ವಿಶೇಷ ವರದಿ : ಹೆಚ್.ಕೆ. ಜಗದೀಶ್
ಗೋಣಿಕೊಪ್ಪಲು, ಮಾ. ೧೨: ಬಿಸಿಲಿನ ಜಳ ಹೆÀಚ್ಚಾಗುತ್ತಿದ್ದಂತೆಯೇ ಅಂತರ್ ಜಲವು ಕುಸಿಯಲಾರಂಭಿಸಿದ್ದು ವಾಣಿಜ್ಯ ನಗರದಲ್ಲಿ ಮಾರ್ಚ್ ತಿಂಗಳಿನಲ್ಲಿಯೇ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುತ್ತಿದೆ. ವಿವಿಧ ಬಡಾವಣೆಗಳಲ್ಲಿ ೨ ದಿನಗಳಿಗೊಮ್ಮೆ ಕುಡಿಯುವ ನೀರು ಸದ್ಯದ ಮಟ್ಟಿಗೆ ಲಭಿಸುತ್ತಿದೆ. ಮುಂದಿನ ಏಪ್ರಿಲ್, ಮೇ ತಿಂಗಳಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರತೆ ಪಡೆಯುವ ಲಕ್ಷಣಗಳು ಕಾಣುತ್ತಿವೆ.
ಈ ಮಧ್ಯೆ ವಿವಿಧ ಬಡಾವಣೆಗಳಲ್ಲಿ ಬೋರ್‌ವೆಲ್ ಲಾರಿಗಳು ರಾತೋರಾತ್ರಿ ಆಗಮಿಸಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ೮೦೦ರಿಂದ ೯೦೦ ಅಡಿಗಳ ಆಳದವರೆಗೂ ಕೊಳವೆ ಬಾವಿಗಳನ್ನು ಕೊರೆಯಲಾಗುತ್ತಿದೆ. ಸಾರ್ವಜನಿಕರ ಕುಡಿಯುವ ನೀರಿಗಾಗಿ ಗ್ರಾಮ ಪಂಚಾಯಿತಿಯು ಈ ಹಿಂದೆಯೇ ಕೊರೆಸಲಾಗಿರುವ ಕೊಳವೆ ಬಾವಿಗಳ ನೀರು ಇದರಿಂದ ಬತ್ತಲಾರಂಭಿಸಿದೆ.
ಕೊಳವೆ ಬಾವಿಗಳನ್ನು ತೋಡುತ್ತಿರುವುದರಿಂದ ಶಬ್ದ ಮಾಲಿನ್ಯದಿಂದಾಗಿ ರಾತ್ರಿ ವೇಳೆ ಬಡಾವಣೆಯ ನಿವಾಸಿಗಳಿಗೆ ನಿದ್ರೆಗೆ ಭಂಗ ಉಂಟಾಗುತ್ತಿದೆ. ಅಲ್ಲದೆ ಕೊಳವೆ ಬಾವಿಗಳಿಂದ ಬರುವ ಮರಳು ಮಿಶ್ರಿತ ದೂಳುಗಳು ಸುತ್ತಮುತ್ತಲಿನ ವಾಸದ ಮನೆಗಳನ್ನು ತುಂಬುತ್ತಿವೆ. ಈ ಬಗ್ಗೆ ನಾಗರಿಕರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಕೊಳವೆ ಬಾವಿಗಳನ್ನು ಕೊರೆಯಲು ಸ್ಥಳೀಯ ಗ್ರಾಮ ಪಂಚಾಯಿತಿಯ ಅನುಮತಿಯು ಕಡ್ಡಾಯವಾಗಿದ್ದರೂ ನಿಯಮ ಗಳನ್ನು ಹಾಗೂ ಸರ್ಕಾರದ ಸುತ್ತೋಲೆಗಳನ್ನು ಗಾಳಿಗೆ ತೂರಿ ತಮಗೆ ಬೇಕಾದ ರೀತಿಯಲ್ಲಿ ಕೊಳವೆ ಬಾವಿಗಳನ್ನು ವಿವಿಧ ಬಡಾವಣೆಗಳಲ್ಲಿ ಕೊರೆಸಲಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಕಾಡಲಾರಂಭಿಸಿದೆ. ರಾತೋರಾತ್ರಿ ಆಗಮಿಸುವ ಬೋರ್‌ವೆಲ್ ಲಾರಿಗಳಿಂದ ಬಡಾವಣೆಗಳಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಕಟ್ಟಡಗಳಿಗೆ ಕೊಳವೆ ಬಾವಿಗಳನ್ನು ಕೊರೆಸುತ್ತಿದ್ದಾರೆ. ಇದರಿಂದಾಗಿ ಸುತ್ತಮುತ್ತಲಿನ ವಾಸದ ಮನೆಯವರಿಗೆ ಸಮಸ್ಯೆ ಎದುರಾಗುತ್ತಿದೆ.