ಕಣಿವೆ, ಮಾ. ೧೩: ಹಳ್ಳಿ ಹಳ್ಳಿಗಳಲ್ಲಿ ಸರ್ಕಾರ ತೆರೆದಿರುವ ಮದ್ಯದಂಗಡಿಗಳ ಪರಿಣಾಮವಾಗಿ ೨ ಕೋಟಿ ಮಂದಿ ವ್ಯಸನಕ್ಕೆ ತುತ್ತಾಗಿ ಜೀವನ ಕಳೆದುಕೊಳ್ಳುತ್ತಿದ್ದಾರೆ ಎಂದು ಹಿಂದೂ ಜನಜಾಗೃತಿ ಸನಾತನ ಸಂಸ್ಥೆಯ ಕರ್ನಾಟಕ ಪ್ರಾಂತ ಪ್ರಚಾರಕರಾದ ಸಂತ ರಮಾನಂದ ಗೌಡ ವಿಷಾದಿಸಿದರು.

ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಧರ್ಮ ಜಾಗೃತಿಯ ವಿಶೇಷ ಉಪನ್ಯಾಸ ನೀಡಿದ ಅವರು, ಪದವಿಗಳನ್ನು ಪೂರೈಸಿದ ವಿದ್ಯಾವಂತ ಯುವಕರು ನಿರುದ್ಯೋಗಿಗಳಾಗುತ್ತಿದ್ದಾರೆ.

ಬಹುತೇಕ ಗ್ರಾಮಗಳಲ್ಲಿ ಕೃಷಿಕ ಗಂಡು ಮಕ್ಕಳಿಗೆ ಹೆಣ್ಣುಮಕ್ಕಳು ಸಿಗದೇ ವಯಸ್ಸು ಮೀರುತ್ತಿದೆ.

ಹೆತ್ತವರು ಕೊರಗಿನಲ್ಲಿ ರೋಗ ಪೀಡಿತರಾಗುತ್ತಿದ್ದಾರೆ. ಅನವಶ್ಯಕವಾಗಿ ಮೊಬೈಲ್‌ಗಳ ದಾಸರಾಗಿರುವ ಮಕ್ಕಳು ಹಾಗೂ ಯುವಕರು ಶೇ.೮೯ ರಷ್ಟು ನಗ್ನ ಸ್ಥಿತಿಯ ವೀಡಿಯೋಗಳನ್ನು ನೋಡುತ್ತಾ, ನಮ್ಮ ಸನಾತನ ಸಂಸ್ಕೃತಿಯನ್ನು ವಿನಾಶದತ್ತ ಒಯ್ತುತ್ತಿದ್ದಾರೆ. ಶೇ. ೮೫ ರಷ್ಟು ಕಣ್ಣಿಗೆ ತೊಂದರೆ ಮಾಡಿಕೊಳ್ಳುತ್ತಿದ್ದಾರೆ.

ಜಗತ್ತಿನ ಒಟ್ಟು ೧೮೦ ರಾಷ್ಟ್ರಗಳ ಪೈಕಿ ಭಾರತ ಭ್ರಷ್ಟಾಚಾರದಲ್ಲಿ ೯೬ ನೇ ಸ್ಥಾನದಲ್ಲಿದೆ. ಇಂದಿನ ಮಕ್ಕಳಿಗೆ ಶಿಕ್ಷಣವನ್ನು ಮಾತ್ರ ಕೊಡುತ್ತಿರುವ ಶಾಲೆಗಳು ಧರ್ಮ, ಮೋಕ್ಷ ಹಾಗೂ ಸಂಸ್ಕಾರಗಳನ್ನು ಕಲಿಸುತ್ತಿಲ್ಲ. ಹಾಗಾಗಿ ವೃದ್ದಾಶ್ರಮಗಳು ಹೆಚ್ಚುತ್ತಿವೆ.

ತಂದೆ ತಾಯಿ, ಕುಟುಂಬ ವಾತ್ಸಲ್ಯ ಇಂದಿನ ಮಕ್ಕಳಲ್ಲಿ ಮರೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಹಿಂದೂ ರಾಷ್ಟçದ ಭದ್ರತೆಗಾಗಿ ಏಕತೆಗಾಗಿ ಐಕ್ಯತೆಗಾಗಿ ಅಹರ್ನಿಶಿ ದುಡಿಯಬೇಕು ಎಂದು ಕರೆಕೊಟ್ಟರು.