ಕೂಡಿಗೆ, ಮಾ.೧೪: ಸೋಮವಾರಪೇಟೆ ವಲಯ ವ್ಯಾಪ್ತಿಯ ಹುದುಗೂರು ಉಪವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ೫. ಹಾಡಿಗಳ ಕುಟುಂಬ ಸದಸ್ಯರುಗಳಿಗೆ ಉಚಿತ ಅರೋಗ್ಯ ತಪಾಸಣೆ ಯಡವನಾಡು ಸಮುದಾಯ ಭವನದ ಸಭಾಂಗಣದಲ್ಲಿ ನಡೆಯಿತು.

ತಪಾಸಣೆಯಲ್ಲಿ ಸಜ್ಜಳ್ಳಿ ಹಾಡಿ, ಗಂಧದ ಹಾಡಿ, ಕೊಪ್ ಹಾಡಿ, ಸೊಳೆಬಾವಿ ಹಾಡಿ, ಹೆಬ್ಬಾಲೆ ವಿಭಾಗ ಹಣಸೇಪಾರೆ ಹಾಡಿ, ಆಶ್ರಮ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ೧೫೦ಕ್ಕೂ ಹೆಚ್ಚು ಕಾಡಿನಂಚಿನ ಬುಡಕಟ್ಟು ಜನಾಂಗದವರ ಉಚಿತ ಅರೋಗ್ಯ ತಪಾಸಣೆ, ಮತ್ತು ಪೌಷ್ಟಿಕಾಂಶ ಅಹಾರ, ಮತ್ತು ಕುಡಿಯುವ ನೀರಿನ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ವೈದ್ಯಾಧಿಕಾರಿಗಳು ನೀಡಿದರು.

ತಪಾಸಣೆಯಲ್ಲಿ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯ ವೈದ್ಯರಾದ ಡಾ. ಸುರೇಶ್ ಕನಕವರ್, ಸ್ತ್ರೀ ರೋಗ ತಜ್ಞ ಡಾ. ಧನಂಜಯ್, ಮಕ್ಕಳ ತಜ್ಞ ಡಾ. ಸೋಮಶೇಖರ್, ಅರವಳಿಕೆ ತಜ್ಞ ಡಾ.ದೇವಿ ಅನಂದ್, ಸಾರ್ವಜನಿಕ ಆಸ್ಪತ್ರೆ ನಾಲ್ವರು ವೈದ್ಯರು ಹಾಜರಿದ್ದು ೧೫೦ಕ್ಕೂ ಹೆಚ್ಚು ಜನರು ಭಾಗವಹಿಸಿ ಯೋಜನೆಯ ಸದುಪಯೋಗ ಪಡೆದುಕೊಂಡರು.

ಈ ಸಂದರ್ಭ ಸೋಮವಾರಪೇಟೆ ಉಪ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಎ.ಎ. ಗೋಪಾಲ, ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಎನ್. ಶೈಲೇಂದ್ರ ಕುಮಾರ್, ಬುಡಕಟ್ಟು ಜನಾಂಗದ ಅಧ್ಯಕ್ಷ ರವಿ ಸೇರಿದಂತೆ ಶಾಂತಳ್ಳಿ, ಹುದುಗೂರು, ಮಾದಾಪುರ, ಬೇಳೂರು ಉಪ ವಲಯ ಅರಣ್ಯಾಧಿಕಾರಿಗಳು ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಸೇರಿದಂತೆ ಐಗೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವರ್ಗದವರು ಹಾಗೂ ಗ್ರಾಮಸ್ಥರು ಹಾಜರಿದ್ದರು.