ಸಿದ್ದಾಪುರ, ಮಾ.೧೪: ಮಾನವನ ಮೇಲೆ ದಾಳಿ ನಡೆಸಿ ಕೊಂದು ಹಾಕುತ್ತಿದ್ದ ಒಂಟಿ ಸಲಗವನ್ನು ಶುಕ್ರವಾರದಂದು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಸೆರೆಹಿಡಿಯಲು ಯಶಸ್ವಿಯಾಗಿದ್ದು, ಕಾರ್ಯಾಚರಣೆ ಸಂದರ್ಭ ಒಂಟಿ ಸಲಗ ಕಾರ್ಯಾಚರಣೆ ತಂಡದ ಮೇಲೆ ದಾಳಿ ನಡೆಸಲು ಮುಂದಾಗಿತ್ತು. ಈ ವೀಡಿಯೋ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಕಾನೆಗಳನ್ನು ನೋಡಿದ ಒಂಟಿ ಸಲಗ ಎಮ್ಮೆಗುಂಡಿ ಕಾಫಿ ತೋಟದೊಳಗೆ ವೇಗವಾಗಿ ತೆರಳಿತು. ಈ ಸಂದರ್ಭ ತೋಟದ ಗೇಟನ್ನು ಸಿಬ್ಬಂದಿಗಳು ಮುಚ್ಚಿದರು. ಇದರಿಂದ ಕೋಪಗೊಂಡ ಸಲಗವು ಕಾರ್ಯಾಚರಣೆ ತಂಡದ ಸಿಬ್ಬಂದಿಗಳನ್ನು ಅಟ್ಟಾಡಿಸಿಕೊಂಡು ಮುಚ್ಚಿದ ಗೇಟನ್ನು ತೆರೆದು ಮತ್ತೊಂದು ತೋಟಕ್ಕೆ ತೆರಳಿತು. ಸಲಗವು ಬರುವುದನ್ನು ಕಂಡು ಅಪಾಯದಿಂದ ಪಾರಾಗಲು ಸಿಬ್ಬಂದಿಗಳು ಓಡಿ ತಪ್ಪಿಸಿಕೊಂಡರು. ಒಂಟಿ ಸಲಗ ಅಟ್ಟಾಡಿಸಿಕೊಂಡು ಹೋಗುತ್ತಿರುವ ದೃಶ್ಯಗಳು ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.
೭ ಗಂಟೆ ಕಾರ್ಯಾಚರಣೆ
ಸುಮಾರು ೭ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಸೆರೆಹಿಡಿದ ಸಲಗವು ಅಂದಾಜು ೩೫ ವರ್ಷ ಪ್ರಾಯದ್ದು ಎಂದು ತಿಳಿದುಬಂದಿದೆ. ಸಲಗವು ಈ ಹಿಂದೆ ಚೆನ್ನಯ್ಯನಕೋಟೆ ಗ್ರಾಮದಲ್ಲಿ ಮಹಿಳೆ ಸೇರಿದಂತೆ ಎರಡು ಮಂದಿಯನ್ನು ಹಾಗೂ ಹುಂಡಿ ನಿವಾಸಿ ಅಬ್ದುಲ್ ಲತೀಫ್ ಮತ್ತು ಗುರುವಾರ ಕಾಫಿ ಬೆಳೆಗಾರ ಗಣಪತಿಯವರನ್ನು ಹತ್ಯೆ ಮಾಡಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಲಗವು ಕಾಫಿ ತೋಟದಲ್ಲಿ ಬೀಡುಬಿಟ್ಟು ಮಾನವನ ಮೇಲೆ ದಾಳಿ ನಡೆಸುತ್ತಿತ್ತು. ಇದೀಗ ಸೆರೆಹಿಡಿದ ಸಲಗವನ್ನು ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಇರಿಸಲಾಗಿದ್ದು, ವೈದ್ಯರುಗಳು ತಪಾಸಣೆ ಮಾಡಿದ ಬಳಿಕ ರಾಜ್ಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರ ಬಳಿ ಚರ್ಚಿಸಿ ಮುಂದೆ ಇದನ್ನು ಯಾವ ಸಾಕಾನೆ ಶಿಬಿರಕ್ಕೆ ಸ್ಥಳಾಂತರ ಮಾಡಬೇಕೆಂದು ನಿರ್ಧರಿಸಲಾಗುವುದೆಂದು ಸ್ಥಳದಲ್ಲಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ನಿನ್ನೆ ಕಾಡಾನೆ ಸೆರೆಹಿಡಿದ ವಿಚಾರ ತಿಳಿದಾಕ್ಷಣ ಚೆನ್ನಯ್ಯನಕೋಟೆ ರಸ್ತೆಯಲ್ಲಿ ನೂರಾರು ಮಂದಿ ಆಗಮಿಸಿ ವೀಕ್ಷಿಸಿದರು. ವಾಹನಗಳ ದಟ್ಟಣೆ ಹಾಗೂ ಸಾರ್ವಜನಿಕರನ್ನು ನಿಯಂತ್ರಿಸಲು ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಹಾಗೂ ಪೊಲೀಸ್ ಸಿಬ್ಬಂದಿಗಳು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಹರಸಹಾಸಪಟ್ಟರು.
ಸಲಗವನ್ನು ಲಾರಿಗೆ ಹತ್ತಿಸಲು ಸಾಕಾನೆಗಳಾದ ಹರ್ಷ ಹಾಗೂ ಅಯ್ಯಪ್ಪ ಸಹಕಾರದಿಂದ ಅರಣ್ಯ ಇಲಾಖಾ ಸಿಬ್ಬಂದಿಗಳು ಯಶಸ್ವಿಯಾದರು. ಕ್ರೇನ್ ಬಳಸಿ ಲಾರಿಗೆ ಹತ್ತಿಸಲಾಯಿತು.
ಮಾನವನ ಮೇಲೆ ದಾಳಿ ನಡೆಸುತ್ತಿದ್ದ ಒಂಟಿ ಸಲಗವನ್ನು ಕಾರ್ಯಾಚರಣೆ ನಡೆಸಿ ಸೆರೆಹಿಡಿದ ಬಗ್ಗೆ ಮಾಹಿತಿ ನೀಡಿದ ವೀರಾಜಪೇಟೆ ತಾಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಹೆಚ್ ಜಗನಾಥ್ ಮಾತನಾಡಿ, ಶುಕ್ರವಾರ ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ತಂಡ ೬ ಸಾಕಾನೆಗಳ ನೆರವಿನಿಂದ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಸಲಗವು ಕಾರ್ಯಾಚರಣೆ ತಂಡವನ್ನು ನೋಡಿದ ಕೂಡಲೇ ಅತಿ ವೇಗವಾಗಿ ಓಡುತ್ತಾ ತಪ್ಪಿಸಿಕೊಳ್ಳುತ್ತಿತ್ತು. ಆದರೆ ತಂಡ ಹಾಗೂ ಪೊಲೀಸರ, ಸಾರ್ವಜನಿಕರ ಸಹಕಾರದಿಂದ ಸಲಗವನ್ನು ಸೆರೆಹಿಡಿಯಲಾಗಿದೆ.
ಡ್ರೋನ್ ಕ್ಯಾಮರವನ್ನು ಬಳಸಿ ಆನೆ ಇರುವಿಕೆ ಜಾಗವನ್ನು ಗುರುತಿಸಲಾಯಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಆನೆ ಕಾರ್ಯಾಚರಣೆ ತಂಡ ಉತ್ತಮ ರೀತಿಯಲ್ಲಿ ಶ್ರಮಪಟ್ಟು ಸಲಗವನ್ನು ಸೆರೆಹಿಡಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
-ವಾಸು ಎ.ಎನ್