಕವಾಗಿ ಉಳಿಯುವುದಷ್ಟೇ ಅಲ್ಲದೆ, ವ್ಯಕ್ತಿಯ ಭವಿಷ್ಯಕ್ಕೂ, ಕುಟುಂಬದ ಗೌರವಕ್ಕೂ ಗಂಭೀರ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು.

ಸೈಬರ್ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹೆಚ್ಚು ಎಚ್ಚರಿಕೆಯಿಂದಿರಬೇಕು. ಆನ್‌ಲೈನ್ ಮಾನಹಾನಿ, ಕೃತಕ ಪ್ರಾತಿನಿಧ್ಯದಿಂದ ವಂಚನೆ, ಬೆದರಿಕೆ, ಮೋಸ ಹಾಗೂ ಇತರ ಅಪರಾಧ ಚಟುವಟಿಕೆಗಳನ್ನು ಗಣಕಯಂತ್ರಗಳು ಮತ್ತು ಅಂತರ್ಜಾಲದ ಮೂಲಕ ನಡೆಸಲಾಗುತ್ತಿದೆ. ಇಂತಹ ಅಪಾಯಕಾರಿ ಕೃತ್ಯಗಳಲ್ಲಿ ಸಿಲುಕಿಕೊಳ್ಳದಂತೆ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು ಎಂದು ಹೇಳಿದರು. ವೈಯಕ್ತಿಕ ಮಾಹಿತಿಗಳಾದ ಯುಪಿಐ ವಿವರಗಳು, ಓಟಿಪಿ, ಪಾಸ್‌ವರ್ಡ್ ಸೇರಿದಂತೆ ಯಾವುದೇ ರಹಸ್ಯ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳಬಾರದು. ಅಪರಿಚಿತರಿಂದ ಬರುವ ಲಿಂಕ್‌ಗಳನ್ನು ಒತ್ತುವುದು ಅಥವಾ ಸಂಶಯಾಸ್ಪದ ಅಪ್ಲಿಕೇಶನ್‌ಗಳನ್ನು ಬಳಸುವುದು ಅಪಾಯಕಾರಿ ಎಂದು ತಿಳಿಸಿದರು.

ಯುವಜನತೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಯಂತ್ರಣದಲ್ಲಿಟ್ಟು, ಹೆಚ್ಚು ಸಮಯವನ್ನು ಪುಸ್ತಕ ಓದುವುದಕ್ಕೆ ಮೀಸಲಿಟ್ಟರೆ ಭವಿಷ್ಯ ಉಜ್ವಲವಾಗುತ್ತದೆ. ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಮೂಲಕ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬಹುದು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಬಿ.ಟಿ.ಸಿ.ಜಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಹರ್ಷ, ಇನ್ನರ್‌ವ್ಹೀಲ್ ಅಧ್ಯಕ್ಷೆ ತನ್ಮಯಿ ಪ್ರವೀಣ್, ಖಜಾಂಚಿ ಆಶಾ ಮೋಹನ್, ಐಎಸ್‌ಒ ನಂದಿನಿ ಮೋಹನ್, ಪದಾಧಿಕಾರಿಗಳಾದ ಲತಾ ನಾಗೇಶ್, ಸವಿತಾ ಉದಯ್, ದಿವ್ಯ ದಯಾಕರ್, ಸರಿತಾ ರಾಜೀವ್, ಉಪನ್ಯಾಸಕಿ ಸುನಿತಾ ಮತ್ತಿತರರು ಇದ್ದರು.