ವೀರಾಜಪೇಟೆ: ವೀರಾಜಪೇಟೆಯ ಕಾವೇರಿ ಶಾಲೆಯಲ್ಲಿ ಯು.ಕೆ.ಜಿ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಹಾಗೂ ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಸುದೇಶ್, ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಅಂತಿಮ ಹಂತದಲ್ಲಿ ಹೇಗೆ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳಬೇಕು ಎಂದು ವಿವರಿಸಿದರು.

ಪೋಷಕ ಶಿಕ್ಷಕ ಸಮಿತಿಯ ಸದಸ್ಯ ಸುಮೇಶ್ ಮಾತನಾಡಿ, ಪ್ರಸ್ತುತ ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಸತತ ಪ್ರಯತ್ನದಿಂದ ಮಾತ್ರ ಸಾಧನೆ ಸಾಧ್ಯ ಎಂದರು. ಯು.ಕೆ.ಜಿ ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯ ಶಿಕ್ಷಕಿ ಪಾರ್ವತಿ ಪಿ.ಯು. ಪದವಿ ಪ್ರದಾನ ಮಾಡಿದರು.

೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಸುದೇಶ್ ಬಿ.ಎಸ್. ಹಾಗೂ ಕಾರ್ಯದರ್ಶಿ ವಿನೋದ್ ಪಿ.ಎನ್ ಪದವಿ ಪ್ರದಾನ ಮಾಡಿದರು. ಕಳೆದ ಶೈಕ್ಷಣಿಕ ವರ್ಷ ೨೦೨೪-೨೫ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ ತೃತೀಯ ಸ್ಥಾನವನ್ನು ಗಳಿಸಿದ ವಿದ್ಯಾರ್ಥಿ ಹಾಗೂ ವಿಷಯವಾರು ಅತ್ಯುತ್ತಮ ಸ್ಥಾನವನ್ನು ಗಳಿಸಿದಂತಹ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಫಲಕಗಳನ್ನು ಸಂಯೋಜಕಿಯಾದ ಅಮೃತ ಅರ್ಜುನ್ ನೀಡಿದರು.

ಈ ಸಂದರ್ಭದಲ್ಲಿ ಶಾಲೆಯೊಂದಿಗಿನ ಒಡನಾಟದ ಬಗ್ಗೆ ವಿದ್ಯಾರ್ಥಿಗಳಾದ ಕಾವೇರಮ್ಮ ಎಂ.ಜಿ., ದೀಪ್ತಿ ತಂಗಮ್ಮ, ಹನಾ ಪಲಕ್, ಹೈಜಾ, ಸುಹಾನಿ ಪುರೋಹಿತ್ ಹಾಗೂ ಜೋಯಾ ಯುಕೆಜಿ ವಿದ್ಯಾರ್ಥಿಗಳಾದ ಮೊಹಮ್ಮದ್ ರೈಹಾನ್ ಹಾಗೂ ವಿದ್ಯಶ್ರೀ ನರ್ಸರಿ ವಿಭಾಗದಲ್ಲಿ ಕಳೆದ ಅನಿಸಿಕೆ ವ್ಯಕ್ತಪಡಿಸಿದರು.

೨೦೨೪- ೨೫ ನೇ ಸಾಲಿನಲ್ಲಿ ತರಗತಿವಾರು ಅತ್ಯುತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಸಮಿತಿಯ ಸದಸ್ಯ ಸುಮೇಶ್ ಅಭಿನಂದನಾ ಫಲಕ ವಿತರಿಸಿದರು.

ಯುಕೆಜಿ ವಿದ್ಯಾರ್ಥಿ ಶಾನ್ ಕಾರ್ಯಪ್ಪ ಪೋಷಕರಾದ ಕೌಶಲ್ಯ, ೧೦ನೇ ತರಗತಿಯ ವಿದ್ಯಾರ್ಥಿ ವೃಶಾಂಕ್ ದೇವಯ್ಯರವರ ಪೋಷಕರಾದ ಪ್ರಿಯಾಂಕ ಮಿಥುನ್ ಹಾಗೂ ೧೦ನೇ ತರಗತಿಯ ಹನಾ ಫಲಕ್ ಪೋಷಕರಾದ ಮತಿನ್ ಮಾತನಾಡಿದರು.

ಕಳೆದ ಸಾಲಿನ ವಾರ್ಷಿಕ ಪರೀಕ್ಷೆಯ ಅತ್ಯುತ್ತಮ ಸಾಧನೆಮಾಡಿ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳ ಮಾರ್ಗದರ್ಶಕರಿಗೆ ನಗದು ಬಹುಮಾನ ನೀಡಿ ಅಭಿನಂದಿಸಿದರು. ೯ನೇ ತರಗತಿಯ ವಿದ್ಯಾರ್ಥಿಗಳಾದ ಕೃತಿಕಾ ಕಾವೇರಮ್ಮ ಹಾಗೂ ಸನ ಪಿ.ಎಸ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊAಡರು.

೨೦೨೪-೨೫ ನೇ ಸಾಲಿನ ಪೋಷಕ ಶಿಕ್ಷಕ ಸಮಿತಿಯ ಸದಸ್ಯರು ಹಾಗೂ ಪೋಷಕರಾದ ಸೋಮೇಶ್ ಅವರಿಗೆ ಶಾಲಾ ಆಡಳಿತ ಮಂಡಳಿಯವರು ಗೌರವ ಕಾಣಿಕೆಯನ್ನು ನೀಡಿ, ಅಭಿನಂದಿಸಿದರು.

ಶಾಲೆ ಆಡಳಿತ ಮಂಡಳಿಯ ಕಾರ್ಯದರ್ಶಿ ವಿನೋದ್ ಪಿ.ಎನ್ ವಿದ್ಯಾರ್ಥಿಗಳಿಗೆ ಪ್ರತಿ ಯಶಸ್ಸಿನ ಹಿಂದೆ ಪ್ರಯತ್ನ ಇದ್ದೇ ಇರುತ್ತದೆ ಎಂಬುದನ್ನು ಮನವರಿಕೆ ಮಾಡಿದರು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಿ, ನಂತರ ಆಗಮಿಸಿದ ಎಲ್ಲರಿಗೂ ಲಘು ಉಪಹಾರವನ್ನು ಏರ್ಪಡಿಸಲಾಯಿತು.

ಕಾರ್ಯಕ್ರಮದಲ್ಲಿ ಸಹಶಿಕ್ಷಕಿ ಲೀನಾ ಸಿ.ಡಿ ಸ್ವಾಗತಿಸಿ, ಭಾಗ್ಯ ಬಿ.ಡಿ. ವಂದಿಸಿದರು. ಸಹ ಶಿಕ್ಷಕಿಯಾದಂತಹ ತಂಸೀನ ಹಾಗೂ ಕಲ್ಪ ನಿರೂಪಿಸಿದರು.