ಸಿದ್ದಾಪುರ, ಮಾ. ೧೩: ಕೆರೆಯಲ್ಲಿ ಈಜಲು ತೆರಳಿದ ಕಾರ್ಮಿಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ಹಾಲುಗುಂದ ಗ್ರಾಮದಲ್ಲಿ ಗುರುವಾರ ಸಂಜೆ ಸಂಭವಿಸಿದೆ.

ಹಾಲುಗುಂದ ಗ್ರಾಮದ ನಿವಾಸಿ ಅರುಣ್ ಎಂಬವರ ಕಾಫಿ ತೋಟದಲ್ಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿರುವ ಅಣ್ಣಪ್ಪ (೨೬) ಎಂಬಾತ ಗುರುವಾರ ಸಂಜೆ ಅಂದಾಜು ೬-೪೫ರ ಸಮಯಕ್ಕೆ ಕಾಫಿ ತೋಟದ ಕೆರೆಯಲ್ಲಿ ಈಜಲು ತೆರಳಿದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈತನೊಂದಿಗೆ ಇದ್ದ ಇತರ ಕಾರ್ಮಿಕರು ಅಣ್ಣಪ್ಪನನ್ನು ಹುಡುಕಾಡಿದಾಗ ಈತ ಪತ್ತೆಯಾಗಿಲ್ಲ. ಬಳಿಕ ಕೆರೆಯ ಒಳಗೆ ಹುಡುಕಾಡಿದಾಗ ಮೃತ ದೇಹ ಪತ್ತೆಯಾಗಿರುತ್ತದೆ. ಈ ಬಗ್ಗೆ ಮೃತ ಅಣ್ಣಪ್ಪನ ತಾಯಿ ಕಾಮಿ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.