ಕಣಿವೆ, ಮಾ. ೧೨: ಕುಶಾಲನಗರ ತಾಲೂಕು ಸೀಗೆಹೊಸೂರು ಹಾಗೂ ಯಲಕ್ಕನೂರು ಹೊಸಳ್ಳಿ ಸಂಪರ್ಕ ಕಲ್ಪಿಸುವ ಸೀಗೆಹೊಸೂರು ಬಳಿ ಕಕ್ಕೆಹೊಳೆಗೆ ಅಡ್ಡಲಾಗಿ ನಿರ್ಮಿಸಿರುವ ಬ್ರಿಟಿಷರ ಕಾಲದ ಸೇತುವೆ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ಕುಸಿದು ಬೀಳುವ ಹಂತದಲ್ಲಿದೆ.
ಈ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿರುವ ಗ್ರಾಮಸ್ಥರು, ಬ್ರಿಟಿಷರ ಕಾಲದಲ್ಲಿ ನಿರ್ಮಿಸಿರುವ ಈ ಸೇತುವೆಯು ಬಹಳಷ್ಟು ಗಟ್ಟಿಮುಟ್ಟಾಗಿತ್ತು. ಕಳೆದ ೨೦ ವರ್ಷಗಳ ಈಚೆಗೆ ಎಲಕ್ಕನೂರು - ಹೊಸಳ್ಳಿ ವ್ಯಾಪ್ತಿಯಲ್ಲಿ ತಲೆಎತ್ತಿದ ಹತ್ತಾರು ಕಲ್ಲುಕೋರೆಗಳ ನೂರಾರು ಲಾರಿಗಳ ಸಂಚಾರದಿAದಾಗಿ ಸೇತುವೆ ಶಿಥಿಲಗೊಂಡಿದೆ. ಇಲ್ಲಿ ಕೆಲವೊಂದು ಕ್ವಾರಿಗಳಿಂದ ೨೦ ಟನ್ಗಳಿಗೂ ಅಧಿಕ ತೂಕದ ಕಲ್ಲುಗಳನ್ನು ಬೃಹತ್ ಲಾರಿಗಳಲ್ಲಿ ಸಾಗಿಸುತ್ತಿದ್ದು ರಸ್ತೆಯೂ ಹಾಳಾಗಿದೆ. ಸ್ಥಳೀಯ ಕೃಷಿಕರು ಹಾಗೂ ಶಾಲಾ-ಕಾಲೇಜು ಮಕ್ಕಳ ಸಂಪರ್ಕ ಸೇತುವಾದ ಈ ಸೇತುವೆ ಕುಸಿದರೆ ಮಲೆಗಾಲದಲ್ಲಿ ಈ ಭಾಗದ ಜನರ ಜೀವನ ನರಕವಾಗಲಿದೆ ಎಂಬುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆದ್ದರಿಂದ ಜಿಲ್ಲಾಡಳಿತ ಕೂಡಲೇ ಶಿಥಿಲಾವಸ್ಥೆಯ ಸೇತುವೆಯ ಮೇಲಿನ ಲಾರಿಗಳ ಸಂಚಾರವನ್ನು ಕೂಡಲೇ ನಿಷೇಧಿಸಿ ಬದಲಿ ಮಾರ್ಗವನ್ನು ಸೂಚಿಸಬೇಕಿದೆ. ಕೂಡಲೇ ಹೊಸ ಸೇತುವೆ ನಿರ್ಮಾಣವಾದ ಕ್ರಮ ಕೈಗೊಳ್ಳಬೇಕಿದೆ ಎಂದು ಎಲಕ್ಕನೂರು, ಹಳೆ ಮದಲಾಪುರ, ಕಣಿವೆ, ಭುವನಗಿರಿ, ಸೀಗೆಹೊಸೂರು ಮೊದಲಾದ ಗ್ರಾಮಗಳ ನಿವಾಸಿಗಳು ಆಗ್ರಹಿಸಿದ್ದಾರೆ.
ಗಟ್ಟಿಮುಟ್ಟಾಗಿದ್ದ ಸೇತುವೆ ಸಂಪೂರ್ಣ ಶಿಥಿಲಗೊಂಡಿದ್ದು ಕುಸಿಯುವ ಹಂತ ತಲುಪಿದ್ದರೂ ಕೂಡ ಸಂಬAಧಿತ ಇಲಾಖೆಯ ಅಧಿಕಾರಿಗಳು ಇತ್ತ ಗಮನಿಸದೇ ಇರುವುದು ವಿಪರ್ಯಾಸ. ಆದ್ದರಿಂದ ಕೂಡಲೇ ಜಿಲ್ಲಾಡಳಿತ ಈ ಸೇತುವೆಯನ್ನು ಸರಿಪಡಿಸಬೇಕು. ಒಂದು ವೇಳೆ ಸೇತುವೆ ಕುಸಿದು ಬಿದ್ದಲ್ಲಿ ಕುಶಾಲನಗರ ಸಂಪರ್ಕ ಸ್ಥಗಿತಗೊಳ್ಳುವ ಅಪಾಯವಿದೆ. ಪರಿಣಾಮ ಸೋಮವಾರಪೇಟೆ ಮಾರ್ಗವಾಗಿ ಸುಮಾರು ೩೦ ಕಿಲೋಮೀಟರ್ ಬಳಸಿ ಕುಶಾಲನಗರಕ್ಕೆ ಧಾವಿಸಬೇಕಾಗುತ್ತದೆ. ಆದ್ದರಿಂದ ಇಲ್ಲಿ ನಿತ್ಯವೂ ಸಂಚರಿಸುತ್ತಿರುವ ಕಲ್ಲುಕೋರೆ ಲಾರಿಗಳ ಸಂಚಾರವನ್ನು ಸ್ಥಗಿತಗೊಳಿಸಬೇಕು ಎಂದು ಸ್ಥಳೀಯರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಮಳೆಗಾಲದಲ್ಲಿ ಹೆಚ್ಚು ಮಳೆ ನೀರು ಕಕ್ಕೆಹೊಳೆ ಮೈದುಂಬಿ ಹರಿಯುವ ಕಾರಣ ಕೂಡಲೇ ಸೇತುವೆಯ ಕಾಯಕಲ್ಪಕ್ಕೆ ಮುಂದಾಗಬೇಕೆAಬುದು ಸ್ಥಳೀಯರ ಆಗ್ರಹವಾಗಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕ ಮಹಿಳೆಯರು ಹಾಗೂ ಗ್ರಾಮ ವಾಸಿಗಳಿಗೆ ಅನಾನುಕೂಲವಾಗುವ ಮುನ್ನ ಸೇತುವೆ ಸರಿಪಡಿಸಿಕೊಡಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.