ಸಿದ್ದಾಪುರ, ಮಾ.೧೪ : ಆಟೋರಿಕ್ಷಾಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಆಟೋ ಚಾಲಕ ಹಾಗೂ ಪ್ರಯಾಣಿಸುತ್ತಿದ್ದ ಮಹಿಳೆ ಗಾಯಗೊಂಡ ಘಟನೆ ಸಿದ್ದಾಪುರದ ಮಡಿಕೇರಿ ರಸ್ತೆಯಲ್ಲಿ ನಡೆದಿದೆ.
ಸಿದ್ದಾಪುರ ಪಟ್ಟಣದಿಂದ ನೆಲ್ಲಿ ಹುದಿಕೇರಿ ಗ್ರಾಮಕ್ಕೆ ವಿಶ್ವನಾಥ್ ಎಂಬವರು ತಮ್ಮ ಆಟೋರಿಕ್ಷಾದಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ನೆಲ್ಲಿಹುದಿಕೇರಿಯಿಂದ ಸಿದ್ದಾಪುರಕ್ಕೆ ಬರುತ್ತಿದ್ದ ಆಲ್ಟೊ ಕಾರು ಆಟೋರಿಕ್ಷಾಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಆಟೋರಿಕ್ಷಾ ಕೆ.ಎ.೧೨-ಸಿ೦೩೭೯ ಚಾಲನೆ ಮಾಡುತ್ತಿದ್ದ ವಿಶ್ವನಾಥ ಅವರಿಗೆ ಸಣ್ಣಪುಟ್ಟ ಗಾಯವಾಗಿದ್ದು ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಕರಡಿ ಗೋಡು ಗ್ರಾಮದ ನಿವಾಸಿ ಜಾನಕಿ ತಲೆಗೆ ಗಾಯವಾಗಿದೆ. ಆಟೋರಿಕ್ಷಾ ಜಖಂಗೊAಡಿದೆ. ಕಾರಿನ ಮುಂಭಾಗಕ್ಕೆ ಹಾನಿಯಾಗಿದೆ.
ಗಾಯಾಳು ಜಾನಕಿ ಅವರನ್ನು ಸಿದ್ಧಾಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಕಾರು ಚಾಲಕ ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಮುಸ್ತಫ ಎಂಬವರ ವಿರುದ್ಧ ಆಟೋ ಚಾಲಕ ವಿಶ್ವನಾಥ್ ದೂರು ನೀಡಿದ ಮೇರೆಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಮುಸ್ತಫ ವಿರುದ್ಧ ಪ್ರಕರಣ ದಾಖಲಾಗಿದೆ.