ಕಣಿವೆ, ಮಾ. ೧೩: ಶುಕ್ರವಾರ ಬೈಲಕೊಪ್ಪ ಪೊಲೀಸ್ ಠಾಣಾ ಸರಹದ್ದಿನಲ್ಲಿ ಸಂಭವಿಸಿದ ಬೈಕ್ ಅವಘಡದಲ್ಲಿ ಕುಶಾಲನಗರದ ಸರ್ಕಾರಿ ಪಿಯು ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿ ಸುಮಂತ್ ಸಾವೀಗೀಡಾಗಿದ್ದಾನೆ.
ಬೈಲಕೊಪ್ಪ ಬಳಿಯ ನವಿಲೂರು ನಿವಾಸಿ ಕೃಷಿಕ ಶ್ರೀನಿವಾಸ್ ಎಂಬವರ ಪುತ್ರನಾದ ಸುಮಂತ್, ರಾಜ್ಯಶಾಸ್ತç ವಿಷಯದ ಪರೀಕ್ಷೆ ಬರೆಯಲು ಮನೆಯಿಂದ ಕಾಲೇಜಿಗೆ ಬರುವಾಗ ನಿತ್ಯವೂ ಪೋಷಕರಾದ ಶ್ರೀನಿವಾಸ್ ತಮ್ಮ ದ್ವಿಚಕ್ರ ವಾಹನದಲ್ಲಿ ನವಿಲೂರಿನಿಂದ ಬೈಲಕೊಪ್ಪದ ವರೆಗೆ ಬಿಡುತ್ತಿದ್ದರು. ಬಳಿಕ ಆತ ಬಸ್ ನಲ್ಲಿ ಕಾಲೇಜಿಗೆ ಬಂದು ತೆರಳುತಿದ್ದ. ಈಗ ಪರೀಕ್ಷೆ ನಡೆಯುತ್ತಿರುವ ಕಾರಣ ಸಕಾಲದಲ್ಲಿ ಬಸ್ ಸಿಗುವುದಿಲ್ಲ ಎಂಬ ಕಾರಣಕ್ಕೆ ಪೋಷಕರ ವಿರೋಧದ ನಡುವೆಯೂ ತಮ್ಮ ದ್ವಿಚಕ್ರ ವಾಹನದಲ್ಲಿ ಕುಶಾಲನಗರದ ಕನ್ನಡ ಭಾರತಿ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಆಗಮಿಸುತ್ತಿದ್ದಾಗ ಶುಕ್ರವಾರ ಬೆಳಗ್ಗೆ ೯ ಗಂಟೆಯ ಸಮಯದಲ್ಲಿ ಬೈಲಕೊಪ್ಪ ಹೆದ್ದಾರಿಯಲ್ಲಿ ನಡೆದ ಮುಖಾಮುಖಿ ಬೈಕ್‌ಗಳ ಅವಘಡದಿಂದಾಗಿ ಸ್ಥಳದಲ್ಲೇ ಸುಮಂತ್ ಸಾವನ್ನಪ್ಪಿದ್ದಾನೆ.
ಬಳಿಕ ಕುಶಾಲನಗರದ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಪಾರ್ಥಿವ ಶರೀರವನ್ನು ತಂದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಹುಟ್ಟೂರು ನವಿಲೂರಿನಲ್ಲಿ ಸಂಜೆ ಅಂತ್ಯಕ್ರಿಯೆ ನೆರವೇರಿತು.
ಈಗಾಗಲೇ ನಾಲ್ಕು ವಿಷಯಗಳ ಬಗ್ಗೆ ಪರೀಕ್ಷೆ ಬರೆದಿದ್ದ ಮೃತ ಸುಮಂತ್ ಶುಕ್ರವಾರ ರಾಜ್ಯಶಾಸ್ತç ಪರೀಕ್ಷೆ ಬರೆಯಲು ಧಾವಿಸುತ್ತಿದ್ದಾಗ ವಿಧಿ ಬಲಿ ಪಡೆದಿದೆ. ಕುಟುಂಬಸ್ಥರ ಆಕ್ರಂದನ ಹೇಳತೀರದಾಗಿತ್ತು. ಬೈಲಕೊಪ್ಪ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.